ರಂಗಾಯಣ ರಘು ಈಗ ಸ್ಟಾರ್ ಆಗಿಬಿಟ್ಟಿದ್ದಾರೆ. ಹೀರೊ ರೀತಿ ಒಂದಿಡಿ ಚಿತ್ರವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. 'ಶಾಖಾಹಾರಿ', 'ಅಜ್ಞಾತವಾಸಿ', 'ಪ್ರೇಮದ ಊರಲಿ' ಚಿತ್ರಗಳಲ್ಲಿ ರಘು ಪಾತ್ರವೇ ಹೈಲೆಟ್ ಆಗಿತ್ತು. ಇದೀಗ 'ದೇವಿ ಮಹಾತ್ಮೆ' ಚಿತ್ರದಲ್ಲಿ ಅಂಥದ್ದೇ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ 'ದೇವಿ ಮಹಾತ್ಮೆ' ಸಿನಿಮಾ ತೆರೆಗೆ ಬರಲಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ, ಕುಂದಾಪುರದ ಭಾಷಾ ಸೊಗಡು ಹಾಗೂ ಮಾನವೀಯ ಸಂಬಂಧಗಳ ಸುತ್ತ ಸಿನಿಮಾ ಕಟ್ಟಿಕೊಡಲಾಗಿದೆ. ಯುವಿಜಿ ಸ್ಟುಡಿಯೋ (UVG Studio) ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಆಕ್ಷನ್-ಕಟ್ ಹೇಳಿದ್ದಾರೆ.
'ದೇವಿ ಮಹಾತ್ಮೆ' ಸಿನಿಮಾ ಟ್ರೈಲರ್ ಕುತೂಹಲಭರಿತವಾಗಿದೆ. ಕಥೆಯನ್ನು ಬಿಟ್ಟು ಕೊಡದೇ ಬಹಳ ಸೊಗಸಾಗಿ ಟ್ರೈಲರ್ ಕಟ್ ಮಾಡಿದ್ದಾರೆ. ಒಳ್ಳೆ ಬಿಜಿಎಂ ಸೇರಿಸಿ ಬಲ ತುಂಬಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ರಂಗಾಯಣ ರಘು "ಚಿತ್ರದಲ್ಲಿ ನಾನು 'ಶಂಕರ್' ಎಂಬ ಪಾತ್ರ ಮಾಡಿದ್ದೇನೆ. ನನಗೆ ಚಿಕ್ಕಂದಿನಿಂದಲೂ 'ದೇವಿ ಮಹಾತ್ಮೆ' ಜೊತೆ ಭಾವನಾತ್ಮಕ ನಂಟಿದೆ, ನಮ್ಮ ಊರಿನಲ್ಲಿ ನಮ್ಮ ತಂದೆ ದೇವಿ ಪಾತ್ರ ಮಾಡುತ್ತಿದ್ರು. ಕುಂದಾಪುರ ಭಾಷೆ ನನಗೆ ಹೊಸದಾಗಿತ್ತು. ಅಲ್ಲಿನ ಸೆಕೆ ಹಾಗೂ ಸಮುದ್ರದ ಒಳಗೆ 5-6 ಕಿಲೋಮೀಟರ್ ಹೋಗಿ ಚಿತ್ರೀಕರಣ ಮಾಡಿದ್ದನ್ನು ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.
"ಇದು ಬರೀ ದೇವಿ ಮಹಾತ್ಮೆಯ ಕಥೆಯಲ್ಲ, ಬದಲಾಗಿ ದೇವಿ ಮಹಾತ್ಮೆ ಆಡಿಸುವವನ ಕಥೆ. 2000ನೇ ಇಸವಿಯ ಕಾಲಘಟ್ಟದಲ್ಲಿ ಸಾಗುವ ಕಥೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ವಾಸ್ತವ ಬದುಕಿನ ಚಿತ್ರಣವಿದೆ. ರಂಗಾಯಣ ರಘು ಅವರು ಯಾವುದೇ ವೇಷ ಹಾಕಿಲ್ಲ, ಮಹಿಷಾಸುರನ ಪಾತ್ರವನ್ನು ನಂದೀಶ್ ಜನ್ನಾಡಿ ನಿರ್ವಹಿಸಿದ್ದು, ಯಕ್ಷಗಾನದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ತೋರಿಸಿದ್ದೇವೆ" ಎಂದು ನಿರ್ದೇಶಕ ನಾಗರಾಜ್ ಸೋಮಯಾಜಿ ಮಾಹಿತಿ ನೀಡಿದ್ದಾರೆ.
ನಾಗರಾಜ್ ಸೋಮಯಾಜಿ, ಅರವಿಂದ ಕುಪ್ಳಿಕರ್, ವಾದಿರಾಜ್ ಶೆಟ್ಟಿ ಹಾಗೂ ಗುರು ಆರ್ಯ ಅವರ ಬರವಣಿಗೆ ಈ ಚಿತ್ರಕ್ಕಿದೆ. ಸಂಭಾಷಣೆಯನ್ನು ಭಾಸ್ಕರ್ ಬಂಗೇರ-ನಾಗರಾಜ್ ಸೋಮಯಾಜಿ ಅವರು ಬರೆದಿದ್ದಾರೆ. ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ.ಡಿ. ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಲಿಕಿತ್ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.