ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಲಾನಿಧಿ ಮಾರನ್ ಮಗಳು ಕಾವ್ಯಾ ಮಾರನ್ ಮದುವೆ ಸಂಭ್ರಮ ಇನ್ನು ಮುಗಿದಿಲ್ಲ. ನಿನ್ನೆ(ನವೆಂಬರ್ 21) ಚೆನ್ನೈನಲ್ಲಿ ಭರ್ಜರಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿತ್ತು. ಸಿನಿಮಾ, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದರು.

ರಜನಿಕಾಂತ್, ತಮಿಳುನಾಡು ಸಿಎಂ ವಿಜಯ್, ತೆಲುಗು ನಟ ಮಹೇಶ್ ಬಾಬು, ನಟ ಕಮಲ್ ಹಾಸನ್, ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್, ನಿರ್ದೇಶಕ ಶಂಕರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಸೇರಿ ಸಾಕಷ್ಟು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಚೆನ್ನೈನ ಗಿಂಡಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ರಿಸೆಪ್ಷನ್ ಆಯೋಜಿಸಲಾಗಿತ್ತು. 10 ದಿನಗಳ ಹಿಂದೆ ಗ್ರೀಸ್‌ ದೇಶದ ಅಥೆನ್ಸ್‌ನಲ್ಲಿರುವ 'ಫೋರ್ ಸೀಸನ್ಸ್ ಆಸ್ಟಿರ್ ಪ್ಯಾಲೇಸ್ ಹೋಟೆಲ್'ನಲ್ಲಿ ಮದುವೆ ಆಗಿದ್ದರು. ರಜನಿಕಾಂತ್ ಸೇರಿ ಕೆಲವೇ ಆಪ್ತರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ಸಾಂಪ್ರದಾಯಿಕ ಆಚರಣೆ ಬಿಟ್ಟು ಆತ್ಮಗೌರವ ಪದ್ಧತಿಯಲ್ಲಿ ಜೋಡಿ ಹೊಸಬಾಳಿಗೆ ಕಾಲಿಟ್ಟಿತ್ತು. ಹಾಗಾಗಿ ಚೆನ್ನೈನಲ್ಲಿ ನಡೆದ ರಿಸೆಪ್ಷನ್ ಪಾರ್ಟಿಗೆ ಸಾಕಷ್ಟು ಜನರಿಗೆ ಆಹ್ವಾನ ನೀಡಲಾಗಿತ್ತು.

ರಿಸೆಪ್ಷನ್ ವೇದಿಕೆಯಲ್ಲಿ ಅನಿರುದ್ಧ್- ಕಾವ್ಯಾ ರಾಯಲ್ ಲುಕ್‌ನಲ್ಲಿ ಮಿಂಚಿದ್ದರು. ಕಾವ್ಯಾ ರೆಡ್ ಕಲರ್ ಫ್ಲೋರಲ್ ಲೇಸ್‌ನಿಂದ ಕೂಡಿದ ಗೌನ್ ಮಾದರಿಯ ಟೂ-ಪೀಸ್ ಸೆಟ್(ಕ್ರಾಪ್ ಟಾಪ್ ಹಾಗೂ ಸ್ಕರ್ಟ್) ಉಡುಪನ್ನು ತೊಟ್ಟಿದ್ದರು. ಇನ್ನು ಅನಿರುದ್ಧ್ ಮೆರೂನ್ ಕಲರ್ ಕಸೂತಿ ಕೆಲಸವಿರುವ ಬಂಧ್ಗಲಾ ಜಾಕೆಟ್ ಹಾಗೂ ಬ್ಲ್ಯಾಕ್ ಕಲರ್ ಪ್ಯಾಂಟ್ ಧರಿಸಿದ್ದರು.

ಅನಿರುದ್ದ್ ಹಾಗೂ ಕಾವ್ಯಾ ರಿಸೆಪ್ಷನ್ ಸಾಕಷ್ಟು ಸುಂದರ ಕ್ಷಣಗಳಿಗೆ ಸಾಕ್ಷಿ ಆಗಿತ್ತು. ಬ್ಲೂ ಕಲರ್ ಬ್ಲೇಸರ್ ಹಾಗೂ ಬ್ಲ್ಯಾಕ್ ಕಲರ್ ಪ್ಯಾಂಟ್ ಧರಿಸಿ ತಮಿಳುನಾಡು ಸಿಎಂ ವಿಜಯ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಬ್ಲ್ಯಾಕ್ ಕಲರ್ ಸೂಟ್ ಧರಿಸಿ ಸೂಪರ್ ಸ್ಟಾರ್ ರಜನಿಕಾಂತ್ ಮಿಂಚಿದ್ದರು. ವಿಜಯ್, ರಜನಿಕಾಂತ್ ಹಾಗೂ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಭೇಟಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಧನುಷ್ ನಟನೆಯ 'ತ್ರೀ' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಅನಿರುದ್ಧ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಚಿತ್ರದಲ್ಲೇ ಸಂಚಲನ ಸೃಷ್ಟಿಸಿದ್ದರು. 'ವೈ ದಿಸ್ ಕೊಲವೆರಿ ಡಿ' ಸಾಂಗ್ ಮಾಡಿದ ಮ್ಯಾಜಿಕ್ ಗೊತ್ತೇಯಿದೆ. ಬಳಿಕ ಹಲವು ಹಿಟ್ ಸಿನಿಮಾಗಳಿಗೆ ಅನಿ ಟ್ಯೂನ್ ಹಾಕಿ ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗೆ ರಜನಿಕಾಂತ್ ನಟನೆಯ ಸಿನಿಮಾಗಳಿಗೆಲ್ಲಾ ಅನಿರುದ್ಧ್ ಟ್ಯೂನ್ ಇರಲೇಬೇಕು ಎನ್ನುವಂತಾಗಿದೆ. ರಜನಿಕಾಂತ್ ಮಡದಿ ಲತಾ ಅವರ ಅಣ್ಣನ ಮಗ ಅನಿರುದ್ದ್. ಹಾಗಾಗಿ ಎರಡೂ ಕುಟುಂಬದ ನಡುವೆ ಆತ್ಮೀಯ ಒಡನಾಟವಿದೆ.