ರಾಜಮೌಳಿ ನಿರ್ದೇಶನದ 'ಮಗಧೀರ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಆ ಚಿತ್ರದ ಪ್ರತಿ ದೃಶ್ಯ, ಪ್ರತಿ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಜಕ್ಕಣ್ಣ ದೊಡ್ಡ ದೊಡ್ಡ ಕನಸು ಕಾಣಲು, ದೃಶ್ಯಕಾವ್ಯಗಳನ್ನು ತೆರೆಗೆ ತರುವ ಮನಸ್ಸು ಮಾಡಲು ಆ ಸಿನಿಮಾ ತುಂಬಿದ ಬಲ ಅಷ್ಟಿಷ್ಟಲ್ಲ. ಅದೇ ಸಿನಿಮಾ ರಾಮ್ಚರನ್ ವೃತ್ತಿಜೀವನಕ್ಕೂ ತಿರುವು ಕೊಟ್ಟಿತ್ತು.
'ಮಗಧೀರ' ಚಿತ್ರದ ಕಾಲಭೈರವ(ರಾಮ್ಚರಣ್), ಮಿತ್ರಾವಿಂಧ(ಕಾಜಲ್ ಅಗರ್ವಾಲ್), ರಣದೇವ್ ಬಿಲ್ಲಾ(ದೇವ್ ಗಿಲ್), ಶೇರ್ಖಾನ್(ಶ್ರೀಹರಿ) ಪಾತ್ರಗಳ ರೀತಿಯಲ್ಲೇ ಬಾದ್ಶಾ ಎಂಬ ಕುದುರೆ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಕಾಲಭೈರವನ ಜೀವ ಉಳಿಸುವ ಮಿತ್ರಾವಿಂದಳನ್ನು ಪಡೆಯಲು ಸಹಾಯ ಮಾಡುವ ಪಾತ್ರದಲ್ಲಿ ಆ ಕುದುರೆಯನ್ನು ತೋರಿಸಲಾಗಿತ್ತು. ರಾಮ್ಚರಣ್ ಚಿಕ್ಕಂದಿನಿಂದ ಕುದುರೆ ಸವಾರಿ ಕಲಿತವರು. ಅದನ್ನು ಸೊಗಸಾಗಿ ತೆರೆಮೇಲೆ ತೋರಿಸಿದ್ದು ರಾಜಮೌಳಿ.
'ಮಗಧೀರ' ಚಿತ್ರದಲ್ಲಿ ಬಳಸಿದ್ದ ಆ ಕುದುರೆಯನ್ನು ರಾಮ್ಚರಣ್ ತಮ್ಮ ಮುಂದಿನ ಸಿನಿಮಾದಲ್ಲಿ ಕೂಡ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಸುಕುಮಾರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಚರಣ್ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಕೂಡ ಕುದುರೆ ಸವಾರಿ ದೃಶ್ಯಗಳಿವೆ. ಅದಕ್ಕಾಗಿ ಅದೇ ಕುದುರೆಯನ್ನು ಬಳಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಅಂದಹಾಗೆ ಆ ಕುದುರೆಯ ನಿಜವಾದ ಹೆಸರು ಬಾದಲ್.. ಅದು ಹೆಣ್ಣು ಕುದುರೆ.. ರಾಜಸ್ಥಾನದಲ್ಲಿ 'ಮಗಧೀರ' ಚಿತ್ರೀಕರಣಕ್ಕೆ ಬಳಸಿಕೊಂಡಿದ್ದರು. ಸಂಪೂರ್ಣವಾಗಿ ತರಬೇತಿ ಪಡೆಯದ ಕುದುರೆ ಅದಾಗಿತ್ತು. ಆ ಪಾತ್ರಕ್ಕೆ ಕೊಂಚ ಒರಟಾದ ಕುದುರೆ ಇರಲಿ ಎಂದು ಅದನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರೀಕರಣದ ವೇಳೆ ಒಮ್ಮೆ ರಾಮ್ಚರಣ್ ಬಿದ್ದು ಕಾಲು ಮುರಿದುಕೊಂಡಿದ್ದರು. ಆದರೂ ಬಹಳ ಇಷ್ಟಪಟ್ಟು ರಾಮ್ಚರಣ್ ಆ ಕುದುರಿ ಖರೀದಿಸಿ ತಂದು ತಮ್ಮ ಫಾರ್ಮ್ಹೌಸ್ನಲ್ಲಿ ಸಾಕುತ್ತಿದ್ದಾರೆ. ಬಾದಲ್ ಒಂದು ಮರಿ ಹಾಕಿದ್ದು ಅದನ್ನು ರಾಮ್ಚರಣ್ ಮಗಳಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ.
'ಮಗಧೀರ' ಚಿತ್ರದ ಆ ಐಕಾನಿಕ್ ಬಾದ್ಶಾ ಕುದುರೆಯನ್ನು ರಾಮ್ಚರಣ್ ತಮ್ಮ ಮುಂದಿನ ಚಿತ್ರಕ್ಕೆ ಬಳಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ರಾಮ್ಚರಣ್ ಫಾರ್ಮ್ಹೌಸ್ನಲ್ಲಿ 15ಕ್ಕೂ ಹೆಚ್ಚು ಕುದುರೆಗಳಿವೆ. ಅದರಲ್ಲಿ ಬಾದ್ಶಾ ಬಹಳ ಅಚ್ಚುಮೆಚ್ಚು ಎಂದು ಅವರು ಹೇಳುತ್ತಿರುತ್ತಾರೆ. ಇನ್ನು 'RC17' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಚರ್ಚೆ ಕೂಡ ನಡೀತಿದೆ. 'ಆಕಾಶಂಲೊ ಒಕತಾರ' ಚಿತ್ರದಲ್ಲಿ ನಟಿಸಿರುವ ನಟಿ ಸಾತ್ವಿಕಾ ವೀರವಲ್ಲಿ ಹೆಸರು ಕೂಡ ಚರ್ಚೆಗೆ ಬಂದಿದೆ.
'ಪುಷ್ಪ' ಸರಣಿ ಬಳಿಕ ಸುಕುಮಾರ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ 'ರಂಗಸ್ಥಳಂ' ಚಿತ್ರದಲ್ಲಿ ಚರಣ್-ಸುಕ್ಕು ಒಟ್ಟಿಗೆ ಕೆಲಸ ಮಾಡಿದ್ದರು. 'ಪೆದ್ದಿ' ಬಳಿಕ ಮೆಗಾ ಪವರ್ ಸ್ಟಾರ್ ನಟಿಸುತ್ತಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ.