ರವಿಚಂದ್ರನ್ ತಂದೆ ಕನ್ನಡ ಖ್ಯಾತ ನಿರ್ಮಾಪಕ ಎನ್. ವೀರಾಸ್ವಾಮಿ. ಅವತ್ತಿನ ಕಾಲಕ್ಕೆ ದುಬಾರಿ ಸಿನಿಮಾಗಳನ್ನು ನಿರ್ಮಿಸಿದವರು. ಕನ್ನಡ ಮಾತ್ರವಲ್ಲದೇ ಒಂದು ತಮಿಳು ಹಾಗೂ ಒಂದು ಹಿಂದಿ ಚಿತ್ರವನ್ನು ಸಹ ಅವರು ತಯಾರಿಸಿದ್ದರು. ತಮಿಳಿನ 'ಪಡಿಕ್ಕಾದವನ್' ಚಿತ್ರದಲ್ಲಿ ರಜನಿಕಾಂತ್, ಶಿವಾಜಿ ಹಾಗೂ ಅಂಬಿಕಾ ನಟಿಸಿದ್ದರು.

ಇದೇ ಚಿತ್ರದ ಸಮಯದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆದಿತ್ತು. ವೀರಾಸ್ವಾಮಿ ಸಿನಿಮಾ ಪ್ರೀತಿ, ಅವರ ಜಡ್ಜ್‌ಮೆಂಟ್ ಮೇಲೆ ಎಷ್ಟು ನಂಬಿಕೆ ಇತ್ತು, ಅದು ಎಷ್ಟರಮಟ್ಟಿಗೆ ನಿಜವಾಗುತ್ತಿತ್ತು ಎನ್ನುವ ಈ ಘಟನೆಯಿಂದ ಗೊತ್ತಾಗುತ್ತದೆ. ವೀರಾಸ್ವಾಮಿ ಅವರನ್ನು ತಂದೆಯ ರೀತಿ ರಜನಿಕಾಂತ್ ನೋಡುತ್ತಿದ್ದರು. ಅಪ್ಪ ಎಂದೇ ಕರೆಯುತ್ತಿದ್ದರು. ಅದೊಂದು ದಿನ ರಜನಿಕಾಂತ್ ಏಕಾಏಕಿ ಚೆನ್ನೈನಿಂದ ಬೆಂಗಳೂರಿನ ರಾರಾಜಿನಗರದಲ್ಲಿರುವ ವೀರಾಸ್ವಾಮಿ ಮನೆಗೆ ಬಂದು ಕ್ಷಮೆ ಕೇಳಿದ್ದರಂತೆ.

ರವಿಚಂದ್ರನ್ ಕುಟುಂಬದ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ನಟ, ನಿರ್ದೇಶಕ ರಘುರಾಮ್ ಈ ಘಟನೆಯನ್ನು ವಿವರಿಸಿದ್ದಾರೆ. ಗ್ಲೋಬಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. 'ಪಡಿಕ್ಕಾದವನ್' ಚಿತ್ರದಲ್ಲಿ 'ಊರು ತೆರಿಂಜಿಕಿಟ್ಟೆ ಉಳಗಂ ಪುರಿಂಜಿಕಿಟ್ಟೆನ್ ಕಣ್ಮಣಿ' ಎಂಬ ಹಾಡಿದೆ. ಇಳಯರಾಜಾ ಸಂಗೀತದಲ್ಲಿ ವೈರಮುತ್ತು ಸಾಹಿತ್ಯ ಬರೆದ ಈ ಹಾಡನ್ನು ಜೇಸುದಾಸ್ ಹಾಡಿದ್ದರು. ಸ್ವತಃ ಚಿತ್ರದ ನಿರ್ಮಾಪಕ ವೀರಾಸ್ವಾಮಿ ಮುಂದೆ ಕೂತು ಇಷ್ಟಪಟ್ಟು ಈ ಹಾಡನ್ನು ಬರೆಸಿದ್ದರು.

ರಜನಿಕಾಂತ್ ಕುಡಿದ ಮತ್ತಿನಲ್ಲಿ ಅಂಬಿಕಾ ಹೆಗಲ ಮೇಲೆ ಕೈ ಹಾಕಿಕೊಂಡು ರಸ್ತೆಯಲ್ಲಿ ನಡೆಯುತ್ತಾ ಹಾಡುವ ಹಾಡಿದು. ಇದೇ ರೀತಿ ಚಿತ್ರೀಕರಣ ಮಾಡಬೇಕು ಎಂದು ಹೇಳಿ ಮಾಡಿಸಿದ್ದರು. ಆದರೆ ಚಿತ್ರತಂಡದ ಕೆಲವರಿಗೆ ಇದು ಇಷ್ಟವಿರಲಿಲ್ಲ. ರಜನಿಕಾಂತ್ ಅವತ್ತಿಗೆ ಮಾಸ್ ಹೀರೊ ಇಮೇಜ್ ಬೆಳೆಸಿಕೊಂಡಿದ್ದರು. ಅವರು ಹೀಗೆ ಪ್ಯಾಥೋ ಹಾಡು ಹಾಡುತ್ತಾ ರಸ್ತೆಯಲ್ಲಿ ತೂರಾಡುತ್ತಾ ಓಡಾಡುವುದನ್ನು ಯಾರು ನೋಡ್ತಾರೆ. ಇದೇ ಚಿತ್ರಕ್ಕೆ ಪೆಟ್ಟುಕೊಡಬಹುದು ಎಂದು ಭಾವಿಸಿದ್ದರಂತೆ. ಸ್ವತಃ ರಜನಿಕಾಂತ್ ಕೂಡ ಒಲ್ಲದ ಮನಸ್ಸಿನಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಂತೆ.

ಸ್ವತಃ ರಜನಿಕಾಂತ್ ಕೂಡ ವೀರಸ್ವಾಮಿ ಬಳಿ "ಇಲ್ಲಾ ಅಪ್ಪಾ.. ನನ್ನನ್ನು ಜನ ಈ ರೀತಿ ನೋಡಲು ಇಷ್ಟಪಡಲ್ಲ. ಬೇಡ" ಎಂದರಂತೆ. ಒಂದೇ ರಾತ್ರಿಯಲ್ಲಿ ಹಾಡಿನ ಚಿತ್ರೀಕರಣ ಮುಗಿತ್ತು. ಬಳಿಕ ವಿತರಕರು ಬಂದು ಸಿನಿಮಾ ನೋಡಿದ್ದರು. ಎಲ್ಲಾ ಸರಿ ಈ ಹಾಡು ಲ್ಯಾಗ್ ಆಗ್ತಿದೆ, ಬೇಡ ಎಂದರಂತೆ..ಚಿತ್ರತಂಡ, ರಜನಿಕಾಂತ್ ಹೇಳಿದ್ದ ಮಾತನ್ನೇ ವಿತರಕರು ಹೇಳಿದ್ರಂತೆ.. ಆಗ ವೀರಾಸ್ವಾಮಿ ಅವರು ಒಂದೇ ಮಾತು ಹೇಳಿದ್ದು "ಈ ಹಾಡು ನಾನು ತೆಗೆಯಲ್ಲ. ಈ ಹಾಡಿನಿಂದ್ಲೇ ಸಿನಿಮಾ ಸೋತ್ರೆ, ನಿಮ್ಮ ಹಣ ನಾನು ವಾಪಸ್ ಕೊಡ್ತಿನಿ, ಹೇಳ್ತೀನಿ ಕೇಳಿ ಈ ಹಾಡು ರಜನಿಕಾಂತ್ ಅವರನ್ನು ಮತ್ತೊಂದು ಹಂತಕ್ಕೆ ಕರ್ಕೊಂಡ್ ಹೋಗುತ್ತೆ" ಎಂದು ಹೇಳಿದ್ದರಂತೆ.

ಕೊನೆಗೆ ವೀರಾಸ್ವಾಮಿ ಹೇಳಿದ್ದ ಮಾತು ನಿಜವಾಗಿತ್ತು. 'ಪಡಿಕ್ಕಾದವನ್' ಸಿನಿಮಾ ತೆರೆಕಂಡು ಅದ್ಭುತ ಪ್ರದರ್ಶನ ಕಂಡಿತ್ತು. ಮೊದಲ ದಿನ ಬೆಳಗಿನ ಶೋನಲ್ಲಿ ಅಭಿಮಾನಿಗಳು ಬೇಡಿಕೆ ಇಟ್ಟು ಪದೇ ಪದೇ ಹಾಡು ಹಾಕಲು ಹೇಳಿ ಹಾಡಿ ಕುಣಿದು ಸಂಭ್ರಮಿಸಿದ್ದರು. ಮಧ್ಯಾಹ್ನದ ವೇಳೆಗೆ ರಜನಿಕಾಂತ್ ವಿಮಾನ ಏರಿ ಬೆಂಗಳೂರಿಗೆ ಬಂದಿದ್ದರು. ವೀರಾಸ್ವಾಮಿ ಅವರ ಮನೆಗೆ ಹೋಗಿ "ಅಪ್ಪಾ, ಸ್ವಾರಿ..ಕ್ಷಮಿಸಿ..ನಿಮ್ಮ ಜಡ್ಜ್‌ಮೆಂಟ್ ಗ್ರೇಟ್.. ಅದ್ರ ಬಗ್ಗೆ ಮಾತನಾಡುವಂತಿಲ್ಲ" ಎಂದುಬಿಟ್ಟಿದ್ದರು ಎಂದು ರಘುರಾಮ್ ವಿವರಿಸಿದ್ದಾರೆ.