ಎಲ್ಲೆಲ್ಲೂ ಹೌಸ್‌ಫುಲ್.. ಕನ್ನಡದ ಸಣ್ಣ ಚಿತ್ರವೊಂದಕ್ಕೆ ಇಂತಹ ಪ್ರತಿಕ್ರಿಯೆ ಯಾರು ಊಹಿಸಿರಲಿಲ್ಲ. 'ಪ್ರೇಮದ ಊರಲಿ' ಚಿತ್ರತಂಡ ಕೂಡ ಪ್ರೇಕ್ಷಕರ ಪ್ರೀತಿ ಕಂಡು ಅಚ್ಚರಿಗೊಂಡಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ಚಿತ್ರತಂಡಕ್ಕೆ ತಮ್ಮ ಸಿನಿಮಾ ಮೇಲೆ ಪ್ರೀತಿ ಅಭಿಮಾನ ಸಾಮಾನ್ಯ. ಆದರೆ ಪ್ರೇಕ್ಷಕರು ಎಲ್ಲಾ ಚಿತ್ರಗಳನ್ನು ಅಷ್ಟು ಸುಲಭವಾಗಿ ತಮ್ಮದಾಗಿಸಿಕೊಳ್ಳುವುದಿಲ್ಲ. ಅದಕ್ಕೆ ಏನೋ ಒಂದು ಮ್ಯಾಜಿಕ್ ಆಗಬೇಕು.
ನಿಜಕ್ಕೂ 'ಪ್ರೇಮದ ಊರಲಿ' ಅಷ್ಟೊಂದು ಅದ್ಭುತ ಸಿನಿಮಾನಾ ? ಎಲ್ಲಾ ವಿಭಾಗಗಳಲ್ಲಿ ಪರ್ಫೆಕ್ಟ್ ಆಗಿದ್ಯಾ ? ಕೆಲವರು ಚೆನ್ನಾಗಿದೆ ಎಂದ ಕಾರಣಕ್ಕೆ ಬಳಿಕ ನೋಡಿದವರು, ನಾನು ಚೆನ್ನಾಗಿಲ್ಲ ಎಂದರೆ ಸಮಾಜ ಏನು ಅಂದುಕೊಳ್ಳುತ್ತೋ ಎನ್ನುವ ಭಯದಿಂದ ಚೆನ್ನಾಗಿದೆ ಎಂದು ಹಲ್ಲು ಕಿಸಿಯುತ್ತಿದ್ದಾರಾ ? ಅದೆಲ್ಲಾ ಏನೇ ಇದ್ದರೂ ಸಿನಿಮಾ ಗೆದ್ದಿದೆ. ನೂರಾರು ಕೋಟಿ ರೂ. ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಮಾಡದ ಚಮತ್ಕಾರ ಮಾಡಿದೆ.
ಅನುಮಾನ ಹಾಗೂ ನಂಬಿಕೆ ನಡುವಿನ ತೋಯ್ದಾಟದ ಭಾವನೆಗಳ ಮೆರವಣಿಗೆ ಈ ಚಿತ್ರದಲ್ಲಿದೆ. ಇವತ್ತಿನ ಆಧುನಿಕ ಸಮಾಜಕ್ಕೆ ಬಹಳ ಹತ್ತಿರವಾಗಿದೆ. ಪ್ರೀತಿಸುವುದು ಒಬ್ಬರನ್ನು, ಮದುವೆ ಆಗುವುದು ಮತ್ತೊಬ್ಬರನ್ನ. ಮದುವೆ ಮಂಟಪದಿಂದ ಹುಡುಗ ಅಥವಾ ಹುಡುಗಿ ಓಡಿ ಹೋಗುವುದು. ಮದುವೆ ಬಳಿಕ ಕೂಡ ಒಬ್ಬರ ಮೇಲೊಬ್ಬರು ಅನುಮಾನಪಡುವುದು, ಮದುವೆ ಹಿಂದಿನ ರಿಲೇಷನ್‌ಶಿಪ್‌ಗಳ ಬಗ್ಗೆ ತಲೆಯಲ್ಲಿ ಗೊಂದಲಗಳನ್ನು ತುಂಬಿಕೊಂಡು ಬದುಕುವುದು. ಇದೇ ಅಂಶ ಬಹುತೇಕರನ್ನು ಸೆಳೆಯುತ್ತಿದೆ. ಕೆಲವರು ಭಾವುಕರಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದಾರೆ.
