'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ಆರ್ಭಟ ಜೋರಾಗಿದೆ. ಒಂದು ಹಂತಕ್ಕೆ ಮೊದಲ ಭಾಗದ ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಮೀರಿಸುವಂತೆ ರಾವಣ ಪಾತ್ರವನ್ನು ತೋರಿಸಲಾಗಿದೆ. ನಟನೆ ವಿಚಾರದಲ್ಲಿ ಯಶ್ ಮುಂದೆ ರಣ್‌ಬೀರ್ ಕಪೂರ್ ಸಪ್ಪೆ ಎನಿಸಿಬಿಟ್ಟಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಸೋತಿದ್ದ ಯಶ್ ಈಗ ದಶಕಂಠನಾಗಿ ಕಂಬ್ಯಾಕ್ ಮಾಡಿದ್ದಾರೆ.

ಇವತ್ತಿನ ಕಾಲದಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ಮಾಡುವುದು ಸವಾಲಿನ ಕೆಲಸ. ಅದರಲ್ಲೂ 'ರಾಮಾಯಣ'ದಂತಹ ಮಹಾನ್ ಕಾವ್ಯವನ್ನು ತೆರೆಮೇಲೆ ತಂದು ಭೇಷ್ ಎನಿಸಿಕೊಳ್ಳುವುದು ಸಾಹಸವೇ ಸರಿ. ಯಶ್ ಮತ್ತವರ ತಂಡ ಆ ಪ್ರಯತ್ನದಲ್ಲಿ ಬಹುತೇಕ ಗೆದ್ದಿದೆ. ಸದ್ಯ ಮೊದಲ ಭಾಗ ಮಾತ್ರ ತೆರೆಮೇಲೆ ಬಂದಿದ್ದು ಎರಡನೇ ಭಾಗ ಕುತೂಹಲ ಮೂಡಿಸಿದೆ. ಒಂದಷ್ಟು ನ್ಯೂನ್ಯತೆಗಳ ನಡುವೆ ಕೂಡ 'ರಾಮಾಯಣ' ಸಿನಿಮಾ ತೆರೆಮೇಲೆ ಚಮತ್ಕಾರ ಮಾಡಿದೆ. ಪ್ರೇಕ್ಷಕರಿಗೆ ನಿಜಕ್ಕೂ ವಿಷ್ಯುವಲ್ ಟ್ರೀಟ್.

ಮಾಸ್ ಹೀರೊ ಆಗಿ ಇಮೇಜ್ ಬೆಳೆಸಿಕೊಂಡಿರುವ ಯಶ್ ಪೌರಾಣಿಕ ಪಾತ್ರ ಮಾಡ್ತಾರೆ ಎಂದಾಗಲೇ ಎಲ್ಲರೂ ಅಚ್ಚರಿಗೊಂಡಿದ್ದರು. ಅದರಲ್ಲೂ ರಾವಣನ ಪಾತ್ರ ಎಂದಾಗ ನಿರೀಕ್ಷೆ ಹೆಚ್ಚಾಗಿತ್ತು. ಅದು ಈಗ ತೆರೆಮೇಲೆ ಅನಾವರಣವಾಗಿದೆ. ಯಶ್ ಅವರನ್ನು ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರದಲ್ಲಿ ನೋಡಬೇಕು ಎನ್ನುವುದು ರಾಧಿಕಾ ಪಂಡಿತ್ ಆಸೆ ಆಗಿತ್ತು. ಅದೇ ರೀತಿ ದ್ವಿಪಾತ್ರದಲ್ಲಿ ಬೇರೆ ಬೇರೆ ಆಯಾಮಗಳಿರುವ ಪಾತ್ರ ಮಾಡಬೇಕು ಎಂದು ಟಿವಿ9 ವಾಹಿನಿ ಸಂದರ್ಶನದಲ್ಲಿ ಹೇಳಿದ್ದರು. 'ಟಾಕ್ಸಿಕ್' ಚಿತ್ರದಲ್ಲಿ ತಂದೆ ಮಗನಾಗಿ ದ್ವಿಪಾತ್ರದಲ್ಲಿ ನಟಿಸಿ ರಾಧಿಕಾ ಅವರ ಒಂದು ಆಸೆ ಈಡೇರಿಸಿದ್ದ ಯಶ್ ಈಗ ರಾವಣನಾಗಿ ಮತ್ತೊಂದು ಆಸೆ ನೆರವೇರಿಸಿದ್ದಾರೆ.

'KGF' ಸಿನಿಮಾ ಬಳಿಕ ಯಶ್ ಒಂದು ಪೌರಾಣಿಕ ಅಥವಾ ಐತಿಹಾಸಿಕ ಪಾತ್ರ ಮಾಡಬೇಕು ಎಂದು ನಟ ಪುನೀತ್ ರಾಜ್‌ಕುಮಾರ್ ಸಹ ಬಯಸಿದ್ದರು. ಸುವರ್ಣ ನ್ಯೂಸ್ ವಾಹಿನಿಗಾಗಿ ಯಶ್ ಹಾಗೂ ಪುನೀತ್ ಇಬ್ಬರನ್ನು ನಟಿ ತಾರಾ ಸಂದರ್ಶನ ಮಾಡಿದ್ದರು. ಅದರಲ್ಲಿ ಈ ಬಗ್ಗೆ ಪುನೀತ್ ಇಂಗಿತ ವ್ಯಕ್ತಪಡಿಸಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ. ರಾವಣನಾಗಿ ನಟಿಸುವುದು ಮಾತ್ರವಲ್ಲದೇ ಚಿತ್ರವನ್ನು ಯಶ್ ನಿರ್ಮಾಣ ಮಾಡಿದ್ದಾರೆ. ವಿದೇಶಗಳಲ್ಲಿ ದೊಡ್ಡದಾಗಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ದಿದ್ದಾರೆ.

ಸೋನಿ ಪಿಕ್ಚರ್ಸ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಮಾಡಿದೆ. ಮೊದಲ ದಿನ ಚಿತ್ರದ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಎರಡನೇ ದಿನ ಬುಕ್ಕಿಂಗ್ ಜೋರಾಗಿದೆ. ದೀಪಾವಳಿ ವೀಕೆಂಡ್‌ನಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ಕಿದೆ.