'ಪೆದ್ದಿ' ಸಿನಿಮಾ ವಿವಾದದ ಬಗ್ಗೆ ನಟಿ ಜಾನ್ವಿ ಕಪೂರ್ ಕೊನೆಗೂ ಮೌನ ಮುರಿದಿದ್ದಾರೆ. ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಸಿನಿಮಾ ಸಖತ್ ಸದ್ದು ಮಾಡಿತ್ತು. ಆದರೆ ಅಚ್ಚಿಯಮ್ಮ ಪಾತ್ರ ಪೋಷಣೆ ಹಾಗೂ ಜಾನ್ವಿ ಕಪೂರ್ ಅವರನ್ನು ತೋರಿಸಿದ್ದ ಕೆಲ ಕ್ಯಾಮರಾ ಆಂಗಲ್‌ಗಳ ಬಗ್ಗೆ ವಿವಾದ ಭುಗಿಲೆದ್ದಿತ್ತು. ಕಾಫಿ ವಿತ್ ಕರಣ್ ಶೋನಲ್ಲಿ ಈ ಬಗ್ಗೆ ಆಕೆ ಮಾತನಾಡಿದ್ದಾರೆ.

ನಾಯಕಿಯ ಕಣ್ಣುಗಳ ವರ್ಣನೆ ಮಾಡುವಾಗ ಆಕೆಯ ಸೊಂಟ, ಎದೆಯನ್ನು ತೋರಿಸುವ ಸನ್ನಿವೇಶ 'ಪೆದ್ದಿ' ಚಿತ್ರದಲ್ಲಿತ್ತು. ಇದ್ಯಾವ ಸೀಮೆ ಕ್ರಿಯೇಟಿವಿಟಿ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿ ವಿವಾದಾಸ್ಪದ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ಬಗ್ಗೆ ಕೆಲ ನಟಿಯರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಆದರೆ ವಿವಾದದ ಕೇಂದ್ರ ಬಿಂದು ಜಾನ್ವಿ ಕಪೂರ್ ಮಾತ್ರ ಮೌನ ತಾಳಿದ್ದರು. ಇದೀಗ ಆಕೆ ಪ್ರತಿಕ್ರಿಯಿಸಿದ್ದಾರೆ.

ಈ ಪಾತ್ರವನ್ನು ಆ ರೀತಿ ಚಿತ್ರಿಸಿದ್ದರ ಬಗ್ಗೆ ಸಾಕಷ್ಟು ಜನರಿಗೆ ಸಹಾನುಭೂತಿ ಇತ್ತು. ಜೊತೆಗೆ ಚಿತ್ರೀಕರಣದ ವೇಳೆ ಜಾನ್ವಿ ಯಾಕೆ ಅದನ್ನು ತಡೆಯಲಿಲ್ಲ ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ? ಎನ್ನುವ ಪ್ರಶ್ನೆಗೆ ಜಾನ್ವಿ ಮಾತನಾಡಿ "ಈ ಚಿತ್ರಕ್ಕಾಗಿ ಸಾಕಷ್ಟು ಜನರು ಶ್ರಮಿಸಿದ್ದಾರೆ, ಅದಕ್ಕಾಗಿಯೇ ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿದೆ ಎಂದು ಜಾನ್ವಿ ಮಾತು ಆರಂಭಿಸಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ತನ್ನ ಪಾತ್ರವನ್ನು ಚಿತ್ರಿಸಿದ ರೀತಿ ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಬಗೆಗಿನ ಮನೋಭಾವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಜಾನ್ವಿ ಅಭಿಪ್ರಾಯಪಟ್ಟಿದ್ದು ತನ್ನ ಪಾತ್ರಕ್ಕೆ ವಿಚಾರದಲ್ಲಿ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.. ಶೇ. 100ರಷ್ಟು ಅದು ತಮ್ಮ ತಪ್ಪು ಎಂದು ಅವರು ಸ್ಪಷ್ಟಪಡಿಸಿದರು.

ಕಪೂರ್ ಫ್ಯಾಮಿಲಿ ಸದಸ್ಯೆಯಾಗಿ ತಮಗೆ ಕೆಲ ವಿಶೇಷ ಅವಕಾಶಗಳು ಹಾಗೂ ಸ್ವಾತಂತ್ರ್ಯ ಇದೆ. ಅಂತಹ ಸಂದರ್ಭಗಳಲ್ಲಿ ತನ್ನ ಆಕ್ಷೇಪಣೆಗಳನ್ನು ಗಟ್ಟಿಯಾಗಿ ವ್ಯಕ್ತಪಡಿಸಬೇಕಾಗಿತ್ತು, ತಾನು ಹೆಚ್ಚು ಜಾಗರೂಕನಾಗಿರಬೇಕಿತ್ತು, ಕೆಲ ವಿಷಯಗಳನ್ನು ಪ್ರಶ್ನಿಸಬೇಕಾಗಿತ್ತು ಎಂದು ಜಾನ್ವಿ ಒಪ್ಪಿಕೊಂಡಿದ್ದಾರೆ. ಇನ್ನು ಆ ಪಾತ್ರವನ್ನು ಚಿತ್ರಿಸಿದ ಬಗ್ಗೆ ಒಬ್ಬ ಮಹಿಳೆಯಾಗಿ ತನಗೆ ತುಂಬಾ ನೋವಿದೆ. ಜೀವನದುದ್ದಕ್ಕೂ ಅವಮಾನದ ಹೊರೆ ಹೊರಬೇಕಾಗುತ್ತದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಈಗ ತನ್ನ ಗುರಿಯಾಗಿದೆ ಎಂದು ಜಾನ್ವಿ ಕಪೂರ್ ತಿಳಿಸಿದ್ದಾರೆ.

ಮಾತು ಮುಂದುವರೆಸಿರುವ ಜಾನ್ವಿ ಕಪೂರ್ "ದಕ್ಷಿಣದ ಚಿತ್ರೋದ್ಯಮದಲ್ಲಿ ಪ್ರತಿ ಚಿತ್ರಕ್ಕೂ ಪೂರ್ಣ ಪ್ರಮಾಣದ ಸ್ಕ್ರಿಪ್ಟ್ ಮುಂಚಿತವಾಗಿ ಲಭ್ಯವಾಗುವುದು ಅಪರೂಪ. ಅದರಲ್ಲೂ ಆಂಗಲ್‌ಗಳ ವಿವರಗಳು ಯಾವಾಗಲೂ ಸ್ಕ್ರಿಪ್ಟ್‌ನಲ್ಲಿ ಸ್ಪಷ್ಟವಾಗಿರುವುದಿಲ್ಲ. ಆದರೂ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು, ತನ್ನ ಅಭಿಪ್ರಾಯವನ್ನು ಹೆಚ್ಚು ಬಲವಾಗಿ ವ್ಯಕ್ತಪಡಿಸಬೇಕು ಎಂದು ಈಗ ಭಾವಿಸುತ್ತಿರುವುದಾಗಿ ಅವರು ಹೇಳಿದರು. ಭವಿಷ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾದರೆ, ತಮ್ಮ ಅಸೌಕರ್ಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿ ಜಾನ್ವಿ ಕಪೂರ್ ವಿವರಿಸಿದ್ದಾರೆ.