ಡಾ. ರಾಜ್‌ಕುಮಾರ್ ನಟನೆಯ ಕೆಲ ಸಿನಿಮಾಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದು ಸದ್ದು ಮಾಡಿದೆ. ಮುಂದಿನ 'ಜಗಮೆಚ್ಚಿದ ಮಗ' ಬಣ್ಣ ಮೆತ್ತಿಕೊಂಡು ಬರ್ತಿದೆ. 1972ರಲ್ಲಿ ತೆರೆಕಂಡಿದ್ದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸಿನಿರಸಿಕರು ಈ ಚಿತ್ರವನ್ನು ಮತ್ತೆ ತೆರೆಮೇಲೆ ನೋಡುವ ಅವಕಾಶ ಸಿಕ್ಕಿದೆ. ನಿರ್ಮಾಪಕ, ವಿತರಕ ಉದಯಶಂಕರ್ ಎಂಬುವವರು ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.

ಅಂದಾಜು ಎರಡು ಕೋಟಿ ರೂ. ಬಜೆಟ್‌ನಲ್ಲಿ ಕಪ್ಪು ಬಿಳುಪಿನ 'ಜಗಮೆಚ್ಚಿದ ಮಗ' ಚಿತ್ರವನ್ನು ಬಣ್ಣದಲ್ಲಿ ಬಿಡುಗಡೆ ಮಾಡಲಾಗ್ತಿದೆ. ಅಣ್ಣಾವ್ರ ಅಭಿಮಾನಿ ಆಗಿರುವ ಉದಯಶಂಕರ್ ಇದೀಗ ನೆಚ್ಚಿನ ನಟನ ಮತ್ತೊಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. 'ಪ್ರೇಮದ ಊರಲಿ' ಹಾಗೂ 'ರಾಮಾಯಣ' ಸಿನಿಮಾಗಳ ಆರ್ಭಟ ಕಮ್ಮಿಯಾದ ಬಳಿಕ 'ಜಗಮೆಚ್ಚಿದ ಮಗ' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಬಹಳ ಹಿಂದೆಯೇ 'ಜಗಮೆಚ್ಚಿದ ಮಗ' ಚಿತ್ರವನ್ನು ಬಣ್ಣದಲ್ಲಿ ತೆರೆಗೆ ತರುವ ಪ್ರಯತ್ನ ಆರಂಭವಾಗಿತ್ತು. ಈ ವಿಷಯ ಗೊತ್ತಾಗಿ ಪುನೀತ್ ರಾಜ್‌ಕುಮಾರ್ ಬಹಳ ಸಂತಸಪಟ್ಟಿದ್ದರಂತೆ. 'ಜಗಮೆಚ್ಚಿದ ಮಗ' ಚಿತ್ರ ಮರು ಬಿಡುಗಡೆಯಾದರೆ ನಾನೇ ಮುಂದೆ ನಿಂತು ಪ್ರಚಾರ ಮಾಡುತ್ತೇನೆ ಎಂದು ಅಪ್ಪು ಹೇಳಿದ್ದರಂತೆ. ಈಗ ಅವರು ನಮ್ಮೊಟ್ಟಿಗೆ ಇಲ್ಲ. ಆದರೂ ಅವರು ಆಸೆಪಟ್ಟಂತೆ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

ಅಪ್ಪಾಜಿ ನಟಿಸಿದ ಕಪ್ಪು ಬಿಳುಪಿನ ಸಿನಿಮಾಗಳ ದೊಡ್ಡ ಅಭಿಮಾನಿ ಆಗಿದ್ದರು ಪುನೀತ್ ರಾಜ್‌ಕುಮಾರ್. ಆದರೂ ಆಕ್ಷನ್ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. 'ಜಗಮೆಚ್ಚಿದ ಮಗ' ಕೂಡ ಅದರಲ್ಲಿ ಒಂದಾಗಿತ್ತು. ಎಸ್. ಭಾವನಾರಾಯಣ್ ಕಥೆ ಬರೆದು ಚಿತ್ರ ನಿರ್ಮಾಣ ಮಾಡಿದ್ದರು. ಹುಣಸೂರು ಕೃಷ್ಣಮೂರ್ತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಡಾ. ರಾಜ್‌ಕುಮಾರ್ ಜೊತೆ ಭಾರತಿ ವಿಷ್ಣುವರ್ಧನ್ ನಾಯಕಿಯಾಗಿ ನಟಿಸಿದ್ದರು. ಎಂ. ಪಿ ಶಂಕರ್, ನರಸಿಂಹರಾಜು, ಕೆ. ಎಸ್ ಅಶ್ವಥ್, ಎಂ.ವಿ ರಾಜಮ್ಮ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸತ್ಯಂ ಸಂಗೀತದ ಹಾಡುಗಳಿಗೆ ಸ್ವತಃ ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ಬರೆದಿದ್ದರು. ಚಿತ್ರಕ್ಕಾಗಿ ಕೆಲಸ ಮಾಡಿದ ಬಹುತೇಕರು ನಮ್ಮ ಜೊತೆಗಿಲ್ಲ. ಆದರೆ ಆ ಸಿನಿಮಾ ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ.

'ಜಗಮೆಚ್ಚಿದ ಮಗ' ಚಿತ್ರಕ್ಕೆ ಹೆಚ್‌. ಆರ್ ಭಾರ್ಗವ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಮುಂದೆ 'ಮಂತ್ರಾಲಯ ಮಹಾತ್ಮೆ' ಚಿತ್ರವನ್ನು ಕೂಡ ಬಣ್ಣದಲ್ಲಿ ತೆರೆಗೆ ತರಲು ನಿರ್ಮಾಪಕ, ವಿತರಕ ಉದಯಶಂಕರ್ ಮನಸ್ಸು ಮಾಡಿದ್ದಾರೆ. ಅಭಿಮಾನಿಗಳು 'ಜಗಮೆಚ್ಚಿದ ಮಗ' ಚಿತ್ರವನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಶಿವರಾಜ್‌ಕುಮಾರ್ ಕೂಡ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸುವ ಸಾಧ್ಯತೆಯಿದೆ.