ಸಂಗೀತ ನಿರ್ದೇಶ ಅನಿರುದ್ಧ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಸಿಇಒ ಹಾಗೂ ಸಹ-ಮಾಲಕಿ ಕಾವ್ಯಾ ಮಾರನ್ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಗ್ರೀಸ್ ದೇಶದಲ್ಲಿ ಇಬ್ಬರ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಆಗಿತ್ತು. ರಜನಿಕಾಂತ್ ಕುಟುಂಬ ಸೇರಿದಂತೆ ಕೆಲವೇ ಆಪ್ತರು ಕಲ್ಯಾಣೋತ್ಸವದಲ್ಲಿ ಭಾಗಿ ಆಗಿದ್ದರು. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಿಲ್ಲದೆ ಆತ್ಮಗೌರವ ಮದುವೆ ಪದ್ಧತಿಯಲ್ಲಿ ಇಬ್ಬರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ದಶಕಗಳಿಂದ ತಮಿಳುನಾಡಿನಲ್ಲಿ ಆತ್ಮಗೌರವ ಮದುವೆ ಪದ್ಧತಿ ಚಾಲ್ತಿಯಲ್ಲಿದೆ. ಸಾಕಷ್ಟು ಜನ ಇದೇ ರೀತಿ ಅಲ್ಲಿ ಹೊಸಬಾಳಿಗೆ ಕಾಲಿಡುತ್ತಾರೆ. ಪುರೋಹಿತರು, ವೇದ ಮಂತ್ರಗಳು, ಪವಿತ್ರ ಅಗ್ನಿ (ಹೋಮ) ಇಲ್ಲದೇ ಸರಳವಾಗಿ ಮದುವೆ ಆಗುವ ಪದ್ಧತಿ ಇದಾಗಿದೆ. ಕಳೆದೆರಡು ದಿನಗಳಿಂದ ಅನಿರುದ್ಧ್ ಹಾಗೂ ಕಾವ್ಯಾ ಮದುವೆ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. ಆದರೆ ವಧು-ವರರು ಅಗ್ನಿಕುಂಡದ ಮುಂದೆ ಕುಳಿತಿರುವ, ಮಾಂಗಲ್ಯಧಾರಣೆ ಮಾಡುವಂತ ಯಾವುದೇ ಫೋಟೊ, ವೀಡಿಯೋ ಸಿಕ್ಕಿರಲಿಲ್ಲ. ಕಾವ್ಯ ಕೊರಳಿಗೆ ಅನಿರುದ್ಧ್ ಸರವನ್ನು ಹಾಕುವಂತಹ ಫೋಟೊವೊಂದು ಮಾತ್ರ ವೈರಲ್ ಆಗ್ತಿದೆ.
ಕೋಟಿ ಕೋಟಿ ಸುರಿದು ಮದುವೆ ಮಾಡಿಕೊಳ್ಳುವವರು ಹೀಗೆ ಕೊರಳಿಗೆ ಚೈನ್ ಹಾಕುವುದು ಅಷ್ಟೇನಾ? ಯಾವುದೇ ಧಾರ್ಮಿಕ ಸಂಪ್ರದಾಯಗಳಿಲ್ಲೇ ಮದುವೆ ಆಗಿಬಿಟ್ರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರು. ಇದೀಗ ಇಬ್ಬರ ಮದುವೆ ಬಗ್ಗೆ ಡಿಎಂಕೆ) ಪಕ್ಷದ ಐಟಿ ವಿಭಾಗದ ಕಾರ್ಯದರ್ಶಿ ಡಾ. ಟಿ.ಆರ್.ಬಿ. ರಾಜಾ ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡಿ ಜೋಡಿ ಆತ್ಮಗೌರವ ಪದ್ಧತಿಯಂತೆ ಮದುವೆ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಏನಪ್ಪಾ ಇದು ಆತ್ಮಗೌರವ ಪದ್ಧತಿ ಮದುವೆ ಎಂದು ಕೆಲವರು ಚರ್ಚೆ ನಡೆಸುತ್ತಿದ್ದಾರೆ.
ರಾಷ್ಟ್ರಕವಿ ಕುವೆಂಪು ಪ್ರತಿಪಾದಿಸಿದ ಸರಳ ಮತ್ತು ಅರ್ಥಪೂರ್ಣ ಮಂತ್ರಮಾಂಗಲ್ಯ ವಿವಾಹ ಪದ್ಧತಿ ರೀತಿಯ ಪದ್ಧತಿ ಇದು. 'ಸುಯಮರಿಯಾದೈ ತಿರುಮಣಂ'(ಆತ್ಮಗೌರವ ಮದುವೆ ಪದ್ಧತಿ) ಎನ್ನುವುದು 1920ರ ದಶಕದಲ್ಲಿ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಪರಿಚಯಿಸಿದ ವಿವಾಹ ಪದ್ಧತಿ. ಪುರೋಹಿತಶಾಹಿ ಪ್ರಾಬಲ್ಯ, ಮೂಢನಂಬಿಕೆ, ಜಾತಿ ವ್ಯವಸ್ಥೆ ಹಾಗೂ ಲಿಂಗ ಅಸಮಾನತೆಯನ್ನು ಬಿಟ್ಟು ಸರಳವಾಗಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪದ್ಧತಿ ಇದಾಗಿದೆ. 1928ರಲ್ಲಿ ತಮಿಳುನಾಡಿನ ವಿರುದುನಗರ ಜಿಲ್ಲೆಯ ಸುಕ್ಕಿಲನಾಥಂ ಎಂಬಲ್ಲಿ ಮೊದಲ ಆತ್ಮಗೌರವ ಮದುವೆ ನಡೆದಿತ್ತು.
ಸಾಮಾನ್ಯ ಮದುವೆಗಳಲ್ಲಿ ದುಂದುವೆಚ್ಚ, ವರದಕ್ಷಿಣೆ ಹಾಗೂ ಮಹಿಳೆಯರನ್ನು ಕೀಳಾಗಿ ಕಾಣುವ ಸಂಪ್ರದಾಯವನ್ನು ವಿರೋಧಿಸಲು ಆತ್ಮಗೌರವ ಮದುವೆ ಆರಂಭಿಸಲಾಗಿತ್ತು. ಹೋಮ-ಹವನ, ಪುರೋಹಿತರ ಮಂತ್ರಪಠಣ, ಸಪ್ತಪದಿ ಇಲ್ಲದೇ ಹುಡುಗ- ಹುಡುಗಿ ಇಬ್ಬರೂ ತಮಗೆ ಅರ್ಥವಾಗುವ ಭಾಷೆಯಲ್ಲಿ ನಾವಿಬ್ಬರು ಪರಸ್ಪರ ಸಮಾನರು ಹಾಗೂ ಜೀವನ ಸಂಗಾತಿಗಳೆಂದು ಘೋಷಿಸಿಕೊಳ್ಳುವುದು, ಹಾರ ಬದಲಾಯಿಸಿಕೊಳ್ಳುತ್ತಾರೆ. ತಾಳಿ ಕಟ್ಟುವುದು ಕೂಡ ಕಡ್ಡಾಯವಲ್ಲ.
ಮೊದಲಿಗೆ ಆತ್ಮಗೌರವದ ಮದುವೆಗೆ ಕಾನೂನು ಮಾನ್ಯತೆ ಇರಲಿಲ್ಲ. 1967ರಲ್ಲಿ ತಮಿಳುನಾಡು ಸಿಎಂ ಸಿ.ಎನ್. ಅಣ್ಣಾದೊರೈ 1955ರ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್ 7A (Section 7A) ಅನ್ನು ಸೇರ್ಪಡೆಗೊಳಿಸಿದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಆತ್ಮಗೌರವ ಮದುವೆಗಳ ಸಿಂಧುತ್ವವನ್ನು ಎತ್ತಿಹಿಡಿದಿದೆ. ಪೆರಿಯಾರ್ ಹಾಗೂ ಅಣ್ಣಾದೊರೈ ಹಾದಿಯಲ್ಲಿ ಸಾಗಿದವರು ತಮಿಳುನಾಡು ಮಾಜಿ ಸಿಎಂ ದಿವಂಗತ ಕರುಣಾನಿಧಿ. ಅವರ ಕುಟುಂಬದ ಕುಡಿ ಕಾವ್ಯಾ ಮಾರನ್. ಹಾಗಾಗಿ ಆತ್ಮಗೌರವ ವಿವಾಹ ಪದ್ಧತಿಯಲ್ಲಿ ಅನಿರುದ್ಧ್ ರವಿಚಂದರ್ ಅವರನ್ನು ವರಿಸಿದ್ದಾರೆ.
11.11 ❤️ pic.twitter.com/oNGmJtgxEY
— Anirudh Ravichander (@anirudhofficial) November 11, 2026