ತೆಲುಗು ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆದರೆ ಅವರ ಸಿನಿಮಾಗಳು ಎಲ್ಲವೂ ಗೆಲ್ಲುತ್ತಿಲ್ಲ. ಸೋಲು ಗೆಲುವಿನ ಹಾವುಏಣಿ ಆಟ ಮುಂದುವರೆದಿದೆ. ಇನ್ನು ಆಪ್ತರು, ಅಭಿಮಾನಿಗಳ ಪಾಲಿಗೆ ಅವರು ಡಾರ್ಲಿಂಗ್. ಊಟೋಪಚಾರದ ವಿಚಾರದಲ್ಲಿ ಎತ್ತಿದ ಕೈ. ಸಹ ಕಲಾವಿದರಿಗೆ ಪ್ರಭಾಸ್ ಆಗಾಗ್ಗೆ ಭೂರಿಭೋಜನ ವ್ಯವಸ್ಥೆ ಮಾಡ್ತಾರೆ. ಸದ್ಯ 'ಫೌಜಿ' ಚಿತ್ರದ ಸಹನಟಿ ಇಮಾನ್ವಿಗೆ ಭರ್ಜರಿ ಬಾಡೂಟದ ಗಿಫ್ಟ್ ನೀಡಿದ್ದಾರೆ.
ಪ್ರಭಾಸ್ ಅವರದ್ದು ಹೇಳಿಕೇಳಿ ರಾಜಮನೆತನದ ಹಿನ್ನೆಲೆಯುಳ್ಳ ಕುಟುಂಬದವರು. ಹಾಗಾಗಿ ಅದಕ್ಕೆ ತಕ್ಕಂತೆ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ಪ್ರಭಾಸ್ ಭೋಜನಪ್ರಿಯರು. ಅದರಲ್ಲೂ ಮಾಂಸಾಹಾರ ಅಂದ್ರೆ ಅಚ್ಚುಮೆಚ್ಚು. ಪ್ರಭಾಸ್ ಸೆಟ್ನಲ್ಲಿ ಇದ್ದಾರೆ ಅಂದ್ರೆ 30-40 ಬಗೆಯ ಭಕ್ಷ್ಯಭೋಜನ ಇರಲೇಬೇಕು. ಈ ಬಗ್ಗೆ ಸಾಕಷ್ಟು ಬಾರಿ ಪ್ರಭಾಸ್ ಹಾಗೂ ಆಪ್ತರು ಹೇಳಿದ್ದಾರೆ. ತಮ್ಮ ಜೊತೆ ನಟಿಸುವ ಕಲಾವಿದರಿಗೂ ಇದೇ ರೀತಿ ಊಟದ ವ್ಯವಸ್ಥೆ ಮಾಡುತ್ತಾರೆ.
ಶ್ರದ್ಧಾ ಕಪೂರ್, ಪೃಥ್ವಿರಾಜ್ ಸುಕುಮಾರ್ ಸೇರಿದಂತೆ ಹಲವರಿಗೆ ಪ್ರಭಾಸ್ ಹೀಗೆ ಭೂರಿ ಭೋಜನ ಕಳುಹಿಸಿದ್ದು ಸುದ್ದಿ ಆಗಿತ್ತು. 'ಸಲಾರ್' ಸಿನಿಮಾ ಚಿತ್ರೀಕರಣದ ವೇಳೆ ನನ್ನ ಹೋಟೆಲ್ ರೂಮ್ ತುಂಬಾ ವಿವಿಧ ಬಗೆಯ ತಿಂಡಿ ತಿನಿಸನ್ನು ಪ್ರಭಾಸ್ ಕಳುಹಿಸಿಕೊಟ್ಟಿದ್ದರು. ಅದನ್ನೆಲ್ಲಾ ಇಡಲು ಇನ್ನೊಂದು ರೂಮ್ ಬೇಕಾಗಿತ್ತು ಎಂದು ಪೃಥ್ವಿರಾಜ್ ಹೇಳಿದ್ದರು. ಸದ್ಯ 'ಫೌಜಿ' ಎಂಬ ಚಿತ್ರದಲ್ಲಿ ಪ್ರಭಾಸ್ ನಟಿಸ್ತಿದ್ದಾರೆ. ಹೊಸಪ್ರತಿಭೆ ಇಮಾನ್ವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ಈ ಬಾರಿ ಇಮಾನ್ವಿ ಹುಟ್ಟುಹಬ್ಬಕ್ಕೆ ಪ್ರಭಾಸ್ ಹೀಗೆ ಹತ್ತಾರು ಬಗೆಯ ಭಕ್ಷ್ಯಭೋಜನ ಕಳುಹಿಸಿಕೊಟ್ಟಿದ್ದಾರೆ. ಡೈನಿಂಗ್ ಟೇಬಲ್ ಮೇಲೆ ಅದನ್ನೆಲ್ಲಾ ಇಟ್ಟು ಇಮಾನ್ವಿ ಅಚ್ಚರಿಯಾಗಿ ಕಣ್ಣುಮುಚ್ಚಿ ಕೆಳಗೆ ಕೂತುಬಿಟ್ಟಿದ್ದಾರೆ. ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. ಐತಿಹಾಸಿಕ ಕಥಾಹಂದರದ 'ಫೌಜಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ.
'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟಿದ್ದ ಹನು ರಾಘವಪುಡಿ ಈ ಚಿತ್ರವನ್ನು ತೆರೆಗೆ ತರ್ತಿದ್ದಾರೆ ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ. ಡಿಸೆಂಬರ್ 5ಕ್ಕೆ ಸಿನಿಮಾ ಬಿಡುಗಡೆ ತಯಾರಿ ನಡೆದಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
#Prabhas’ Birthday Treat for His #Fauzi Co-Star #Imanvi. pic.twitter.com/2hC0YEsqas
— Gulte (@GulteOfficial) October 14, 2026