'ಟಾಕ್ಸಿಕ್' ಸೋಲಿನಿಂದ ಕಂಗೆಟ್ಟಿದ್ದ ಯಶ್ ಈಗ 'ರಾಮಾಯಣ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇಷ್ಟು ದಿನ ಸಿನಿಮಾ ಶೂಟಿಂಗ್, ಪ್ರಮೋಷನ್, ರಿಲೀಸ್ ಅಂತೆಲ್ಲಾ ಸಖತ್ ಬ್ಯುಸಿಯಾಗಿದ್ದ ಯಶ್ ಈಗ ಮಡದಿ ರಾಧಿಕಾ ಪಂಡಿತ್ ಜೊತೆ ವಿದೇಶ ಪ್ರವಾಸದಲ್ಲಿದ್ದಾರೆ.
ವಿದೇಶದಲ್ಲಿ ಪತಿ ಜೊತೆ ಜಾಲಿ ಮೂಡ್ನಲ್ಲಿರುವ ರಾಧಿಕಾ ಪಂಡಿತ್ ವೀಡಿಯೋ ಹಂಚಿಕೊಂಡಿದ್ದಾರೆ. "ಶರತ್ಕಾಲದಲ್ಲಿ ವಾತಾವರಣವು ಹಿತವಾದ ತಂಪಿನಿಂದ ಕೂಡಿದಾಗ, ಜೀವನವು ಮತ್ತೆ ಮೊದಲಿನಿಂದ ಆರಂಭವಾಗುತ್ತದೆ" ಎಂದು ಎಫ್. ಸ್ಕಾಟ್ ಫಿಟ್ಜ್ಗೆರಾಲ್ಡ್, 'ದಿ ಗ್ರೇಟ್ ಗ್ಯಾಟ್ಸ್ಬಿ' ಹೇಳಿಕೆಯನ್ನು ಕ್ಯಾಪ್ಷನ್ ಆಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಾಧಿಕಾ ಪಿಂಕ್ ಕಲರ್ ಸ್ವೆಟ್ ಟೀಶರ್ಟ್ ಅದಕ್ಕೆ ಮ್ಯಾಚಿಂಗ್ ಪ್ಯಾಂಟ್ ತೊಟ್ಟಿದ್ದರೆ ಯಶ್ ಸ್ಟೈಲಿಶ್ ಜಾಕೆಟ್ ಧರಿಸಿ ಮಿಂಚಿದ್ದಾರೆ.
ರಾವಣನಾಗಿ ಯಶ್ ನಟಿಸಿ ನಿರ್ಮಿಸಿರುವ 'ರಾಮಾಯಣ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಈಗಾಗಲೇ 1400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಚಿತ್ರ ಐದನೇ ಸ್ಥಾನಕ್ಕೇರಿದೆ. ಶೀಘ್ರದಲ್ಲೇ 'ಪುಷ್ಪ'-2 ಸಿನಿಮಾ ದಾಖಲೆ ಮುರಿಯುವ ಲೆಕ್ಕಾಚಾರ ಶುರುವಾಗಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಗಳಿಕೆ ಭರ್ಜರಿಯಾಗಿದೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಮೊದಲ ಭಾಗ ಸೂಪರ್ ಹಿಟ್ ಆಗಿದೆ. 2028ರಲ್ಲಿ ಎರಡನೇ ಭಾಗ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಬೇರೆ ಸಿನಿಮಾದಲ್ಲಿ ಯಶ್ ನಟಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಆದಿತ್ಯಧರ್ ನಿರ್ದೇಶನದ ಚಿತ್ರದಲ್ಲಿ ಯಶ್ ಹಾಗೂ ರಣ್ವೀರ್ ಸಿಂಗ್ ಒಟ್ಟಿಗೆ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಈಗಾಗಲೇ ಯಶ್ಗೆ ಸಾಕಷ್ಟು ಫಿಲ್ಮ್ ಮೇಕರ್ಸ್ ಕಥೆ ಹೇಳಿದ್ದಾರೆ. ಯಾವುದನ್ನು ರಾಕಿಂಗ್ ಸ್ಟಾರ್ ಫೈನಲ್ ಮಾಡಿಲ್ಲ. ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೆ ನಿರ್ಮಾಪಕರು, ನಿರ್ದೇಶಕರು ಯಶ್ ಕಾಲ್ಶೀಟ್ ಪಡೆಯಲು ಕಾಯ್ತಿದ್ದಾರೆ. ಯಾರಿಗೆ ಆ ಅವಕಾಶ ಸಿಗುತ್ತೆ ಕಾದು ನೋಡಬೇಕಿದೆ. ಇನ್ನು ಸಿನಿಮಾ ಕೆಲಸದಲ್ಲಿ ಯಶ್ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಯನ್ನು ಮರೆಯುವುದಿಲ್ಲ. ಆಗಾಗ್ಗೆ ಫ್ಯಾಮಿಲಿ ಜೊತೆ ಪ್ರವಾಸಕ್ಕೆ ತೆರಳುತ್ತಾರೆ.