ಮುಂದೆ AI ತಂತ್ರಜ್ಞಾನ ಏನೆಲ್ಲಾ ಚಮತ್ಕಾರಗಳನ್ನು ಮಾಡಬಹುದು ಎಂದು ಊಹಿಸುವುದು ಕಷ್ಟ. ಇನ್ನು ಮನರಂಜನಾ ಕ್ಷೇತ್ರದಲ್ಲಿ ನಿಜಕ್ಕೂ ಹೊಸ ಕ್ರಾಂತಿಯನ್ನೇ ಮಾಡುವ ಸುಳಿವು ಸಿಕ್ತಿದೆ. ಇಲ್ಲದನ್ನೆಲ್ಲಾ ಕಲ್ಪಿಸಿಕೊಂಡು ದೃಶ್ಯ ರೂಪ ಕೊಡುವ ಸಾಮರ್ಥ್ಯ ಇದಕ್ಕಿದೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು AI ಮೂಲಕ ಮತ್ತೆ ಕಟ್ಟಿಕೊಡುವ ಪ್ರಯತ್ನಗಳನ್ನು ಅಭಿಮಾನಿಗಳು ಮಾಡ್ತಿದ್ದಾರೆ. ಈಗಾಗಲೇ ಸಂಪೂರ್ಣ AI ಮೂಲಕ ನಿರ್ಮಿಸಿದ ಸಿನಮಾಗಳು ನಿರ್ಮಾಣ ಆಗ್ತಿವೆ.. 'ಗಗನ್‌ಯಾನ್' ಹೆಸರಿನಲ್ಲಿ ಅಂತಾದೊಂದು ಅದ್ಭುತ ಸಿನಿಮಾ ನಿರ್ಮಾಣ ಆಗ್ತಿದ್ದು ಸದ್ದು ಟ್ರೈಲರ್ ಬಿಡುಗಡೆಯಾಗಿದೆ.

ಅಣ್ಣಾವ್ರ ಮಗ, ಅಭಿಮಾನಿಗಳ ಪ್ರೀತಿಯ ಅಪ್ಪು ಇಹಲೋಕ ತ್ಯಜಿಸಿ ವರ್ಷಗಳ ಕಳೆದಿದೆ. ಆದರೆ ಇವತ್ತಿಗೂ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಜಂಟಿ ಹುಗಾರ್ ಎಂಬುವವರು ಪುನೀತ್ ರಾಜ್‌ಕುಮಾರ್ ಅವರನ್ನು ಹೀರೊ ಮಾಡಿ 'ಗಗನ್‌ಯಾನ್' ಒಂದು AI ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ಅದರ ಸಣ್ಣ ಝಲಕ್ ಈಗ ರಿಲೀಸ್ ಆಗಿ ಗಮನ ಸೆಳೆದಿದೆ. ಗಗನ್ ಎಂಬ 10 ವರ್ಷದ ಬಾಲಕ ಗಗನಯಾತ್ರಿ ಆಗುವ ಕನಸು ಕಾಣುವ ಕಥೆಯನ್ನು 4 ನಿಮಿಷಗಳ AI ವೀಡಿಯೋದಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಗಗನ್ ಪಾತ್ರಕ್ಕೆ ಅಪ್ಪನಾಗಿ ಡಾ. ರಾಜ್‌ಕುಮಾರ್, ಅಣ್ಣನಾಗಿ ಮೋಹನ್ ಲಾಲ್, ಪ್ರೇಯಸಿಯಾಗಿ ರುಕ್ಮಿಣಿ ವಸಂತ್, ಗುರುವಾಗಿ ವಜ್ರಮುನಿ, ಮುಂದೆ ಸಹಾಯಕ್ಕೆ ಬರುವ ಅಂಬರೀಷ್ ಹೀಗೆ ಎಲ್ಲರನ್ನು AI ಮೂಲಕ ಕಟ್ಟಿಕೊಟ್ಟಿರುವುದು ನಿಜಕ್ಕೂ ಅದ್ಭುತ ಎನ್ನುವಂತಿದೆ. ಇಂತಾದೊಂದು ಕಲ್ಪನೆ, ಅದಕ್ಕೆ ಜೀವ ತುಂಬಿರುವ ಜಂಟಿ ಹುಗಾರ್ ಪ್ರತಿಭೆಗೆ ಸಿನಿರಸಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬರೀ ಟ್ರೈಲರ್ ಹೀಗೆ ಇದ್ದರೆ ಇಡೀ ಸಿನಿಮಾ ಹೇಗಿರುತ್ತೆ ? ಯಾವಾಗ ಸಿನಿಮಾ ಬರುತ್ತೆ ಎಂದು ಕಾಮೆಂಟ್ ಮಾಡಿ ಕೇಳ್ತಿದ್ದಾರೆ.

ಮಾಡುತ್ತಿದ್ದ ಸಿನಿಮಾಗಳನ್ನು ಅರ್ಧಕ್ಕೆ ಬಿಟ್ಟು ಪುನೀತ್ ಹೊರಟುಬಿಟ್ಟರು. ಅವರನ್ನು ಮತ್ತೆ ಮತ್ತೆ ತೆರೆಮೇಲೆ ನೋಡುವ ಆಸೆ ಅಭಿಮಾನಿಗಳಿಗಿದೆ. AI ತಂತ್ರಜ್ಞಾನದ ಮೂಲಕ ಅಂತಹ ಅವಕಾಶ ಸಿಗುತ್ತಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಅಣ್ಣಾವ್ರ, ಮೋಹನ್ ಲಾಲ್, ಅಂಬಿ, ಸುಂದರಕೃಷ್ಣ ಅರಸ್, ವಿಷ್ಣುವರ್ಧನ್ ಝಲಕ್ ಅಂತೂ ಕಣ್ಣಿಗೆ ಹಬ್ಬ.

ನನ್ನ ಹೆಸರು ಗಗನ್. ನಾನು ಒಬ್ಬ ಗಗನಯಾತ್ರಿ ಎನ್ನುವ ಪುಟ್ಟ ಬಾಲಕ.. ವರ್ಷಗಳು ಕಳೆದಂತೆ ಯುದ್ಧ ವಿಮಾನ ಪೈಲಟ್ ಆಗಿದ್ದಾನೆ. ತನ್ನ ತಂದೆಯ ಮೇಲಿನ ಪ್ರೀತಿ ಹಾಗೂ ತನ್ನದೇ ಆದ ಭವಿಷ್ಯದ ಹಾದಿ. ತಂದೆ ಮಾತು ದಿಕ್ಕರಿಸಿ ತನ್ನ ಕನಸಿನ ಕಡೆ ಸಾಗುತ್ತಾನೆ. ಕೊನೆಗೆ ತಂದೆಯ ಮನಸ್ಸನ್ನು ದೇಶದ ಜನರ ಮನಸ್ಸನ್ನು ಗೆದ್ದುಬಿಡುತ್ತಾನೆ ಹೀಗೆ ಕಥೆ ಹೇಳಲಾಗಿದೆ.