ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಮತ್ತೊಂದು ಕಡೆ ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ. ವಾಲ್ಮೀಕಿ ರಾಮಾಯಣ ಹಾಗೂ ರಮಾನಂದ ಸಾಗರ್ 'ರಾಮಾಯಣ' ಧಾರಾವಾಹಿ ಜೊತೆ ಹೋಲಿಸಿ ಸಾಕಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಭಾರತೀಯರು ರಾಮನ ಕಥೆಯನ್ನು ಕೇಳಿ ಓದಿ ತಿಳಿದುಕೊಂಡಿದ್ದಾರೆ. ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಕಣ್ಣಿಗೆ ಕಟ್ಟಿದಂತೆ ನೋಡಿದ್ದಾರೆ. ಮೂಲ ಕಥೆಯ ಸುತ್ತಾ ಇರುವ ಒಂದಷ್ಟು ಸನ್ನಿವೇಶಗಳನ್ನು ಈಗ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

'ರಾಮಾಯಣ ಚಿತ್ರದಲ್ಲಿ ಎಲ್ಲಾ ದೃಶ್ಯಗಳು ಮೊದಲ ನೋಟದಲ್ಲೇ ಅರ್ಥವಾಗುತ್ತದೆ. ಆದರೆ ಒಂದು ದೃಶ್ಯದಲ್ಲಿ ರಾವಣ ಗಾಣ ತಿರುಗಿಸುವಂತೆ ಹೀಗೆ ಚಕ್ರ ಸುತ್ತುವುದು, ಮೇಲೆ ಗ್ರಹಗಳ ರೀತಿಯ ಏನೋ ಸುತ್ತುವಂತೆ ಕಾಣುತ್ತದೆ. ಬಹುತೇಕರಿಗೆ ಯಾಕೆ ಈ ದೃಶ್ಯ ಎಂದು ಅರ್ಥವಾಗಿಲ್ಲ. ಕೆಲವರಿಗೆ ಈ ಬಗ್ಗೆ ಅರಿವಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಅಂದಹಾಗೆ ವಾಲ್ಮೀಕಿ ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಜನಪದ ಕಥೆಗಳಲ್ಲಿ ನವಗ್ರಹಗಳನ್ನು ಸಹ ರಾವಣ ತನ್ನ ವಶಕ್ಕೆ ತೆಗೆದುಕೊಂಡು ಬಂಧಿಸಿದ್ದ. ಇದೇ ವಿಚಾರವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ರಾವಣ ಹೀಗೆ ನವಗ್ರಹಗಳನ್ನು ತನಗೆ ಬೇಕಾದ ರೀತಿ ಹತೋಟಿಯಲ್ಲಿ ಇಟ್ಟುಕೊಂಡಿದ್ದ. ತಾನು ಬಯಸಿದಾಗ ನವಗ್ರಹಗಳು ಯಾವ ಸ್ಥಾನಗಳಲ್ಲಿ ಇರಬೇಕು ಎಂದು ನಿರ್ಧರಿಸುತ್ತಿದ್ದ. ಅದನ್ನೇ ಈ ದೃಶ್ಯದಲ್ಲಿ ತೋರಿಸಲಾಗಿದೆ. ರಾವಣ ತನ್ನ ಮಗ ಬಲಶಾಲಿ, ಅಜೇಯ ಹಾಗೂ ದೀರ್ಘಾಯುಷಿ ಆಗಿರಬೇಕೆಂದು ಬಯಸಿದ್ದ. ಪತ್ನಿ ಮಂಡೋದರಿ ಮಗ ಮೇಘನಾದನಿಗೆ ಜನ್ಮ ನೀಡುವ ವೇಳೆ ರಾವಣ ನವಗ್ರಹಗಳು ಶುಭ ಸ್ಥಾನದಲ್ಲಿರಬೇಕೆಂದು ಭಾವಿಸಿದ್ದ. ಜ್ಯೋತಿಷ್ಯ ಶಾಸ್ತ್ರವನ್ನು ಬಲ್ಲವನಾಗಿದ್ದರಿಂದ ಪತ್ನಿ ಹೆರಿಗೆ ಸಮಯದಲ್ಲಿ ನವಗ್ರಹಗಳನ್ನು ಮಂಗಳಕರವಾದ ಲಾಭ ಸ್ಥಾನ ಇರುವಂತೆ ಆದೇಶಿಸಿದ್ದನು.

ಎಲ್ಲಾ ಗ್ರಹಗಳು ರಾವಣನ ಆದೇಶಕ್ಕೆ ಬದ್ಧವಾಗಿದ್ರು ಶನಿ ಮಾತ್ರ ಅಂತಿಮ ಕ್ಷಣದಲ್ಲಿ ತನ್ನ ಸ್ಥಾನ ಕೊಂಚ ಬದಲಿಸಿದ್ದ. ಇದೇ ಕಾರಣಕ್ಕೆ ರಾವಣ ಮಗ ಮೇಘನಾದ ಮಹಾ ಪರಾಕ್ರಮಿಯೂ ಶಕ್ತಿಶಾಲಿಯೂ ಆಗಿದ್ದ. ಆದರೆ ಶನಿ ಸ್ಥಾನಪಲ್ಲಟದಿಂದ ಅಲ್ಪಾಯುಷಿ ಆಗುವಂತಾಯಿತು. ಮೇಘನಾದ ಜೀವಂತವಾಗಿ ಇದ್ದಿದ್ದರೆ ರಾವಣನ ವಿರುದ್ಧ ಶ್ರೀರಾಮ ಯುದ್ಧ ಗೆಲ್ಲುವುದು ಅಷ್ಟು ಸುಲಭವಾಗುತ್ತಿರಲಿಲ್ಲ ಎನ್ನಲಾಗುತ್ತದೆ.

ಸದ್ಯ 'ರಾಮಾಯಣ' ಚಿತ್ರದ ಮೊದಲ ಭಾಗ ಮಾತ್ರ ತೆರೆಗೆ ಬಂದಿದೆ. ಸೀತಾಪಹರಣ, ಶ್ರೀರಾಮನ ಶಪಥದೊಂದಿಗೆ ಮೊದಲ ಭಾಗ ಮುಕ್ತಾಯವಾಗಿದೆ. ಕೊನೆಯಲ್ಲಿ ಹನುಮಂತ ಹಾಗೂ ಮೇಘನಾದನ ಸಣ್ಣ ಝಲಕ್ ತೋರಿಸಿದ್ದಾರೆ. ಮೇಘನಾದ ಪಾತ್ರದಲ್ಲಿ ರಾಘವ್ ಜುಯಲ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಂದ ನಾನಿ ನಟನೆಯ 'ದಿ ಪ್ಯಾರಡೈಸ್' ಚಿತ್ರದಲ್ಲಿ ರಾಘವ್ ವಿಲನ್ ಆಗಿ ಅಬ್ಬರಿಸಿದ್ದರು. ಮತ್ತೊಂದು ಖಡಕ್ ಪಾತ್ರದಲ್ಲಿ ಮೂಲಕ 'ರಾಮಾಯಣ'-2 ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.