ಸಣ್ಣ ಸಿನಿಮಾ ಮಾಡಿದ್ರೆ ಯಾರು ಚಿತ್ರಮಂದಿರಕ್ಕೆ ಬರ್ತಾರೆ. ನೂರಾರು ಕೋಟಿ ಹಾಕಿ ದೊಡ್ಡ ಸಿನಿಮಾ ಮಾಡ್ಬೇಕು. ಬಂಡವಾಳ ವಾಪಸ್ ಪಡೆಯೋಕೆ ನಾಲ್ಕೈದು ಭಾಷೆಗಳಲ್ಲಿ ಬಿಡುಗಡೆ ಆಗ್ಬೇಕು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಮ್ಮ ಸಿನಿಮಾ ತೆರೆಗೆ ಬರ್ಬೇಕು ಎನ್ನುವುದು 10 ವರ್ಷಗಳಿಂದ ಫಿಲ್ಮ್ ಇಂಡಸ್ಟ್ರಿಯಲ್ಲಿರುವ ಮಾತು. ಆದರೆ ನಿಧಾನವಾಗಿ ಅದು ಬದಲಾಗ್ತಿದೆ.
ಮೊದಲು ಒಳ್ಳೆ ಸಿನಿಮಾ ಮಾಡ್ಬೇಕು. ಆಮೇಲೆ ತನ್ನಿಂದ ತಾನೇ ಅದು ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗುತ್ತದೆ. 'ಕಾಂತಾರ', 'ಹನುಮಾನ್' ಹೀಗೆ ಕೆಲ ಸಣ್ಣ ಸಿನಿಮಾಗಳು ಮಾಡಿದ ಮ್ಯಾಜಿಕ್ ಗೊತ್ತೇಯಿದೆ. ಸಣ್ಣದಾಗಿ ಬಂದ ಸಿನಿಮಾಗಳು ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಸಿನಿಮಾ ಸ್ಟೇಟಸ್ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದುಕೊಂಡಿದ್ದ 'ಟಾಕ್ಸಿಕ್' ಸೋಲು ಕೆಲವರ ಕಣ್ಣು ತೆರೆಸಿದಂತಿದೆ. ತೆಲುಗು ನಟ ನಾನಿ ಆಡಿರುವ ಮಾತುಗಳು ಇದಕ್ಕೆ ಇಂಬು ಕೊಡುವಂತಿದೆ.
ಸದ್ಯ ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಒಂದೇ ಒಂದು ಹಾಡಿನಿಂದ ಸಿನಿಮಾ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗ್ತಿದೆ. ಆದರೆ ನಮ್ಮ ಮೊದಲ ಆದ್ಯತೆ ತೆಲುಗಿಗೆ ಮಾತ್ರ ಎಂದು ನಾನಿ ಹೇಳಿದ್ದಾರೆ. ಅಲ್ಲ ಗುರೂ ಸಣ್ಣ ಸಣ್ಣ ಸಿನಿಮಾ ಮಾಡಿ ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಡಾಯಿ ಕೊಚ್ಚಿಕೊಳ್ಳುವವರ ನಡುವೆ ನಾನಿ ಯಾಕೆ ಹೀಗೆ ಹೇಳಿಬಿಟ್ರು ಎನ್ನುವ ಅನುಮಾನ ಕೆಲವರನ್ನು ಕಾಡ್ತಿದೆ. 'ಟಾಕ್ಸಿಕ್' ಸೋಲು ಪ್ಯಾನ್ ಇಂಡಿಯಾ ಎನ್ನುವ ಆಶಾ ಗೋಪುರವನ್ನು ಧ್ವಂಸ ಮಾಡಿದೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
ತಮಿಳಿನಲ್ಲಿ ಬಂದ 'ಕರುಪ್ಪನ್', 'ವಿಶ್ವನಾಥ್ & ಸನ್ಸ್' ರೀತಿಯ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಸೂರ್ಯ ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಡಾಯಿ ಕೊಚ್ಚಿಕೊಳ್ಳಲೇ ಇಲ್ಲ. ಹಿಂದಿಗೂ ಎರಡೂ ಸಿನಿಮಾಗಳು ಡಬ್ ಆಗಿ ಬಿಡುಗಡೆ ಆಗ್ಲಿಲ್ಲ. ಆದರೂ ಎರಡು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಾಗಾಗಿ ಪ್ಯಾನ್ ಇಂಡಿಯಾ ಎನ್ನುವ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ಕೆಲವರಿಗೆ ಅರ್ಥವಾದಂತೆ ಕಾಣ್ತಿದೆ. ಇವತ್ತಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸಿನಿಮಾ ಚೆನ್ನಾಗಿದ್ದರೆ ಸಹಜವಾಗಿಯೇ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ತಲುಪುತ್ತದೆ. ಚೆನ್ನಾಗಿಲ್ಲದ ಸಿನಿಮಾವನ್ನು ಗೆಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನಬಹುದು.
ನಟ ನಾನಿ ಮಾತನಾಡಿ "ನಾವು ದಿ ಪ್ಯಾರಡೈಸ್ ಚಿತ್ರವನ್ನು ಪ್ಯಾನ್ ಇಂಡಿಯಾ ಎಂದು ಕರೆಯಲು ಇಷ್ಟ ಪಡುವುದಿಲ್ಲ. ತೆಲುಗು ಜೊತೆಗೆ ಒಂದಷ್ಟು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ. ಕಂಡಿತ ತೆಲುಗು ನಮ್ಮ ಮೊದಲ ಆದ್ಯತೆ.. ಬೇರೆ ಭಾಷೆಗಳಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಾರೆ ಎನ್ನುವ ನಂಬಿಕೆಯಿದೆ" ಎಂದು ತಿಳಿಸಿದ್ದಾರೆ. ಅಂದಹಾಗೆ ಸೆಪ್ಟೆಂಬರ್ 24ಕ್ಕೆ 'ದಿ ಪ್ಯಾರಡೈಸ್' ಸಿನಿಮಾ ಬಿಡುಗಡೆ ಆಗಲಿದೆ.
“We don’t want to call #TheParadise a PAN INDIA FILM.
— Rangasthalam (@RangasthalamIN) September 11, 2026
Telugu is only our PRIMARY TARGET.”
- #Nani pic.twitter.com/sWAL5do2Y2