ಯಾವುದೇ ವಿವಾದಗಳಿಲ್ಲದೇ 'ರಾಮಾಯಣ' ಚಿತ್ರವನ್ನು ಚಿತ್ರತಂಡ ಗೆಲ್ಲಿಸಿಕೊಂಡಿದೆ. ಮೂಲ ರಾಮಾಯಣಕ್ಕಿಂತ ಒಂದಷ್ಟು ಬದಲಾವಣೆ ಮಾಡಿಕೊಂಡು ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಇದು ಒಂದು ಕಾರಣ ಅಂದರೆ ತಪ್ಪಾಗಲ್ಲ.
ವಾಲ್ಮೀಕಿ 'ರಾಮಾಯಣ'ದ ಜೊತೆಗೆ ಬೇರೆ ಬೇರೆ ಆವೃತ್ತಿಯ 'ರಾಮಾಯಣ' ಕಾವ್ಯಗಳಿಂದಲೇ ಪ್ರೇರಣೆಗೊಂಡು ಸಿನಿಮಾ ಮಾಡಿರುವುದಾಗಿ ಆರಂಭದಲ್ಲೇ ಸ್ಪಷ್ಟೀಕರಣ ಕೊಟ್ಟಿದೆ ಚಿತ್ರತಂಡ. ರಾವಣ ಪಾತ್ರವನ್ನು ಬಹಳ ವಿಜೃಂಭಿಸಿ ತೋರಿಸಿದ್ದಾರೆ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ. ರಾವಣನನ್ನು ಒಳ್ಳೆಯವನಂತೆ ಬಿಂಬಿಸಲಾಗಿದೆ. ಸೀತಾಪಹರಣ ಬಿಟ್ಟು ಆತ ಯಾವುದೇ ತಪ್ಪು ಮಾಡಲಿಲ್ಲ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆ ವಾದದಲ್ಲಿ ಕೂಡ ನಿಜ ಇದೆ.
ಸಿನಿಮಾದಲ್ಲಿ ರಾವಣನಿಗೆ ಹೆಚ್ಚು ಅವಕಾಶ ಸಿಕ್ಕಿದೆ ಎನ್ನುವುದು ಸುಳ್ಳು. ಆರಂಭದಲ್ಲಿ ದಶಕಂಠನ ಆರ್ಭಟ ಜೋರಾಗಿದೆ. ರಾಮನ ದೃಶ್ಯಗಳು ಶುರುವಾದ ಬಳಿಕ ರಣ್ಬೀರ್ ಕಪೂರ್ ಮಿಂಚುತ್ತಾರೆ. ರಾಮ ಪಾತ್ರಕ್ಕೂ ಹೆಚ್ಚು ಅವಕಾಶ ಸಿಕ್ಕಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್ ಆಗಿರುವುದರಿಂದ ರಾವಣ ಹಾಗೂ ಜಟಾಯು ಯುದ್ಧ ಹೈಲೆಟ್ ಆಗಿದೆ ಅಷ್ಟೆ. ಇನ್ನು ರಾವಣ ಹಾಗೂ ವಿದ್ಯುಜ್ಜಿಹ್ವ ಯುದ್ಧದ ಸನ್ನಿವೇಶ ಅತಿಯಾಯ್ತು. ಮೂಲ 'ರಾಮಾಯಣ'ದಲ್ಲಿ ಕಾಲಕೇಯರ ನಡುವಿನ ಸಂಘರ್ಷದಲ್ಲಿ ರಾವಣ ತನಗೆ ಅರಿವಿಲ್ಲದೇ ವಿದ್ಯುಜ್ಜಿಹ್ವನನ್ನು ಕೊಲ್ಲುತ್ತಾನೆ. ಆದರೆ ಚಿತ್ರದಲ್ಲಿ ಅದನ್ನು ಬೇರೆ ರೀತಿ ತೋರಿಸಲಾಗಿದೆ.
ಸೀತಾಪಹರಣದ ದೃಶ್ಯದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ ಪುಷ್ಪಕ ವಿಮಾನದ ಬದಲು ಬೇರೊಂದು ಮಾಯಾವಿ ರಥದ ವಿಮಾನದಲ್ಲಿ ಆಕೆಯನ್ನು ರಾವಣ ಅಪಹರಣ ಮಾಡುತ್ತಾನೆ. ಮುಖ್ಯವಾಗಿ ಸೀತೆ ಲಕ್ಷ್ಮಣ ರೇಖೆ ದಾಟುತ್ತಿದ್ದಂತೆ ಬಲಾತ್ಕಾರವಾಗಿ ಆಕೆಯನ್ನು ಎತ್ತಿಕೊಂಡು ವಿಮಾನದಲ್ಲಿ ಕೂರಿಸಿಕೊಂಡು ಆಕಾಶ ಮಾರ್ಗವಾಗಿ ಹೊರಡುತ್ತಾನೆ. ಆ ದೃಶ್ಯವನ್ನೇ ಚಿತ್ರದಲ್ಲಿ ಕತ್ತರಿಸಲಾಗಿದೆ. ಅದಕ್ಕೆ ಕಾರಣ ಯಶ್ ಹಾಗೂ ಸಾಯಿ ಪಲ್ಲವಿ ಇಮೇಜ್.
ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವುದನ್ನೇ ಸಾಕಷ್ಟು ಜನರಿಗೆ ಊಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸ್ಟಾರ್ ನಟ ವಿಲನ್ ಆಗಿ ನಟಿಸೋದು ಹೇಗೆ ಎಂದುಕೊಂಡಿದ್ದರು. ಸ್ವತಃ ಯಶ್ ಅವರಿಗೆ ಈ ಬಗ್ಗೆ ಕೊಂಚ ಅಳುಕಿತ್ತು. ನಮ್ಮ ಅಭಿಮಾನಿಗಳು ಏನು ಅಂದುಕೊಳ್ಳುತ್ತಾರೆ ಎನ್ನುವ ಭಯ ಇತ್ತು. ಇದೇ ಪ್ರಶ್ನೆಯನ್ನು ಮಗ ಯಥರ್ವ್ ಕೇಳಿದ್ದ. ಜಗಳ ಮಾಡ್ದ ಎಂದು ಇತ್ತೀಚೆಗೆ ಸ್ವತಃ ಯಶ್ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಾವಣ ಪಾತ್ರವನ್ನು ಬಹಳ ತಿದ್ದಿತೀಡಿ ಸಿನಿಮಾದಲ್ಲಿ ತೋರಿಸಲಾಗಿದೆ.
ತಂಗಿ ಶೂರ್ಪನಖಿಯ ಮೂಗು ಕುಯ್ದು ಅವಮಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ಮಾತ್ರ ಸೀತೆಯನ್ನು ರಾವಣ ಅಪಹರಣ ಮಾಡಲಿಲ್ಲ. ಆಕೆಯ ಮೇಲೆ ಮೋಹಗೊಂಡಿದ್ದನು. ಆ ವಿಚಾರದ ಬಗ್ಗೆ ಕೂಡ ಚಿತ್ರದಲ್ಲಿ ಪ್ರಸ್ತಾಪಿಸಿಲ್ಲ. ಕಾರಣ ಇದೇ ಯಶ್ ಇಮೇಜ್.. ವಾಲ್ಮೀಕಿ ರಾಮಾಯಣದ ಅರಣ್ಯಕಾಂಡದಲ್ಲಿ (ಸರ್ಗ 49, ಶ್ಲೋಕ 17) ಸೀತಾಪಹರಣದ ಬಗ್ಗೆ ಹೀಗೆ ಹೇಳಿದ್ದಾರೆ.
"ವಾಮೇನ ಸೀತಾಂ ಪದ್ಮಾಕ್ಷೀಂ ಮೂರ್ಧಜೇಷು ಕರೇಣ ಸಃ | ಊರ್ವೋಸ್ತು ದಕ್ಷಿಣೇನೈವ ಪರಿಜಗ್ರಾಹ ಪಾಣಿನಾ".. ಅಂದ್ರೆ "ಕಮಲದಂತಹ ಕಣ್ಣುಗಳುಳ್ಳ ಸೀತೆಯ ನೆತ್ತಿಯ ಕೂದಲನ್ನು ರಾವಣ ತನ್ನ ಎಡಗೈಯಿಂದ ಹಿಡಿದನು. ತನ್ನ ಬಲಗೈಯಿಂದ ಆಕೆಯ ತೊಡೆಗಳ ಭಾಗವನ್ನು ಹಿಡಿದು ಮೇಲಕ್ಕೆ ಎತ್ತಿಕೊಂಡನು. ರಾಮ, ಲಕ್ಷ್ಮಣರನ್ನು ಕೂಗಿ ಒದ್ದಾಡುತ್ತಿದ್ದರೂ ಆಕೆಯನ್ನು ಬಲವಂತವಾಗಿ ರಾವಣ ರಥ ಏರಿ ಹೊರಟನು ಎಂದು ವಿವರಿಸಲಾಗಿದೆ. ಈಗ ಯೋಚಿಸಿ ಯಶ್ ಹಾಗೂ ಸಾಯಿ ಪಲ್ಲವಿ ಇಂತಹ ದೃಶ್ಯದಲ್ಲಿ ನಟಿಸಿದ್ದರೆ ಏನಾಗುತ್ತಿತ್ತು ? ಇದನ್ನು ಕೆಲವರಿಗೆ ಊಹಿಸಿಕೊಳ್ಳಲು ಕಷ್ಟವಾಗಬಹುದು.
ಇದೇ ಕಾರಣಕ್ಕೆ ಚಿತ್ರದಲ್ಲಿ ಲಕ್ಷ್ಮಣ ರೇಖೆಯನ್ನು ಸೀತೆ ದಾಟುತ್ತಿದ್ದಂತೆ ದೃಶ್ಯ ಕಟ್ ಆಗುತ್ತೆ. ಬಳಿಕ ದಿಢೀರನೆ ಪುಷ್ಪಕ ವಿಮಾನದಲ್ಲಿ ಆಕೆಯನ್ನು ರಾವಣ ಕರೆದುಕೊಂಡು ಹೋಗುವಂತೆ ಜಟಾಯು ಬಂದು ಹೋರಾಡುವಂತೆ ತೋರಿಸಲಾಗಿದೆ. ರಮಾನಂದ ಸಾಗರ್ 'ರಾಮಾಯಣ' ಧಾರಾವಾಹಿಯಲ್ಲಿ ಕೂಡ ಸೀತೆಯನ್ನು ರಾವಣ ಎತ್ತಿ ರಥದಲ್ಲಿ ಕೂರಿಸುವಂತೆ ಚಿತ್ರಿಸಲಾಗಿತ್ತು. ಆದರೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಆ ದೃಶ್ಯಕ್ಕೆ ಸಂಪೂರ್ಣವಾಗಿ ಕತ್ತರಿ ಬಿದ್ದಿದೆ.
RAVAN VS JATAYU WITH HANS ZIMMER’S SCORE#Ramayana #HansZimmer #Yash #FirstFlight pic.twitter.com/JPEnc5qOb2
— aCommonMan (@DeeTank1212) November 12, 2026