ತೆಲುಗು ನಟ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಫೌಜಿ' ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಮೂಲಕ ಯಂಗ್ ರೆಬಲ್ ಸ್ಟಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ. ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಪೀರಿಯಡ್ ಆಕ್ಷನ್ ಸಿನಿಮಾದಲ್ಲಿ ಬ್ರಿಟೀಷರ ಹುಟ್ಟಡಗಿಸಿದ್ದ ಭಾರತೀಯ ಸೈನಿಕನಾಗಿ ಪ್ರಭಾಸ್ ದರ್ಶನ ಕೊಟ್ಟಿದ್ದಾರೆ.
ಹನು ರಾಘವಪುಡಿ ನಿರ್ದೇಶನದಲ್ಲಿ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಣ ಹಾಗೂ ಟಿ-ಸೀರೀಸ್ ಪ್ರಸ್ತುತಿಯಲ್ಲಿ 'ಫೌಜಿ' ಸಿನಿಮಾ ಮೂಡಿ ಬರ್ತಿದೆ. ಈ ಗ್ಲಿಂಪ್ಸ್ ಎರಡನೇ ಮಹಾಯುದ್ಧದ ರೋಚಕ ಹಿನ್ನೆಲೆಯೊಂದಿಗೆ ತೆರೆದುಕೊಳ್ಳುತ್ತದೆ. ಮೇ 29, 1942 ರಂದು ಬರ್ಲಿನ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅಡಾಲ್ಫ್ ಹಿಟ್ಲರ್ ನಡುವೆ ನಡೆದ ಮಾತುಕತೆಯ ತುಣುಕನ್ನು ನೋಡಬಹುದು. ಭಾರತದಲ್ಲಿ ಬ್ರಿಟೀಷರ ವಿರುದ್ದ ಹೋರಾಡಲು ಹಿಟ್ಲರ್ ನೆರವನ್ನು ನೇತಾಜಿ ಕೋರುವಂತೆ ಚಿತ್ರಿಸಲಾಗಿದೆ. ಎರಡು ಶತಮಾನಗಳ ಕಾಲ ಆಳಿದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರು ಹಿಮ್ಮೆಟ್ಟಿಸಲು ಸಾಧ್ಯವೇ ಎಂದು ಹಿಟ್ಲರ್ ಅನುಮಾನ ವ್ಯಕ್ತಪಡಿಸುತ್ತಾನೆ. ಇದಕ್ಕೆ ನೇತಾಜಿ ಪ್ರತ್ಯುತ್ತರ ಏನು ಎನ್ನುವುದನ್ನು ನೋಡಬಹುದು.
ಭಾರತೀಯ ಸೇನಾ ಶಕ್ತಿಗಿಂತಲೂ ಗೂಢಚಾರಿಕೆಯ ಬುದ್ಧಿವಂತಿಕೆಯೇ ಹೆಚ್ಚು ಬಲಶಾಲಿ ಹಿಟ್ಲರ್ಗೆ ಸುಭಾಷ್ ಚಂದ್ರ ಬೋಸ್ ತಿಳಿ ಹೇಳುತ್ತಾರೆ. ಅವರು ಬ್ರಿಟಿಷ್ ಗುಪ್ತಚರ ಜಾಲಕ್ಕೇ ನಡುಕ ಹುಟ್ಟಿಸಿರುವ ಭಾರತೀಯ ರಹಸ್ಯ ಅಧಿಕಾರಿಯೊಬ್ಬನ ಕುರಿತು ಪ್ರಸ್ತಾಪಿಸುತ್ತಾರೆ. ಆತ ಭಗವದ್ಗೀತೆಯಿಂದ ಪ್ರೇರಿತವಾದ ಅತ್ಯಂತ ಸಂಕೀರ್ಣವಾದ ಸೀಕ್ರೆಟ್ ಕೋಡ್ ಬಳಸುತ್ತಿರುತ್ತಾನೆ. ಜರ್ಮನಿಯ ವಿಶ್ವವಿಖ್ಯಾತ 'ಎನಿಗ್ಮಾ ಕೋಡ್'ಗಿಂತಲೂ ಡಿಕೋಡ್ ಮಾಡಲು ಕಷ್ಟ ಎಂದು ವಿವರಿಸುತ್ತಾರೆ.
ಬ್ರಿಟೀಷರು 'ಫೌಜಿ' ಎಂದು ಕರೆಯುತ್ತಿದ್ದ ಆ ರೆಬೆಲ್ ಸೈನಿಕ ಯಾರು ಎನ್ನುವುದರ ಪರಿಚಯವಾಗುತ್ತದೆ. ಕೊನೆಗೆ 'ಫೌಜಿ' ಪ್ರಭಾಸ್ ದೊಡ್ಡ ಮೆಷಿನ್ ಗನ್ ಹಿಡಿದು ಬ್ರಿಟಿಷ್ ಪಡೆಗಳ ವಿರುದ್ಧ ಯುದ್ಧ ಮಾಡುವಂತಹ ಸನ್ನಿವೇಶವನ್ನು ನೋಡಬಹುದು. 'ಕೆಜಿಎಫ್-2' ಚಿತ್ರದಲ್ಲಿ ಯಶ್ ಬಳಸುವ ದೊಡ್ಡಮ್ಮ ಹೆಸರಿನ ಗನ್ ಅನ್ನು ಕೂಡ ಇದು ಮೀರಿಸುವಂತಿದೆ. ಟೀಸರ್ನಿಂದಲೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಇಮಾನ್ವಿ ನಟಿಸುತ್ತಿದ್ದು, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದಾ ಹಾಗೂ ಭಾನು ಚಂದರ್ ಅವರಂತಹ ದಿಗ್ಗಜ ಕಲಾವಿದರು ಮುಖ್ಯ ತಾರಾಗಣದಲ್ಲಿದ್ದಾರೆ.
'ಫೌಜಿ' ಚಿತ್ರಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ, ಸುದೀಪ್ ಚಟರ್ಜಿ ಛಾಯಾಗ್ರಹಣ ಹಾಗೂ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಇದೆ. 2027ರ ಮಾರ್ಚ್ 19ರಂದು ತೆಲುಗು, ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ.