ಪ್ರೇಮದ ಊರಿನ ಪಯಣ ನಿಲ್ಲುತ್ತಲೇ ಇಲ್ಲ. ದೀಪಾವಳಿವರೆಗೂ ಇದು ಹೀಗೆ ಮುಂದುವರೆಯುವ ಸುಳಿವು ಸಿಕ್ತಿದೆ. ಈಗಾಗಲೇ 'ಸು ಫ್ರಂ ಸೋ' ದಾಖಲೆಯನ್ನು ಮುರಿದು ಹೊಸಬರ ಸಿನಿಮಾ ಮುನ್ನುಗ್ಗುತ್ತಿದೆ. ಇದೀಗ ಕರ್ನಾಟಕದಲ್ಲಿ 'ಧುರಂಧರ್'- 2 ದಾಖಲೆಯನ್ನು ಕೂಡ 'ಪ್ರೇಮದ ಊರಲಿ' ಸಿನಿಮಾ ಮುರಿದಿದೆ.

ಯಶಸ್ವಿಯಾಗಿ 'ಪ್ರೇಮದ ಊರಲಿ' ಸಿನಿಮಾ 30 ದಿನ ಪೂರೈಸಿದೆ. ಕೆಲವೇ ಲಕ್ಷಗಳಲ್ಲಿ ಶುರುವಾಗಿದ್ದ ಸಿನಿಮಾ ಕಲೆಕ್ಷನ್ ಇದೀಗ 100 ಕೋಟಿ ರೂ. ದಾಟಿದೆ. ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳು ಮಾಡದ ಸಾಧನೆಯನ್ನು ಈ ಸಿನಿಮಾ ಮಾಡಿಬಿಟ್ಟಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾ ನೋಡುವ ಪ್ರೇಕ್ಷಕರು ಇದ್ದೀವಿ ಒಳ್ಳೆ ಸಿನಿಮಾ ಮಾಡ್ರೋ ಎಂದು ಸಾರಿ ಸಾರಿ ಹೇಳುತ್ತಿದೆ. ಚಿತ್ರರಂಗದ ಮಂದಿಗೆ ಎಚ್ಚರಿಕೆ ಗಂಟೆಯಾಗಿದೆ. ಪ್ಯಾನ್ ಇಂಡಿಯಾ ಬೇಡ, ಕ್ಲೀನ್ ಸಿನಿಮಾ ಬೇಕು ಎಂದು ಮತ್ತೊಮ್ಮೆ ನೆನಪಿಸಿದೆ.

ಧುರಂಧರ್- 2 ದಾಖಲೆ ಉಡೀಸ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. 1000 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡು ಸಿನಿಮಾ ಸಂಚಲನ ಸೃಷ್ಟಿಸಿತ್ತು. ಉತ್ತರ ಭಾರತ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿತ್ತು. ರಾಜ್ಯದಲ್ಲಿ ಸಿನಿಮಾ 134 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತ್ತು. ಇದೀಗ 'ಪ್ರೇಮದ ಊರಲಿ' ಸಿನಿಮಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಈ ವರ್ಷ ರಾಜ್ಯದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

ಮತ್ತೊಂದು ದಾಖಲೆ

'ಕೆಜಿಎಫ್' ಹಾಗೂ 'ಕಾಂತಾರ' ಸರಣಿ ಸಿನಿಮಾಗಳನ್ನು ಬಿಟ್ಟು ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಪ್ರೇಮದ ಊರಲಿ' ಎಂದು ಚರ್ಚೆ ನಡೀತಿದೆ. ಆದರೆ 'ಜೇಮ್ಸ್', 'ವಿಕ್ರಾಂತ್ ರೋಣ' ಚಿತ್ರಗಳು ಇನ್ನು ಹೆಚ್ಚು ಕಲೆಕ್ಷನ್ ಮಾಡಿದ್ದವು ಎಂದು ವಿಕಿಪಿಡಿಯ ವರದಿ ಮಾಡಿದೆ. ಕರ್ನಾಟಕದಲ್ಲಿ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಗಳಿಕೆಯನ್ನು ರಂಗಾಯಣ ರಘು ಸಿನಿಮಾ ಹಿಂದಿಕ್ಕಿದೆ.

150 ಕೋಟಿ ರೂ. ಕ್ಲಬ್

30 ದಿನ ಕಳೆದ್ರು 'ಪ್ರೇಮದ ಊರಲಿ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ನಿಂತಿಲ್ಲ. 'ಜೈಲರ್- 2' ಹಾಗೂ 'ರಣಬಾಲಿ' ಸಿನಿಮಾಗಳ ಆರ್ಭಟದ ನಡುವೆಯೂ ಕನ್ನಡದ ಸಣ್ಣ ಸಿನಿಮಾ ಅಬ್ಬರಿಸುತ್ತಿದೆ. ನಿನ್ನೆ(ಅಕ್ಟೋಬರ್ 24) ಕೂಡ 80 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್‌ಮೈ ಶೋನಲ್ಲಿ ಮಾರಾಟವಾಗಿತ್ತು. ಕೆಲವೆಡೆ ಜನ ನೆಲದ ಮೇಲೆ ಕೂತು ಸಿನಿಮಾ ನೋಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ.