ಪೊಲೀಸ್ ಕಾನ್ಸ್‌ಸ್ಟೇಬಲ್ ಮಗ ವರಶಂಕರಪ್ರಸಾದ್ ತನ್ನ ಸ್ವಂತ ಪರಿಶ್ರಮದಿಂದ ಮೆಗಾಸ್ಟಾರ್ ಚಿರಂಜೀವಿ ಆಗಿ ಚಿತ್ರರಂಗದಲ್ಲಿ ಬೆಳೆದವರು. ಇವತ್ತು ಸಾವಿರಾರು ಕೋಟಿ ರೂ. ಆಸ್ತಿ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಯುವಕನಾಗಿದ್ದಾಗ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಗುರಿಯತ್ತ ಹೆಜ್ಜೆ ಹಾಕಿದ್ದಕ್ಕೆ ಇವತ್ತು ಮೆಗಾಸ್ಟಾರ್ ಆಗಿ ನಿಮ್ಮ ಮುಂದೆ ನಿಂತಿದ್ದೀನಿ ಎಂದಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ 'ನಶಾ ಮುಕ್ತ್ ಭಾರತ್' ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಭಾಗಿ ಆಗಿದ್ದರು. ಈ ವೇಳೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಯುವಜನತೆಗೆ ಸಲಹೆ ನೀಡಿದ್ದಾರೆ. ತಮ್ಮದೇ ಉದಾಹರಣೆ ಕೊಟ್ಟಿದ್ದಾರೆ. ಅವತ್ತು ನಾನು ಬಿಯರ್ ಕುಡಿಯಲಿಲ್ಲ, ಅದಕ್ಕೆ ಇವತ್ತು ಮೆಗಾಸ್ಟಾರ್ ಆಗಿದ್ದೀನಿ ಎಂದಿದ್ದಾರೆ. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಲಿತು ಚಿರಂಜೀವಿ ಚಿತ್ರರಂಗ ಪ್ರವೇಶಿಸಿ ಗೆದ್ದವರು. ಮದ್ರಾಸ್ ದಿನಗಳ ಬಗ್ಗೆ ಅವರು ನೆನಪು ಮಾಡಿಕೊಂಡಿದ್ದಾರೆ.

ಚಿರಂಜೀವಿ ಮಾತನಾಡಿ "48 ವರ್ಷಗಳ ಹಿಂದೆ ಹೀರೊ ಆಗುವ ಕನಸು ಕಂಡು ನಾನು ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ಗೆ ಹೋಗಿದ್ದೆ. ದಿನ ಸಂಜೆ ಅಲ್ಲಿ ಪಾಂಡಿ ಬಜಾರ್ ಎಂಬ ಜಾಗದಲ್ಲಿ ಸ್ನೇಹಿತರ ಜೊತೆ ಸುತ್ತಾಡುತ್ತಿದ್ದೆ. ಆಗ ಕೆಲವರು ನನ್ನ ನೋಡಿ ಯಾರೋ ಹುಡುಗ ಎಂದು ಕೇಳಿದ್ರು. ಆಕ್ಟರ್ ಆಗಬೇಕು ಅಂತ ಇನ್ಸಿಟ್ಯೂಟ್‌ಗೆ ಸೇರಿದ್ದಾನೆ, ಇವನು ನನ್ನ ಸ್ನೇಹಿತ ಎಂದು ನನ್ನ ಸ್ನೇಹಿತ ಹೇಳಿದ್ದ. ಅದಕ್ಕೆ ಅಲ್ಲಿದ್ದವರು ಅವನಿಗೆ ಒಂದು ಬಿಯರ್ ಕೊಡ್ರೊ, ಅವನಿಗೆ ಭಯ ಎಲ್ಲಾ ಹೋಗುತ್ತೆ.. ಚಿತ್ರರಂಗದಲ್ಲಿ ಇದೆಲ್ಲಾ ಮಾಮೂಲು ಅಂದ್ರು. ಕುಡಿಯುವಂತೆ ಒತ್ತಾಯಿಸಿದರು. ಬೇಡ ಎಂದು ತಿರಸ್ಕರಿಸಿ ಬೇಸರದಿಂದ ಅಲ್ಲಿಂದ ಹೊರಟು ಬಂದುಬಿಟ್ಟೆ ಎಂದು ಚಿರಂಜೀವಿ ನೆನಪಿಸಿಕೊಂಡಿದ್ದಾರೆ.

ಮತ್ತೆ ಆ ಜಾಗಕ್ಕೆ ಹೋಗಬಾರದು ಎಂದು ನಿರ್ಧರಿಸಿದೆ. ಆಗ ಒಬ್ಬ ವ್ಯಕ್ತಿ ನನ್ನ ನೋಡಿ "ನಟನಾಗಬೇಕು ಎನ್ನುವ ನಿನ್ನ ಗುರಿಯ ಕಡೆ ಹೆಜ್ಜೆ ಹಾಕು" ಎಂದು ಸಲಹೆ ಕೊಟ್ಟರು. ಹೀಗೆ ಅದನ್ನೆಲ್ಲಾ ದಾಟಿ ಬಂದಿದ್ದಕ್ಕೆ ಇವತ್ತು ನಾನು ಮೆಗಾಸ್ಟಾರ್ ಆಗಿ ನಿಮ್ಮ ಮುಂದೆ ನಿಂತಿದ್ದೀನಿ. ಡ್ರಗ್ಸ್ ನಿಮ್ಮ ಜೀವನ ನಾಶ ಮಾಡುತ್ತದೆ. ಯಾರು ಕೂಡ ಬೇಕು ಅಂತ ಡ್ರಗ್ಸ್‌ ಚಟಕ್ಕೆ ಬೀಳಲ್ಲ. ತಮಗೆ ಗೊತ್ತಿಲ್ಲದಂತೆ ಅದು ಆವರಿಸಿಕೊಂಡುಬಿಡುತ್ತದೆ. ಇದರಿಂದ ನೀನು ಒಬ್ಬ ನಾಶ ಆಗಲ್ಲ. ನಿನ್ನನ್ನು ನಂಬಿದ ಕುಟುಂಬ ಕೂಡ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಚಿರಂಜೀವಿ ಹೇಳಿದ್ದಾರೆ.