ಹಳ್ಳಿ ಹುಡುಗರಿಗೆ ಹುಡುಗಿ ಸಿಕ್ತಿಲ್ಲ, ಹಳ್ಳಿಗಳಲ್ಲಿ ಗಂಡು ಹೆತ್ತವರಿಗೆ ಓದಿರುವ ಹೆಣ್ಣು ಸೊಸೆಯಾಗಿ ಬರಬೇಕು, ಪ್ಯಾಟೆ ಹುಡುಗಿ ಹಳ್ಳಿಗೆ ಮದುವೆ ಆಗಿ ಹೋದ್ರೆ ಬದುಕೋಕೆ ಸಾಧ್ಯಾನಾ, ನಾನು ಮದುವೆ ಆಗುವ ಹುಡುಗಿ ಪತಿವ್ರತೆ ಆಗಿರಬೇಕು, ಪರಪುರುಷನ ಗಾಳಿ ಕೂಡ ಆಕೆಯ ಮೇಲೆ ಸೋಕಿರಬಾರದು ಎನ್ನುವಂತಹ ನಿರೀಕ್ಷೆಗಳು. ಇಂತಹ ವಿಚಾರಗಳೇ 'ಪ್ರೇಮದ ಊರಲಿ' ಚಿತ್ರದ ತಿರುಳು. ಇದೇ ಅಂಶ ಪ್ರೇಕ್ಷಕರನ್ನು ಕಟ್ಟಿಹಾಕುತ್ತಿದೆ. ಹಾಗಾಗಿ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಮರೆತು ಸಿನಿಮಾ ಇಷ್ಟಪಡುತ್ತಿದ್ದಾರೆ. ಕೆಲವು ಕಡೆ ಶಿಳ್ಳೆ ಹೊಡೆದು ಎಂಜಾಯ್ ಮಾಡುತ್ತಿದ್ದಾರೆ.
ರಂಗಾಯಣ ರಘು ಬಿಟ್ಟು ಉಳಿದ ಬಹುತೇಕ ಕಲಾವಿದರ ಮುಖ ಪರಿಚಯ ಎಲ್ಲಾ ಪ್ರೇಕ್ಷಕರಿಗೂ ಇಲ್ಲ. ಕಿರುತೆರೆ ವೀಕ್ಷಕರಿಗೆ ಅವ್ರು ಗೊತ್ತಿರಬಹುದು. ಹಾಗಾಗಿ ರಂಗಾಯಣ ರಘು ನಟಿಸಿರುವ ಧಾರಾವಾಹಿ ರೀತಿ ಕೆಲವರಿಗೆ ಸಿನಿಮಾ ಭಾಸವಾಗಬಹುದು. ಇನ್ನು ಟೈಟಲ್ ಸಾಂಗ್ ಬಿಟ್ಟರೆ ಯಾವುದೇ ಹಾಡು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಚಿತ್ರದ ಕಾಲಾವಧಿ ಕೂಡ ಕೆಲವೊಮ್ಮೆ ತಾಳ್ಮೆ ಪರೀಕ್ಷೆ ಮಾಡುತ್ತೆ. ಅಲ್ಲಲ್ಲಿ ಮೆಲೋಡ್ರಾಮಾ ಎನಿಸಿಬಿಡುತ್ತೆ. ಒಮ್ಮೆ ನೋಡುವ ನಮಗೆ ಬೋರ್ ಎನಿಸುವಾಗ ಎಡಿಟಿಂಗ್ ವೇಳೆ ಪದೇ ಪದೆ ನೋಡುವವರು ಯಾಕೆ ಬೇಡದ ದೃಶ್ಯಗಳಿಗೆ ಕತ್ತರಿ ಹಾಕುವುದಿಲ್ಲವೋ ಆ ದೇವರೇ ಬಲ್ಲ.
