ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ 'ರಾಮಾಯಣ' ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಾಲ್ಮೀಕಿ ರಾಮಾಯಣವನ್ನು ತಿರುಚಿದ್ದಾರೆ ಎನ್ನುವುದು ಸಾಕಷ್ಟು ಜನರ ಆರೋಪ. ಮೂಲ ಕಥೆಯನ್ನು ಸಿನಿಮಾ ಮಾಡುವಾಗ ನಿರ್ದೇಶಕರು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಜಟಾಯು ಉಗುರನ್ನು ರಾವಣ ಕಿತ್ತುಕೊಳ್ಳುವ ದೃಶ್ಯ ಕೂಡ ಒಂದು.

ಸೀತಾಪಹರಣದ ವೇಳೆ ಜಟಾಯು ರಕ್ಷಿಸಲು ಬರುತ್ತದೆ. ರಾವಣನ ಎದುರು ಶಕ್ತಿ ಮೀರಿ ಹೋರಾಡುತ್ತದೆ. ಅವನನ್ನು ಗಂಭೀರವಾಗಿ ಘಾಸಿಗೊಳಿಸುತ್ತದೆ. ಆದರೆ ಬ್ರಹ್ಮನಿಂದ ವರ ಪಡೆದ ದಶಕಂಠನನ್ನು ಜಟಾಯು ಏನು ಮಾಡಲು ಸಾಧ್ಯವಾಗುವುದಿಲ್ಲ. ತನ್ನ ತೀಕ್ಷ್ಣವಾದ ಖಡ್ಗದಿಂದ ಅದರ ರೆಕ್ಕೆಗಳನ್ನು ಕತ್ತರಿಸಿ, ಕಾಲು, ಪಾದದ ಮೇಲೆ ಕೂಡ ಹಲ್ಲೆ ಮಾಡುತ್ತಾನೆ. ಇದನ್ನೇ ಕೊಂಚ ವಿಸ್ತರಿಸಿ ಸಿನಿಮಾದಲ್ಲಿ ತೋರಿಸಲಾಗಿದೆ. "ಜಟಾಯು ಉಗುರನ್ನು ರಾವಣ ಕಿತ್ತುಕೊಂಡಿದ್ದೇಕೆ ?" ಎನ್ನುವ ಪ್ರಶ್ನೆಯನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಕೇಳ್ತಿದ್ದಾರೆ.

ನಿತೇಶ್ ತಿವಾರಿ ಸಿನಿಮಾವನ್ನು ರೋಚಕವಾಗಿ ತೋರಿಸಲು ಸಿನಿಮ್ಯಾಟಿಕ್ ಲಿಬರ್ಟಿ ತೆಗೆದುಕೊಂಡಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಜಟಾಯು ಉಗುರನ್ನು ರಾವಣ ಕಿತ್ತುಕೊಂಡ ಎನ್ನುವ ಯಾವುದೇ ಉಲ್ಲೇಖ ಇಲ್ಲ. ರಾವಣನ ಹಠ, ಅಹಂಕಾರ, ಸಿಟ್ಟನ್ನು ತೋರಿಸಲು ಇಂತಾದೊಂದು ದೃಶ್ಯವನ್ನು ಕಟ್ಟಿಕೊಡಲಾಗಿದೆ. ಅದು ನೋಡುಗರಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಒಂದು ಹಂತಕ್ಕೆ ಜಟಾಯು ತನ್ನ ಉಗುರಿನಿಂದ ರಾವಣನ ರುಂಡ ಮುಂಡ ಬೇರ್ಪಡಿಸಿಬಿಡುತ್ತದೆ. ಕುಪಿತನಾದ ರಾವಣ ಕೊನೆಗೆ ಆ ಉಗುರನ್ನು ಕಿತ್ತುಕೊಂಡು, ತನಗಾದ ಆ ಅವಮಾನದ ಕುರುಹಾಗಿ ಅದನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ತೋರಿಸಲಾಗಿದೆ.

'ರಾಮಾಯಣ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ರಾವಣ ಅಪಹರಿಸಿದ ಎನ್ನುವಂತೆ ತೋರಿಸಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾಪಹರಣಕ್ಕೆ ರಾವಣ ಪುಷ್ಪಕ ವಿಮಾನ ಬಳಸಿದ ಉಲ್ಲೇಖ ಕೂಡ ಇಲ್ಲ. ಲಂಕೆಯಲ್ಲಿ ರಾವಣನ ಬಳಿ ಪುಷ್ಪಕ ವಿಮಾನ ಇತ್ತು. ಆದರೆ ಸೀತೆಯನ್ನು ಅಪಹರಿಸಲು ಬೇರೊಂದು ರಥ ಮಾದರಿಯ ವಿಮಾನ ಬಳಕೆ ಮಾಡಿದ್ದ ಎಂದು ಕೆಲವರು ವಾದಿಸುತ್ತಿದ್ದಾರೆ.

ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಸಿ ಪುಷ್ಪಕ ವಿಮಾನವನ್ನು ಜಟಾಯು ಹಾಗೂ ರಾವಣ ಯುದ್ಧವನ್ನು ಸೊಗಸಾಗಿ ತೋರಿಸಿದ್ದಾರೆ. ಆ ದೃಶ್ಯ ನೋಡಲು ಕಣ್ಣಿಗೆ ಹಬ್ಬ ಎನ್ನುವಂತಿದೆ. ತ್ರೀಡಿಯಲ್ಲಿ ದೃಶ್ಯ ಮತ್ತಷ್ಟು ಮಜಾ ಕೊಡುತ್ತದೆ. ಪುಷ್ಪಕ ವಿಮಾನ ಹಾಗೂ ಜಟಾಯು ಗ್ರಾಫಿಕ್ಸ್ ಅದ್ಭುತವಾಗಿದೆ. ಪಕ್ಷಿಯ ಕಣ್ಣು, ಕೊಕ್ಕು, ಪುಕ್ಕ ಪ್ರತಿಯೊಂದನ್ನು ಬಹಳ ಸೂಕ್ಷ್ಮವಾಗಿ ತೋರಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಕೂಡ ಜಟಾಯು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತದೆ.