ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 45 ದಾಟಿದ್ರು ಮದುವೆ, ಫ್ಯಾಮಿಲಿ ಎಂದು ತಲೆ ಕೆಡಿಸಿಕೊಳ್ಳದೇ ಸಿನಿಮಾ ಜಪ ಮಾಡುತ್ತಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.

ಸದ್ಯ ನಾಲ್ಕೈದು ಸಿನಿಮಾಗಳು ಪ್ರಭಾಸ್ ಕೈಯಲ್ಲಿವೆ. ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಜೊತೆ ಮೂರು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಯಂಗ್ ರೆಬಲ್ ಸ್ಟಾರ್ ನಟನೆಯ ಮುಂದಿನ ಸಿನಿಮಾಗಳು ಬಹಳ ನಿರೀಕ್ಷೆ ಹುಟ್ಟಾಕ್ಕಿವೆ.

ಸ್ಪಿರಿಟ್: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾ ಇದು. ಪ್ರಭಾಸ್ ಅವರನ್ನು ಸಂಪೂರ್ಣವಾಗಿ ಹೊಸ ಅವತಾರದಲ್ಲಿ ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಪ್ರಭಾಸ್ ಸ್ಟ್ರಾಂಗ್ ಸ್ಕ್ರೀನ್ ಪ್ರೆಸೆನ್ಸ್ ಅನ್ನು ವಂಗಾ ಯಾವ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ಕುತೂಹಲ ಈಗಲೇ ಅಭಿಮಾನಿಗಳಲ್ಲಿ ಮೂಡಿದೆ. ತೃಪ್ತಿ ದಿಮ್ರಿ ಹಾಗೂ ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ 29ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಕಲ್ಕಿ 2898 AD- 2: ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ಭೈರವ ಹಾಗೂ ಕರ್ಣನಾಗಿ ಎರಡು ಪಾತ್ರಗಳಲ್ಲಿ ಯಶ್ ತೆರೆಮೇಲೆ ಬಂದಿದ್ದರು. ಕಲ್ಕಿ ಅವತಾರ ಮತ್ತು ಮಹಾಭಾರಯದ ಕರ್ಣನ ಕಥೆಯನ್ನು ಲಿಂಕ್ ಮಾಡಿ ಹೊಸ ಕಥೆ ಹೇಳುವ ಪ್ರಯತ್ನ ಚಿತ್ರದಲ್ಲಿ ಮಾಡಲಾಗ್ತಿದೆ. ಈಗಾಗಲೇ ಸೀಕ್ವೆಲ್ ಚಿತ್ರೀಕರಣ ಶುರುವಾಗಿದೆ. ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ವೈಜಯಂತಿ ಮೂವಿಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ.

ಫೌಜಿ: ಹನು ರಾಘವಪುಡಿ ನಿರ್ದೇಶನದ 'ಫೌಜಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಡಿಸೆಂಬರ್ 5ರಂದು ಸಿನಿಮಾ ತೆರೆಗಪ್ಪಳಿಸಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿದೆ. ಈ ಚಿತ್ರ 1940ರ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟಕ್ಕೆ ಕೊಂಡಯ್ಯಲಿದೆ. ಸೈನಿಕನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಇತಿಹಾಸದ ಮರೆತುಹೋದ ಪುಟಗಳನ್ನು ಚಿತ್ರದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ.

ಸಲಾರ್‌- 2: ಕನ್ನಡದ 'ಉಗ್ರಂ' ಕಥೆಯನ್ನು ಎರಡು ಭಾಗಗಳಾಗಿ 'ಸಲಾರ್' ರೂಪದಲ್ಲಿ ಪ್ರಶಾಂತ್ ನೀಲ್ ತೆರೆಗೆ ತರ್ತಿದ್ದಾರೆ. ಈಗಾಗಲೇ ಮೊದಲ ಭಾಗ ತೆರೆಗೆ ಬಂದು ಗೆದ್ದಿದೆ. ಸೀಕ್ವೆಲ್ ಶೌರ್ಯಾಂಗ ಪರ್ವ ಮುಂದಿನ ವರ್ಷ ಬಿಡುಗಡೆ ಆಗುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಹೀಗೆ ಒಂದಕ್ಕಿಂತ ಒಂದು ಅದ್ಧೂರಿ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.