ಸಂತೋಷನ ಮೇಲೆ ವಸಂತಾಗೆ ಲವ್ವಾಗುವ ದೃಶ್ಯದಿಂದ 'ಪ್ರೇಮದ ಊರಲಿ' ಸಿನಿಮಾ ಟೇಕ್ ಹಾಫ್ ಆಗುತ್ತದೆ. ಒಳ್ಳೆ ಇಂಟರ್‌ವಲ್ ಜೊತೆ ಸೆಕೆಂಡ್ ಹಾಫ್ ನಿರೀಕ್ಷೆ ಮೂಡಿಸುತ್ತೆ. ಇನ್ನು ರಂಗಾಯಣ ರಘು ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸಾಗುತ್ತೆ. ಅವರ ನಟನೆ ಬಗ್ಗೆ ದೂಸ್ರಾ ಮಾತಿಲ್ಲ. ಅಷ್ಟೇನು ವಯಸ್ಸಾಗದ ಇಳಾ ವಿಟ್ಲಾ ಅಜ್ಜಿ ಪಾತ್ರ, ಅದರಲ್ಲೂ ರಂಗಾಯಣ ರಘುಗೆ ತಾಯಿ ಸಮಾನ ಪಾತ್ರ ಎನ್ನುವುದನ್ನು ಅರಗಿಸಿಕೊಳ್ಳೋಕೆ ಕಷ್ಟ. ಉಮಾಶ್ರೀ ಅವರಿಗೆ ಪರ್ಯಾಯವಾಗಿ ಆಕೆಯನ್ನು ತೋರಿಸುವ ಪ್ರಯತ್ನ ಮಾಡಿದಂತೆ ಕಾಣುತ್ತೆ.
ಚಿತ್ರದಲ್ಲಿ ವಿಲನ್‌ಗಳಿಲ್ಲ. ಸಮಯ ಸಂದರ್ಭಗಳೇ ಇಲ್ಲಿ ಸಮಸ್ಯೆ ತಂದು ಸಂಬಂಧಗಳ ಮೌಲ್ಯವನ್ನು ಮಂಥನ ಮಾಡುತ್ತೆ. ಹಳ್ಳಿ ಸೊಗಡು, ಹಳ್ಳಿಯ ಹಚ್ಚ ಹಸಿರನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಿಗೆ ಸಂಗೀತ ಹೆಚ್ಚಿನ ಕಸುವು ತುಂಬಿದೆ. ಒಟ್ಟಾರೆ 'ಪ್ರೇಮದ ಊರಲಿ' ಓಕೆ ಓಕೆ ಎನ್ನುವಂತಹ ಸಿನಿಮಾ. ಒಮ್ಮೆ ನೋಡಿ ಸುಮ್ಮನಾಗಬಹುದು. ಆದರೆ ಚಿತ್ರದಲ್ಲಿ ಚರ್ಚಿಸಿರುವ ವಿಚಾರಗಳು ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಪ್ರಸ್ತುತ. ಅದೇ ಕಾರಣಕ್ಕೆ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಳ್ತಿದೆ. ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನು 'ಪ್ರೇಮದ ಊರಲಿ' ಎನ್ನುವುದಕ್ಕಿಂತ 'ರುಕ್ಮಿಣಿ - ವಸಂತ' ಎನ್ನುವ ಟೈಟಲ್ ಚಿತ್ರಕ್ಕೆ ಹೊಂದಿಕೆ ಆಗ್ತಿತ್ತು ಎಂದು ಯಾರೋ ಚಿತ್ರಮಂದಿರದಲ್ಲಿ ಹೇಳಿದಂತಿತ್ತು.