ಹೀರೋ ಎಂಟ್ರಿ ಆಗಿ ಶಿಳ್ಳೆ ಚಪ್ಪಾಳೆ ಹೊಡೆದು ಫೈಟು, ಸಾಂಗು ಎಲ್ಲಾ ಮುಗಿದು ಇನ್ನೇನು ಕಥೆ ಶುರುವಾಗಿರುತ್ತೆ, ಒಂದೊಳ್ಳೆ ಘಟ್ಟಕ್ಕೆ ಸಿನಿಮಾ ಬಂದಿರುತ್ತೆ, ಮುಂದೇನು ಮುಂದೇನು ಎನ್ನುವ ಕುತೂಹಲದ ತುತ್ತತುದಿಯಲ್ಲಿ ಇದ್ದಾಗಲೇ ಇದ್ದಕ್ಕಿದ್ದಂತೆ Interval ಬೋರ್ಡ್ ಬೀಳತ್ತೆ. ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಡ್ತಾರೆ, ಕತ್ತಲ ಸಿನಿಮಾ ಮಂದಿರದಲ್ಲಿ ಸಣ್ಣ ಸಣ್ಣ ಲೈಟ್‌ಗಳು ಬೆಳಗುತ್ತವೆ.

ಸೀಟಿನಲ್ಲಿ ಕುಳಿತಿದ್ದ ಪ್ರೇಕ್ಷಕರು ಕೆಲವರು ಇದ್ದಕ್ಕಿದ್ದಂತೆ ಏಳುತ್ತಾರೆ. ನಿಧಾನವಾಗಿ ಪಾಕ್‌ಕಾರ್ನ್, ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳಲು ಕೆಲವರು ಹೋದ್ರೆ, ಮತ್ತೆ ಕೆಲವರು ಶೌಚಾಲಯಗಳ ಕಡೆ ದೌಡಾಡಯಿಸುತ್ತಾರೆ. ಇನ್ನುಳಿದವರು ಸೀಟ್‌ನಲ್ಲೇ ಕುಳಿದು ಆಕಳಿಸುವುದು, ಮೊಬೈಲ್ ನೋಡುವುದು ಶುರು ಮಾಡುತ್ತಾರೆ. ಅರೇ ಇದ್ದಕ್ಕಿದ್ದಂತೆ ಸಿನಿಮಾದಲ್ಲಿ ವಿರಾಮ ಯಾಕೆ ? ಎಂದು ಕೆಲವರು ಭಾವಿಸಬಹುದು. ಇದರ ಹಿಂದೆ ದೊಡ್ಡ ಇತಿಹಾಸವಿದೆ. ಬರೀ ಪಾಪ್‌ಕಾರ್ನ್ ತಿನ್ನೋಕೆ, ಕೂಲ್ ಡ್ರಿಂಕ್ಸ್ ಕುಡಿಯೋಕೆ ಇಂಟರ್‌ವಲ್ ಕೊಡಲ್ಲ.

ಹಾಲಿವುಡ್ ಸಿನಿಮಾಗಳಲ್ಲಿ ಇಂಟರ್‌ವಲ್ ಇರಲ್ಲ. ಭಾರತೀಯ ಸಿನಿಮಾಗಳಲ್ಲಿ ಇದನ್ನು ನೋಡುತ್ತಿದ್ದೇವೆ. ಮಧ್ಯಂತರ ವಿರಾಮ ಇಲ್ಲದ ಸಿನಿಮಾಗಳೇ ಅಪರೂಪ. ನಿಮಗೆ ಗೊತ್ತಾ ಸಿನಿಮಾಗಳಲ್ಲಿ ಇಂಟರ್‌ವಲ್ ಕೊಡುವ ಸಂಪ್ರದಾಯಕ್ಕೆ ರಂಗಭೂಮಿಯ ಇತಿಹಾಸದ ನಂಟಿದೆ. ಮೊದಲು ಹಲವು ಗಂಟೆಗಳ ಕಾಲ ನಾಟಕ ಪ್ರದರ್ಶನಗಳು ನಡೀತಿತ್ತು. ಕಲಾವಿದರಿಗೆ ವಿಶ್ರಾಂತಿ ನೀಡಲು, ವೇದಿಕೆಯ ದೃಶ್ಯಕ್ಕೆ ಪರಿಕರಗಳನ್ನು ಬದಲಿಸಲು ಮಧ್ಯಂತರ ವಿರಾಮ ನೀಡಲಾಗುತ್ತಿತ್ತು. ಬಳಿಕ ಇದು ಸಿನಿಮಾ ಪ್ರಪಂಚಕ್ಕೂ ಪ್ರವೇಶಿಸಿತು ಎನ್ನುವ ವಾದ ಇದೆ.

ಆರಂಭದ ದಿನಗಳಲ್ಲಿ ಎರಡು ಗಂಟೆ, ಮೂರು ಗಂಟೆ ಅವಧಿ ಸಿನಿಮಾಗಳು ಇರಲಿಲ್ಲ. ಐದು ನಿಮಿಷ, ಹತ್ತು ಹದಿನೈದು ನಿಮಿಷ ಸಿನಿಮಾಗಳಿತ್ತು. ನಿಧಾನವಾಗಿ ಸಿನಿಮಾ ಕಾಲಾವಧಿ ಹೆಚ್ಚಾಯಿತು. ಹಾಗಾಗಿ ವಿರಾಮ ನೀಡಬೇಕಾದ ಅನಿವಾರ್ಯತೆ ಶುರುವಾಯಿತು. ಈಗಿನಂತೆ ಡಿಜಿಟಲ್ ಪ್ರೊಜೆಕ್ಟರ್‌ಗಳು ಇಲ್ಲದ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಫಿಲ್ಮ್ ರೀಲ್‌ಗಳ ಮೂಲಕ ಪ್ರದರ್ಶಿಸುತ್ತಿದ್ದರು. ಸಂಪೂರ್ಣ ಸಿನಿಮಾವನ್ನು ಒಂದೇ ರೀಲ್‌ನಲ್ಲಿ ತುಂಬಿಸಿಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಒಂದು ರೀಲ್ ಮುಗಿದ ಬಳಿಕ ಮತ್ತೊಂದು ರೀಲ್ ಜೋಡಿಸಬೇಕಿತ್ತು. ಇದಕ್ಕೆ ಕೊಂಚ ಸಮಯ ಹಿಡಿಸುತ್ತಿತ್ತು.

ರೀಲ್‌ಗಳನ್ನು ಬದಲಿಸುವುದು ಅಥವಾ ಪ್ರೊಜೆಕ್ಟರ್ ಸಿದ್ಧಪಡಿಸುವುದು ಸಿನಿಮಾ ಪ್ರದರ್ಶನದ ವೇಳೆ ತಾಂತ್ರಿಕ ಸವಾಲಾಗಿತ್ತು. ಎರಡು ಪ್ರೊಜೆಕ್ಟರ್‌ಗಳ ವ್ಯವಸ್ಥೆ ಇದ್ದ ಚಿತ್ರಮಂದಿರಗಳಲ್ಲಿ ಮುಂದಿನ ರೀಲ್‌ಗೆ ಅಡ್ಡಿಯಿಲ್ಲದೆ ಬದಲಾವಣೆ ಮಾಡಲು ಸಾಧ್ಯವಿತ್ತು. ಆದರೆ ಎಲ್ಲಾ ಕಡೆ ಅದು ಆಗುತ್ತಿರಲಿಲ್ಲ, ಅಂತಹ ಸಮಯದಲ್ಲಿ ಇಂಟರ್‌ವಲ್ ಎನ್ನುವುದು ಸಹಕಾರಿ ಆಗುತ್ತಿತ್ತು.

ಫಿಲ್ಮ್ ರೀಲ್‌ಗಳ ಜಾಗದಲ್ಲಿ ಡಿಜಿಟಲ್ ಪ್ರೊಜೆಕ್ಷನ್ ಬಂದಿದೆ. ರೀಲ್ ಬದಲಿಸುವ ಅಗತ್ಯವೇ ಇಲ್ಲ. ಆದರೂ ಯಾಕೆ ಸಿನಿಮಾಗಳಲ್ಲಿ ಇಂಟರ್‌ವಲ್ ಅಂದ್ರೆ ಅದು ನಮಗೆಲ್ಲಾ ಅಭ್ಯಾಸವಾಗಿ ಹೋಗಿದೆ. ಫಿಲ್ಮ್ ಮೇಕರ್ಸ್ ಕಥೆಯನ್ನು ಎರಡು ಭಾಗಗಳಾಗಿ ಹೇಳಲು ಒಳ್ಳೆ ಅವಕಾಶ ಸಿಕ್ಕಂತಾಗಿದೆ. ಕ್ಲೈಮ್ಯಾಕ್ಸ್ ರೀತಿಯಲ್ಲೇ ಇಂಟರ್‌ವಲ್ ಬ್ಲಾಕ್ ಇಟ್ಟು ಪ್ರೇಕ್ಷಕರನ್ನು ಕುತೂಹಲ ಹಿಡಿದಿಟ್ಟುಕೊಂಡು ಮುಂದೇನು ಎಂದು ಕಾಯುವಂತೆ ಮಾಡಲು ಸಹಕಾರಿ ಆಗಿದೆ.

ಚಿತ್ರಮಂದಿರದವರ ಆದಾಯಕ್ಕೂ ಇಂಟರ್‌ವಲ್ ಲಾಭದಾಯಕವಾಗಿದೆ. ವಿರಾಮದ ಸಮಯದಲ್ಲಿ ಪ್ರೇಕ್ಷಕರು ಪಾಪ್‌ಕಾರ್ನ್, ಸಮೋಸಾ, ತಂಪು ಪಾನೀಯ ಸೇರಿದಂತೆ ವಿವಿಧ ತಿಂಡಿಗಳನ್ನು ಖರೀದಿಸುತ್ತಾರೆ. ಇದರಿಂದ ಚಿತ್ರಮಂದಿರಗಳಿಗೆ ಹೆಚ್ಚುವರಿ ಆದಾಯ ಬರುತ್ತದೆ. ಈಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ ದರಕ್ಕಿಂತ ಈ ತಿಂಡಿ ತಿನಿಸುಗಳ ಖರ್ಚು ಹೆಚ್ಚಾಗಿರುವುದು ಗೊತ್ತೇಯಿದೆ. ವಿರಾಮ ಸಿಗುವುದರಿಂದ ಸಿನಿಮಾ ಪ್ರದರ್ಶನದ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಎದ್ದು ಶೌಚಾಲಯಕ್ಕೆ ಹೋಗುವುದು ತಪ್ಪುತ್ತದೆ. ಒಟ್ಟಾರೆ ಆರಂಭದ ದಿನಗಳಲ್ಲಿ ತಾಂತ್ರಿಕ ಅನುಕೂಲಕ್ಕಾಗಿ ಮಹತ್ವ ಪಡೆದಿದ್ದ ಇಂಟರ್‌ವಲ್, ಇಂದು ಭಾರತೀಯ ಸಿನಿಮಾ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ.