ತೆಲುಗು ನಟ ಗಿರಿಬಾಬು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಇಂದು(ನವೆಂಬರ್ 14) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

600ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಗಿರಿಬಾಬು ನಟಿಸಿದ್ದರು. ಚಿಕ್ಕಂದಿನಲ್ಲೇ ನಟನೆ ಕಡೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದ್ದರು. 1973ರಲ್ಲಿ ತೆರೆಕಂಡ 'ಜಗಮೆ ಮಾಯ' ಎಂಬ ಸಿನಿಮಾದಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದರು. ಹೀರೊ, ವಿಲನ್, ಕಾಮಿಡಿಯನ್ ಆಗಿ ಮಾತ್ರವಲ್ಲದೇ ಬಳಿಕ ಪೋಷಕ ಪಾತ್ರಗಳಲ್ಲಿ ಕೂಡ ಮಿಂಚಿದ್ದರು.

ಹೆಚ್ಚು ಕಮ್ಮಿ 100 ಸಿನಿಮಾಗಳಲ್ಲಿ ಗಿರಿಬಾಬು ಹೀರೊ ಆಗಿ ನಟಿಸಿದ್ದರು. 300 ಚಿತ್ರಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಇನ್ನುಳಿದಂತೆ ಕಾಮಿಡಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಜಾನಪದ, ಪೌರಾಣಿಕ, ಸಾಮಾಜಿಕ, ಕೌಬಾಯ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಗಿರಿಬಾಬು ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ನಿರ್ದೇಶಕನಾಗಿ ಬರಹಗಾರನಾಗಿಯೂ ತೆಲುಗು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು. 'ಇಂದ್ರಜಿತ್', 'ನೀ ಸುಖಮೆ ನೇ ಕೊರುಕುಂಟ' ಅವರು ಆಕ್ಷನ್ ಕಟ್ ಹೇಳಿದ್ದ ಸಿನಿಮಾಗಳು.

ತೆಲುಗು ಚಿತ್ರರಂಗದ ಮೂರು ತಲೆಮಾರಿನ ನಟರ ಜೊತೆ ಗಿರಿಬಾಬು ನಟಿಸಿದ್ದು ವಿಶೇಷ. ಮಹೇಶ್ ಬಾಬು ತಂದೆ ಕೃಷ್ಣ ಜೊತೆ ಆತ್ಮೀಯ ಒಡನಾಟ ಅವರಿಗಿತ್ತು. ಅವರೊಟ್ಟಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಎನ್‌ಟಿಆರ್, ಎಎನ್‌ಆರ್, ಕೃಷ್ಣ ಜೊತೆ ನಟಿಸಿದ್ದ ಗಿರಿಬಾಬು ಬಳಿಕ ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ ರೀತಿಯ ಎರಡನೇ ತಲೆಮಾರಿನ ನಟರ ಜೊತೆಗೂ ಮಿಂಚಿದ್ದರು. ಬಳಿಕ ಪ್ರಭಾಸ್, ಜ್ಯೂ. ಎನ್‌ಟಿಆರ್ ರೀತಿಯ ಈ ಜಮಾನದ ನಾಯಕನಟರ ಜೊತೆಗೂ ಗಿರಿಬಾಬು ನಟಿಸಿದ್ದು ವಿಶೇಷ.

ಗಿರಿಬಾಬು ಅಗಲಿಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. 8 ಜೂನ್ 1943ರಂದು ಅಂದಿನ ಮದ್ರಾಸ್ ಭಾಗವಾಗಿದ್ದ ಪ್ರಕಾಶಂ ಜಿಲ್ಲೆಯ ರವಿನೂತಲಾ ಎಂಬ ಹಳ್ಳಿಯಲ್ಲಿ ಅವರು ಜನಿಸಿದ್ದರು. ಎರ್ರ ಶೇಷಗಿರಿ ರಾವ್ ಎನ್ನುವುದು ಅವರ ಮೂಲ ಹೆಸರು. ಬಳಿಕ ಗಿರಿಬಾಬು ಎಂದು ಬದಲಿಸಿಕೊಂಡಿದ್ದರು. 2013ರಲ್ಲಿ ಬಂದ 'ಅನ್ನಿ ಮಂಚಿ ಸಕುನಮುಲೆ' ಅವರು ನಟಿಸಿದ ಕೊನೆಯ ಸಿನಿಮಾ.