ಹನು ರಾಘವಪುಡಿ ನಿರ್ದೇಶನದ 'ಫೌಜಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಟೀಸರ್ ಸಖತ್ ಸದ್ದು ಮಾಡ್ತಿದೆ. ಟೀಸರ್‌ನಲ್ಲಿ ಹಿಟ್ಲರ್ ಭೇಟಿ ಮಾಡಿ ನೇತಾಜಿ ಸುಭಾಷ್‌ ಚಂದ್ರಬೋಸ್ ಮಾತನಾಡುವ ದೃಶ್ಯ ಇದೆ. ಸಿನಿರಸಿಕರು ಇದನ್ನು ನೋಡಿ ಹುಬ್ಬೇರಿಸಿದ್ದರು. ಆದರೆ ಈ ಬಗ್ಗೆ ಸ್ವತಃ ನೇತಾಜಿ ಮೊಮ್ಮಗ ಚಂದ್ರಕುಮಾರ್ ಬೋಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಚಿತ್ರತಂಡ ಆ ಸನ್ನಿವೇಶ ಬದಲಿಸಬೇಕು. 'ಫೌಜಿ' ಚಿತ್ರ ನಿರ್ದೇಶಕ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಚಂದ್ರಕುಮಾರ್ ಬೋಸ್ ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ತಿರುಚುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಯೇಟಿವ್ ಫ್ರೀಡಂ ಹೆಸರಿನಲ್ಲಿ ಇತಿಹಾಸವನ್ನು ತಿರುಚಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನೇತಾಜಿ ಮತ್ತು ಹಿಟ್ಲರ್ ನಡುವಿನ ಭೇಟಿಯನ್ನು ಚಿತ್ರದಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೇತಾಜಿ ಹಾಗೂ ಹಿಟ್ಲರ್ ಜೊತೆ ಸರಿ ಸಮನಾಗಿ ಮಾತನಾಡಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಪಡೆಯುವುದು ಅವರ ಗುರಿಯಾಗಿತ್ತು. ಆದರೆ ಈ ಚಿತ್ರದಲ್ಲಿ ಕಾಲ್ಪನಿಕ ಪಾತ್ರವನ್ನು ವಿಜೃಂಭಿಸಿ ತೋರಿಸಲು ನೇತಾಜಿಯ ಘನತೆಯನ್ನು ಕಡಿಮೆ ಮಾಡಬಾರದು ಎಂದು ಚಂದ್ರಕುಮಾರ್ ಬೋಸ್ ಕಿವಿಮಾತು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಿರ್ದೇಶಕ ಹನು ರಾಘವಪುಡಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು, ಆ ದೃಶ್ಯವನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಐತಿಹಾಸಿಕ ಘಟನೆಗಳ ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು 'ಫೌಜಿ' ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗ್ತಿದೆ. ಭಾರತದ ಗೂಢಾಚಾರನೊಬ್ಬರ ಸಾಹಸಮಯ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ಬ್ರಿಟೀಷರಿಗೆ ಸಿಂಹಸ್ವಪ್ನನಾಗಿದ್ದ ಫೌಜಿ(ಪ್ರಭಾಸ್) ಕಥೆ ಇದು ಎಂದು ಟೀಸರ್‌ನಲ್ಲಿ ತೋರಿಸಲಾಗಿದೆ. ಹೀಗೆ ಫೌಜಿ ಪಾತ್ರಕ್ಕೆ ಬಿಲ್ಡಪ್ ಕೊಡಲು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಅವರನ್ನು ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಫೌಜಿ ಬಗ್ಗೆ ಹಿಟ್ಲರ್ ಬಳಿ ನೇತಾಜಿ ಹೆಮ್ಮೆಯಿಂದ ಮಾತನಾಡುವಂತೆ ಚಿತ್ರಿಸಲಾಗಿದೆ. ಹೀಗೆ ಸುಭಾಷ್ ಚಂದ್ರಬೋಸ್ ಮೂರನೇ ವ್ಯಕ್ತಿ ಬಗ್ಗೆ ಹೆಮ್ಮೆಯಿಂದ ಮಾತನಾಡಿರಲಿಲ್ಲ. ಇದೆಲ್ಲಾ ಸುಳ್ಳು ಎಂದು ಇದೀಗ ಮೊಮ್ಮಗ ಹೇಳಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಹಾಗೂ ಟಿ-ಸೀರಿಸ್ ಜಂಟಿಯಾಗಿ 'ಫೌಜಿ' ಚಿತ್ರ ನಿರ್ಮಾಣ ಮಾಡ್ತಿದೆ. ಅಂದಾಜು 500-700 ಕೋಟಿ ರೂ. ಬಜೆಟ್ ಸಿನಿಮಾ ಇದು. ಈ ಹಿಂದೆ 'ಸೀತಾರಾಮಂ' ಸಿನಿಮಾ ತೆರೆಗೆ ತಂದಿದ್ದ ಹನು ರಾಘವಪುಡಿ ಇಂತಹ ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಬೇಕಿದೆ. ಇದೆಲ್ಲದರ ನಡುವೆ ಇದೀಗ ವಿವಾದಕ್ಕೆ ಸಿಲುಕಿದೆ. ಟೀಸರ್ ನೋಡಿದಾಗಲೇ ಕೆಲವರು ಈ ಬಗ್ಗೆ ಕಿಡಿಕಾರಿದ್ದರು.