'ಪೆದ್ದಿ' ಬಳಿಕ ರಾಮ್‌ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು ಮೊದಲ ದೃಶ್ಯಕ್ಕೆ ರಾಮ್‌ಚರಣ್ ತಂದೆ ಚಿರಂಜೀವಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. 'ರಂಗಸ್ಥಳಂ' ಬಳಿಕ ಸುಕುಮಾರ್ ಹಾಗೂ ಚರಣ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಎರಡನೇ ಸಿನಿಮಾ ಇದು.

ಇನ್ನು ಹೆಸರಿಡದ ಚಿತ್ರವನ್ನು ಸದ್ಯ 'RC17' ಎಂದು ಕರೆಯಲಾಗ್ತಿದೆ. ಇದು ರಾಮ್‌ಚರಣ್ ನಟನೆಯ 17ನೇ ಸಿನಿಮಾ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಟೀ-ಸೀರಿಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದು ನಿರ್ದೇಶಕ ಸುಕುಮಾರ್ ಕೂಡ ಬಂಡವಾಳ ಹೂಡುತ್ತಿದ್ದಾರೆ. 'ಪುಷ್ಪ'- 2 ಬಳಿಕ ಸುಕ್ಕು ಸೈಲೆಂಟ್ ಆಗಿದ್ದರು. ರಾಮ್‌ಚರಣ್ ಕಾಂಬಿನೇಷನ್ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಎಲ್ಲಾ ಫೈನಲ್ ಮಾಡಿಕೊಂಡು ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಶ್ರೀಕೃಷ್ಣ ನವಿಲು ಗರಿ ಇರುವಂತೆ ಚಿತ್ರದ ಥೀಮ್ ಪೋಸ್ಟರ್ ಅನ್ನು ರಾಮ್‌ಚರಣ್ ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿ ಶ್ರೀಕೃಷ್ಣ ಪಾತ್ರದಲ್ಲಿ ಅಥವಾ ಕೃಷ್ಣನಿಂದ ಪ್ರೇರಣೆಗೊಂಡ ಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ 'RC17' ಸಿನಿಮಾ ತೆರೆಗೆ ಬರ್ತಿದೆ. ಅನಿರುದ್ಧ್ ರವಿಚಂದರ್ ಅಥವಾ 'ಧುರಂಧರ್' ಖ್ಯಾತಿಯ ಶಾಶ್ವತ್ ಸಚ್ಚಿದೇವ್ ಚಿತ್ರದಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಸಾಧ್ಯತೆಯಿದೆ.

ಚಿತ್ರಕ್ಕೆ ನಾಯಕಿ ಯಾರು ಎನ್ನುವ ಚರ್ಚೆ ನಡೀತಿದೆ. ಸಾರಾ ಅರ್ಜುನ್ ಚಿತ್ರತಂಡ ಸೇರಿಕೊಳ್ತಾರಾ ಎನ್ನುವ ಅನುಮಾನ ಶುರುವಾಗಿದೆ. ಸುಕುಮಾರ್ ಶಿಷ್ಯ ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ರಾಮ್‌ಚರಣ್ ನಟಿಸಿದ್ದರು. ಸಿನಿಮಾ ಹಿಟ್ ಆಗಿತ್ತು. ಇದೀಗ ಗುರುವಿನ ಜೊತೆ ಕೈಜೋಡಿಸಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಸುಕುಮಾರ್ ಮೇಲೆ ಭಾರೀ ನಿರೀಕ್ಷೆಯಿದೆ. 'ಪುಷ್ಪ' ಸರಣಿ ಬಳಿಕ ಅವರ ಮುಂದಿನ ಸಿನಿಮಾ ಇದಾಗಿದೆ.