'ಪ್ರೇಮದ ಊರಲಿ' ಹೌಸ್‌ಫುಲ್ ಮೆರವಣಿಗೆ ಜೋರಾಗಿದೆ. 18ನೇ ದಿನ ಕೂಡ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ವೀಕೆಂಡ್, ವಾರದ ದಿನ ಎನ್ನುವ ವ್ಯತ್ಯಾಸ ಇಲ್ಲದೇ ಸಿನಿಮಾ ಎಲ್ಲಾ ಕಡೆ ಸಖತ್ ಸದ್ದು ಮಾಡ್ತಿದೆ. ಪ್ರತಿದಿನ ಲಕ್ಷ ಲಕ್ಷ ಜನ ಸಿನಿಮಾ ನೋಡ್ತಿದ್ದಾರೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳನ್ನು ಮೀರಿಸುವಂತೆ ಈ ಸಿನಿಮಾ ದರ್ಬಾರ್ ನಡೆಸ್ತಿರೋದು ವಿಶೇಷ.
ಸಾಮಾನ್ಯವಾಗಿ ವೀಕೆಂಡ್ ಬಳಿಕ ಸೋಮವಾರ ಸಿನಿಮಾಗಳ ಗಳಿಕೆ ಕಮ್ಮಿ ಆಗುತ್ತದೆ. ಟಿಕೆಟ್ ಬುಕ್ಕಿಂಗ್ ಸಹ ಡಲ್ ಆಗಿಬಿಡುತ್ತೆ. ಆದರೆ 'ಪ್ರೇಮದ ಊರಲಿ' ಸಿನಿಮಾ ಅದನ್ನು ಸುಳ್ಳು ಮಾಡುತ್ತಲೇ ಇದೆ. ಸೆಪ್ಟೆಂಬರ್ 25ರಂದು ತೆರೆಕಂಡಿದ್ದ ಸಿನಿಮಾ ಮೊದಲ ಸೋಮವಾರ ಅಂದ್ರೆ ಅಕ್ಟೋಬರ್ 28ರಂದು ತನ್ನ ಸಾಮರ್ಥ್ಯ ಸಾಬೀತು ಮಾಡಿತ್ತು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಎರಡನೇ ಸೋಮವಾರವಾದ ಅಕ್ಟೋಬರ್ 2ರಂದು ಸಹ ಸಿನಿಮಾ ಮ್ಯಾಜಿಕ್ ಮಾಡಿತ್ತು. ಇದೀಗ ಮೂರನೇ ಸೋಮವಾರ ಕೂಡ ಅದು ಮುಂದುವರೆದಿದೆ.
18ನೇ ದಿನದ ಕಲೆಕ್ಷನ್
ಈಗಾಗಲೇ 'ಪ್ರೇಮದ ಊರಲಿ' ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 100 ಕೋಟಿ ರೂ. ಕೊಳ್ಳೆ ಹೊಡೆಯಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಮೂರನೇ ಸೋಮವಾರ 4.75 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ.
'ದೃಶ್ಯಂ- 3' ಡಲ್
ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಮುಂದೆ ಬಾಲಿವುಡ್ 'ದೃಶ್ಯಂ- 3' ಸಿನಿಮಾ ಕೂಡ ಡಲ್ ಆಗಿದೆ. ಅಕ್ಟೋಬರ್ 12ರಂದು ಬುಕ್‌ಮೈಶೋನಲ್ಲಿ 'ಪ್ರೇಮದ ಊರಲಿ' ಸಿನಿಮಾ ಭಾರತದಲ್ಲೇ ಅತ್ಯಧಿಕ ಟಿಕೆಟ್ ಮಾರಾಟವಾದ ಚಿತ್ರವಾಗಿ ಹೊರಹೊಮ್ಮಿದೆ. ಬರೋಬ್ಬರಿ 1.49 ಲಕ್ಷ ಟಿಕೆಟ್‌ಗಳು ಬುಕ್ ಆಗಿತ್ತು. ಹಿಂದಿಯ 'ದೃಶ್ಯಂ 3' ಚಿತ್ರಕ್ಕೆ 1.14 ಲಕ್ಷ ಟಿಕೆಟ್‌ಗಳು ಮಾತ್ರ ಬುಕ್ ಆಗಿತ್ತು.
ಸದ್ಯಕ್ಕೆ ಓಟಿಟಿಗೆ ಬರಲ್ಲ
'ಪ್ರೇಮದ ಊರಲಿ' ಸಿನಿಮಾ ಓಟಿಟಿ ಹಾಗೂ ಟಿವಿ ರೈಟ್ಸ್ ಇನ್ನು ಮಾರಾಟವಾಗಿಲ್ಲ. "ನಮ್ಮ ಮೊದಲ ಆದ್ಯತೆ ಚಿತ್ರಮಂದಿರ. ಪ್ರೇಕ್ಷಕರು 'ಪ್ರೇಮದ ಊರಲಿ' ಚಿತ್ರವನ್ನು ದೊಡ್ಡ ಪರದೆಯ ಮೇಲೆಯೇ ನೋಡಿ ಆಸ್ವಾದಿಸಬೇಕು. ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರಲ್ಲ" ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.