ಚೆನ್ನೈನಲ್ಲಿ ನಿನ್ನೆ(ನವೆಂಬರ್ 21) ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ದಂಪತಿ ಮದುರೆ ರಿಸೆಪ್ಷನ್ ಪಾರ್ಟಿ ನೆರವೇರಿದೆ. ನವೆಂಬರ್ 11ರಂದು ಗ್ರೀಸ್ ದೇಶದಲ್ಲಿ ಮದುವೆಯಾಗಿದ್ದ ಜೋಡಿ ರಿಸೆಪ್ಷನ್ ಪಾರ್ಟಿ ಮಾಡಿ ಸಂಭ್ರಮಿಸಿದೆ. ಈ ಅದ್ಧೂರಿ ಸಮಾರಂಭದಲ್ಲಿ ಸಿನಿಮಾ, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು. ಆದರೆ ಅನಿರುದ್ಧ್ ಗಾಡ್ ಫಾದರ್ ನಟ ಧನುಷ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ರಜನಿಕಾಂತ್ ಹಾಗೂ ಅನಿರುದ್ಧ್ ಸಂಬಂಧಿಕರು. ರಜನಿಕಾಂತ್ ಮಗಳನ್ನು ಧನುಷ್ ಮದುವೆ ಆಗಿದ್ದರು. 18 ವರ್ಷಗಳ ಬಳಿಕ ಇಬ್ಬರು ಡಿವೋರ್ಸ್ ಪಡೆದು ದೂರಾಗಿದ್ದಾರೆ. ಹಾಗಾಗಿ ಅನಿರುದ್ದ್ ಜೊತೆಗೂ ಧನುಷ್ ಅಂತರ ಕಾಯ್ದುಕೊಳ್ಳುವಂತಾಗಿದೆ. ವಿದೇಶಕ್ಕೆ ಹೋಗಿ ಓದಬೇಕಿದ್ದ ಅನಿರುದ್ದ್ ಪ್ರತಿಭೆ ಗುರ್ತಿಸಿ ಆತನನ್ನು ಚಿತ್ರರಂಗಕ್ಕೆ ಕರೆತಂದಿದ್ದು ಇದೇ ಧನುಷ್. ಇದರಲ್ಲಿ ಎರಡು ಮಾತಿಲ್ಲ. ಸ್ವತಃ ಧನುಷ್ ಮಾಜಿ ಪತ್ನಿ ಐಶ್ವರ್ಯ ಹಾಗೂ ಅನಿರುದ್ದ್ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಈಗ ಧನುಷ್ ಸಂಪೂರ್ಣವಾಗಿ ರಜನಿಕಾಂತ್ ಫ್ಯಾಮಿಲಿ ಜೊತೆ ಸಂಬಂಧ ಕಡಿದುಕೊಂಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಅನಿರುದ್ಧ್ ವಿಚಾರದಲ್ಲಿ ಏನಾಯ್ತು ಎನ್ನುವ ಅನುಮಾನ ಮೂಡಿದೆ. ತಮ್ಮ ಮೊದಲ ಹಾಡು ಬಿಡುಗಡೆಯಾಗಿ 15 ವರ್ಷ ಕಳೀತು ಎಂದು ಅನಿರುದ್ದ್ ಇತ್ತೀಚೆಗೆ ಸುದೀರ್ಘ ಪತ್ರ ಬರೆದಿದ್ದರು. ಅದರಲ್ಲಿ ಕೂಡ ಧನುಷ್ ಹೆಸರು ಪ್ರಸ್ತಾಪ ಮಾಡಿರಲಿಲ್ಲ. ಇದನ್ನು ನೋಡಿ ಧನುಷ್ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ಮದುವೆಗೂ ಆಮಂತ್ರಣ ಕೊಡಲಿಲ್ವಾ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ರಜನಿಕಾಂತ್ ಫ್ಯಾಮಿಲಿ ಭಾಗಿ ಆಗುತ್ತದೆ ಎನ್ನುವ ಕಾರಣಕ್ಕೆ ಧನುಷ್ ಅವರನ್ನು ತಮ್ಮ ಮದುವೆ ಸಮಾರಂಭದಿಂದ ಅನಿರುದ್ಧ್ ದೂರ ಇಟ್ಟಿದ್ದಾರಾ ಎನ್ನುವುದು ಅರ್ಥವಾಗ್ತಿಲ್ಲ. ಗ್ರೀಸ್‌ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಧನುಷ್ ಹಾಜರಾಗಿರಲಿಲ್ಲ. 'O.M' ಸಿನಿಮಾ ಬಿಡುಗಡೆ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದರು. ಹಾಗಾಗಿ ಭಾಗಿ ಆಗಲಿಲ್ಲ, ಚೆನ್ನೈನಲ್ಲಿ ನಡೆಯುವ ರಿಸೆಪ್ಷನ್‌ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕೆಲವರು ಭಾವಿಸಿದ್ದರು. ಈಗ ಅದು ಸುಳ್ಳಾಗಿದೆ. ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಧನುಷ್ ಮಾತ್ರ ಕಾಣಲೇ ಇಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಅವರ ಗೈರು ಸ್ಪಷ್ಟವಾಗುತ್ತಿದೆ.

ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ತ್ರೀ' ಚಿತ್ರದಲ್ಲಿ ಧನುಷ್ ನಟಿಸಿದ್ದರು. ತಾವೇ ಸಿನಿಮಾ ನಿರ್ಮಿಸಿದ್ದರು. ಆ ಚಿತ್ರಕ್ಕೆ ಅನಿರುದ್ಧ್‌ಗೆ ಮೊದಲಿಗೆ ಅವಕಾಶ ಕೊಟ್ಟಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ 'ವೈ ದಿಸ್ ಕೊಲವೆರಿ' ಸಾಂಗ್ ದಾಖಲೆ ಬರೆದಿತ್ತು. ಆ ಮೂಲಕ ಅನಿರುದ್ಧ್ ಸಂಚಲನ ಸೃಷ್ಟಿಸಿದ್ದರು. ಬಳಿಕ ಹಲವು ಹಿಟ್ ಸಿನಿಮಾಗಳಿಗೆ ಅವರು ಮ್ಯೂಸಿಕ್ ಕಂಪೋಸ್ ಮಾಡಿದರು. ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿಕೊಂಡಿದ್ದಾರೆ.