ಸಿನಿಮಾ ನೋಡಿ ಮಕ್ಕಳು ಹಾಳಾಗ್ತಾರೆ ಎಂದು ಕೆಲವರು ಗೊಣಗುತ್ತಾರೆ. ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಂಕ್ ಮಾಡಿ ಸಿನಿಮಾ ನೋಡುವುದನ್ನು ಯಾರು ಒಪ್ಪುವುದಿಲ್ಲ. ಈ ವಿಚಾರ ಶಿಕ್ಷಕರ ಗಮನಕ್ಕೆ ಬಂದರೆ ಪೋಷಕರನ್ನು ಕರೆದು ಬುದ್ಧಿ ಹೇಳ್ತಾರೆ. ಆದರೆ ಸಿನಿಮಾ ನೋಡುವುದಕ್ಕೆ ಕಾಲೇಜು ಮ್ಯಾನೇಜ್‌ಮೆಂಟ್ ರಜೆ ಘೋಷಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.
ತೆಲುಗಿನ 'ಆದರ್ಶ ಕುಟುಂಬಂ' ಸಿನಿಮಾ ಅಕ್ಟೋಬರ್ 30ರಂದು ಬಿಡುಗಡೆ ಆಗ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಜೊತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಇದೀಗ 15 ದಿನ ತಡವಾಗಿ ಸಿನಿಮಾ ಬಿಡುಗಡೆ ಆಗ್ತಿದೆ.
ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ನಲ್ಲಿರುವ ಮಲ್ಲಾರೆಡ್ಡಿ ಕಾಲೇಜಿಗೆ ಚಿತ್ರತಂಡ ಭೇಟಿ ನೀಡಿತ್ತು. ದೊಡ್ಡ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಜೊತೆ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಪ್ರಚಾರ ಮಾಡಿದೆ. ಈ ವೇಳೆ ಮಲ್ಲಾರೆಡ್ಡಿ ಶಿಕ್ಷಣ ಸಂಸ್ಥೆಯ ವೈಸ್ ಚೇರ್ಮನ್ ಪ್ರೀತಿ ರೆಡ್ಡಿ ತೆಗೆದುಕೊಂಡ ನಿರ್ಧಾರ ಭಾರೀ ಚರ್ಚೆಗೆ ಕಾರಣವಾಗಿದೆ. ಅಕ್ಟೋಬರ್ 30ರಂದು 'ಆದರ್ಶ ಕುಟುಂಬಂ' ಸಿನಿಮಾ ಬಿಡುಗಡೆ ಆಗ್ತಿದ್ದು ಎಲ್ಲರೂ ಸಿನಿಮಾ ನೋಡಿ. ಅದಕ್ಕೆ ಆ ದಿನ ಕಾಲೇಜಿಗೆ ರಜೆ ಘೋಷಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇನ್ನು ವೇದಿಕೆ ಮೇಲೆ ನಟ ವಿಕ್ಟರಿ ವೆಂಕಟೇಶ್ ಜೊತೆ ಪ್ರೀತಿ ರೆಡ್ಡಿ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾಗಾಗಿ ಕಾಲೇಜಿಗೆ ರಜೆ ಘೋಷಿಸುವುದು ಎಷ್ಟು ಸರಿ ಎಂದು ಭಾರೀ ಚರ್ಚೆ ನಡೀತಿದೆ. ಕಾಲೇಜಿನಲ್ಲಿ ಸಿನಿಮಾ ಪ್ರಚಾರ ಮಾಡುವುದೇ ಸರಿಯಾದ ನಿರ್ಣಯ ಅಲ್ಲ. ಸಾಲದ್ದಕ್ಕೆ ವಿದ್ಯಾರ್ಥಿಗಳು ಸಿನಿಮಾ ನೋಡಿ ಎಂದು ರಜೆ ಕೊಡುವುದು ಸರೀನಾ ಎಂದು ಪ್ರಶ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮನವಿ ಮೇರೆಗೆ ರಜೆ ಘೋಷಿಸಿದ್ದಾಗಿ ಪ್ರೀತಿ ರೆಡ್ಡಿ ತಿಳಿಸಿದ್ದಾರೆ.
ಸಿನಿಮಾ ನೋಡುವುದಕ್ಕೆ ಅಕ್ಟೋಬರ್ 30ಕ್ಕೆ ರಜೆ ಎಂದು ಪ್ರೀತಿ ರೆಡ್ಡಿ ಹೇಳುತ್ತಿದ್ದಂತೆ ವಿದ್ಯಾರ್ಥಿಗಳು ಸಂಭ್ರಮದಿಂದ ಕಿರುಚಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ತ್ರಿವಿಕ್ರಮ್ ಶ್ರೀನಿವಾಸ್ ಇತ್ತೀಚೆಗೆ ಯಾವುದೇ ಸಿನಿಮಾ ಕಟ್ಟಿಕೊಟ್ಟಿರಲಿಲ್ಲ. ವೆಂಕಟೇಶ್ ಹಾಗೂ ತ್ರಿವಿಕ್ರಮ್ ಕಾಂಬೋ ಹಿಟ್ ಆಗಿತ್ತು. ಅವರಿಬ್ಬರು ಮತ್ತೆ ಕೈ ಜೋಡಿಸಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
Malla Reddy College in Hyderabad declared a holiday to watch a movie!
— ಅಲ್ಪಸಂಖ್ಯಾತ (@alpasankhyata) October 24, 2026
I’m sure students will add a new section to their resumes 👇🏻
Movies Watched: 🎬 pic.twitter.com/k6S8Zc9klr