ಪುನೀತ್ ರಾಜ್‌ಕುಮಾರ್ ಇದ್ದಕ್ಕಿದಂತೆ ಎಲ್ಲರನ್ನು ಅಗಲಿ ಹೊರಟುಬಿಟ್ಟರು. ಮಾಡುತ್ತಿದ್ದ ಸಿನಿಮಾಗಳನ್ನು ಅರ್ಧಕ್ಕೆ ಬಿಟ್ಟು ಇಹಲೋಕ ತ್ಯಜಿಸಿದ್ದರು. ಅವರನ್ನು ಮತ್ತಷ್ಟು ಪಾತ್ರಗಳಲ್ಲಿ ನೋಡುವ ಆಸೆ ಅಭಿಮಾನಿಗಳಿಗಿತ್ತು. ಪೌರಾಣಿಕ ಸಿನಿಮಾಗಳಲ್ಲಿ ನಟಿಸೋ ಆಸೆ ಅಪ್ಪುಗಿತ್ತು ಎಂದು ಹಿರಿಯ ನಟ ರಂಗಾಯಣ ರಘು ಹೇಳಿದ್ದಾರೆ.

ಬಾಲನಟನಾಗಿ ಪುನೀತ್ ರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದವರು. ಚಿಕ್ಕಂದಿನಲ್ಲೇ ಪೌರಾಣಿಕ, ಜಾನಪದ ಸಿನಿಮಾಗಳಲ್ಲಿ ನಟಿಸಿದ್ದರು. 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಪ್ರಹ್ಲಾದನ ಪಾತ್ರ ಮಾಡಿದ್ದರು. ಅಪ್ಪನ ಎದುರು ಧೈರ್ಯವಾಗಿ ನಟಿಸಿ ಗೆದ್ದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ನಟನೆಯಿಂದ ದೂರಾಗಿದ್ದರು. ಬಹಳ ವರ್ಷಗಳ ನಂತರ 'ಅಪ್ಪು' ಸಿನಿಮಾ ಮೂಲಕ ಮತ್ತೆ ಹೀರೊ ಆಗಿ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ್ದರು. ಒಂದಷ್ಟು ಸಿನಿಮಾಗಳಲ್ಲಿ ತರಹೇವಾರಿ ಪಾತ್ರ ಮಾಡಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆ ರಂಗಾಯಣ ರಘು ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಇಬ್ಬರ ನಡುವೆ ಆತ್ಮೀಯ ಒಡನಾಟ ಇತ್ತು. ಅಪ್ಪು ಅವರೊಟ್ಟಿಗೆ ಸಾಕಷ್ಟು ಚರ್ಚೆ ಮಾಡ್ತಿದ್ವಿ. ಅವ್ರು ಪೌರಾಣಿಕ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಶ್ರೀಕೃಷ್ಣನ ಯೌವನದ ದಿನಗಳ ಪಾತ್ರವನ್ನು ಮಾಡಬೇಕು ಎಂದಿದ್ದರು. ಪಾಂಡವರ ಪಕ್ಷ ವಹಿಸಿ ಕೃಷ್ಣ ಯುದ್ಧಕ್ಕೆ ಹೋಗುವುದು ಅಲ್ಲ, ಅದಕ್ಕಿಂತ ಮುನ್ನ ಆತನ ಕಥೆಗಳನ್ನು ಹೇಳುವ ಚಿತ್ರದಲ್ಲಿ ನಟಿಸಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ರಂಗಾಯಣ ರಘು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

'ಪವರ್', 'ರಾಜಕುಮಾರ', 'ದೊಡ್ಮನೆ ಹುಡುಗ', 'ರಾಮ್', 'ಹುಡುಗರು', 'ಚಕ್ರವ್ಯೂಹ', 'ಪರಮಾತ್ಮ' ಹಾಗೂ 'ಅಣ್ಣಾಬಾಂಡ್' ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ರಂಗಾಯಣ ರಘು ನಟಿಸಿದ್ದರು. ರಂಗಾಯಣ ರಘು ನಟನೆಯ 'ದೇವಿ ಮಹಾತ್ಮೆ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ನಾಗರಾಜ್ ಸೋಮಯಾಜಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯಕ್ಷಗಾನ, ಮಾನವೀಯ ಮೌಲ್ಯಗಳ ಸುತ್ತಾ ಚಿತ್ರ ಮೂಡಿ ಬಂದಿದೆ.