ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅಕ್ಷರಶಃ ಚಮತ್ಕಾರ ಮಾಡಿದೆ. ದೇಶವಿದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ದಾಖಲೆ ಬರೀತಿದೆ. ಈಗಾಗಲೇ 30 ದಿನ ಪೂರೈಸಿ ಯಶಸ್ವಿಯಾಗಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ.

ಕರ್ನಾಟಕದಲ್ಲೇ ಕನ್ನಡ ಸಿನಿಮಾಗಳು ಒಳ್ಳೆ ಪ್ರದರ್ಶನ ಕಾಣಲ್ಲ ಎನ್ನುವ ಆರೋಪದ ನಡುವೆ ಹೊರ ರಾಜ್ಯಗಳಲ್ಲಿ ಈ ಸಿನಿಮಾ ಸಂಚಲನ ಸೃಷ್ಟಿಸಿದೆ. ಈಗಾಗಲೇ 130 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ 'ಪ್ರೇಮದ ಊರಲಿ' ಸಿನಿಮಾ ದರ್ಬಾರ್ ನಡೆಸ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. 'ಕೆಜಿಎಫ್' ಹಾಗೂ 'ಕಾಂತಾರ' ಸರಣಿ ಸಿನಿಮಾಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಸಿನಿಮಾ ದಾಖಲೆ ಅಳಿಸಿದೆ ಎಂದು ಕೆಲವರು ಹೇಳ್ತಿದ್ದಾರೆ.

ತಮಿಳುನಾಡಿನಲ್ಲಿ ದಾಖಲೆ

ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ಸದ್ದು ಮಾಡುವುದು ಗೊತ್ತು. ಆದರೆ ಕನ್ನಡ ಸಿನಿಮಾಗಳು ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಆಗುವುದೇ ಅಪರೂಪ. ಆದರೆ 'ಪ್ರೇಮದ ಊರಲಿ' ಚಿತ್ರವನ್ನು ತಮಿಳುನಾಡಿನ ಒಂದೇ ಚಿತ್ರಮಂದಿರದಲ್ಲಿ 50 ಸಾವಿರ ಜನ ನೋಡಿದ್ದಾರೆ. ಹೌದು.. ಕರ್ನಾಟಕ - ತಮಿಳುನಾಡು ಗಡಿ ಹೊಸೂರಿನಲ್ಲಿರುವ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ರೆಸ್ಪಾನ್ಸ್ ನೋಡಿ ಚಿತ್ರಮಂದಿರದ ಮಾಲೀಕರೇ ಖುಷಿಯಾಗಿದ್ದಾರೆ.

27 ದಿನ.. 167 ಶೋ

ಗ್ರ್ಯಾಂಡ್‌ ಸಿನಿಮಾಸ್ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಕೆಲ ಕನ್ನಡ ಸಿನಿಮಾಗಳು ಪ್ರದರ್ಶನವಾಗಿವೆ. 'ಕೆಜಿಎಫ್- 2', 'ಕಾಟೇರ' ಹಾಗೂ 'ಕಾಂತಾರ'- 1 ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಅದನ್ನೆಲ್ಲಾ ಮೀರಿ 'ಪ್ರೇಮದ ಊರಲಿ' ಸಿನಿಮಾ ಮ್ಯಾಜಿಕ್ ಮಾಡಿದೆ. 27 ದಿನಗಳಲ್ಲಿ 167 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. 50 ಸಾವಿರ ಟಿಕೆಟ್ ಸೇಲ್ ಆಗಿರುವುದಾಗಿ ಚಿತ್ರಮಂದಿರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 30 ದಿನಗಳ ಬಳಿಕವೂ ಪ್ರತಿದಿನ 3 ಶೋಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಅಂದಾಜು 75 ಲಕ್ಷ ರೂ. ಕಲೆಕ್ಷನ್ ಆಗಿರುವ ಅಂದಾಜಿದೆ.

ಒಟ್ಟು ಕಲೆಕ್ಷನ್

'ಪ್ರೇಮದ ಊರಲಿ' ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಲಭ್ಯವಿಲ್ಲ. sacnilk ವರದಿ ಪ್ರಕಾರ ಈವರೆಗೆ ಭಾರತದಲ್ಲಿ 118.48 ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 101.35 ನೆಟ್ ಕಲೆಕ್ಷನ್ ಆಗಿದೆ. ವಿಶ್ವದಾದ್ಯಂತ ಸಿನಿಮಾ 130 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.