ಬೋಲ್ಡ್ ಕಂಟೆಂಟ್ ಸಿನಿಮಾಗಳು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ಅಶ್ಲೀಲ, ಹಸಿಬಿಸಿ ದೃಶ್ಯಗಳು ಮಾತ್ರವಲ್ಲ, ಸಮಾಜವನ್ನು ಪ್ರಶ್ನಿಸುವಂತಹ ವಿಚಾರಗಳನ್ನು ಹೊತ್ತು ಸಾಕಷ್ಟು ಸಿನಿಮಾಗಳು ಬಂದು ಹೋಗಿದೆ. 20 ವರ್ಷಗಳ ಹಿಂದೆ ತೆಲುಗಿನಲ್ಲಿ ಬಂದಿದ್ದ 'ಆರುಗುರು ಪತಿವ್ರತಲು' ಎಂಬ ಸಿನಿಮಾ ಇದೇ ರೀತಿ ಚರ್ಚೆ ಹುಟ್ಟಾಕ್ಕಿತ್ತು.

ಇದೀಗ ಹೊಸ ರೂಪದಲ್ಲಿ ಈ ವಿವಾದಾತ್ಮಕ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಅಧಿಕೃತವಾಗಿ ಈ ಸಿನಿಮಾ ಮರು ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಇವಿವಿ ಸತ್ಯನಾರಾಯಣ ನಿರ್ಮಿಸಿ, ನಿರ್ದೇಶನ ಮಾಡಿದ್ದ ಸಿನಿಮಾ ಇದು. 2004ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಅದ್ಭುತ ಸಿನಿಮಾಗಳನ್ನು ಕೊಟ್ಟ ಇವಿವಿ ಸತ್ಯನಾರಾಯಣ ಇಂತಾದೊಂದು ಸಿನಿಮಾ ಮಾಡ್ಬೇಕಿತ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು.

ಆರು ಮಂದಿ ಸ್ನೇಹಿತೆಯರು ಆರು ವರ್ಷಗಳ ಬಳಿಕ ಮತ್ತೆ ಭೇಟಿ ಆಗುತ್ತಾರೆ. ಅವರಲ್ಲಿ ಒಬ್ಬಳಿಗೆ ಮದುವೆ ನಿಶ್ಚಯವಾಗಿರುತ್ತದೆ. ಆ ಬಗ್ಗೆ ಚರ್ಚಿಸುವ ವೇಳೆ ಉಳಿದ ಐದು ಜನ ಸಾಂಸಾರಿಕ ಜೀವನ ಹೇಗಿದೆ ? ಏನೆಲ್ಲಾ ಆಗಿದೆ ಎನ್ನುವುದನ್ನು ಫ್ಲಾಶ್‌ಬ್ಯಾಕ್ ತಂತ್ರದಲ್ಲಿ ಕಥೆ ಹೇಳುತ್ತಾರೆ. ಐದು ಮಂದಿಯ ಐದು ಕಥೆಗಳನ್ನು ಕಟ್ಟಿಕೊಟ್ಟ ಮೇಲೆ ಆರನೇ ಕಥೆಯೊಂದಿಗೆ ಸಿನಿಮಾ ಮುಗಿಯುತ್ತದೆ.

ವೈವಾಹಿಕ ಜೀವನದ ಸಾಧಕ-ಬಾಧಕಗಳ ಚರ್ಚೆ ಚಿತ್ರದಲ್ಲಿದೆ. ಒಬ್ಬೊಬ್ಬರದ್ದು ಒಂದು ಪರಿಸ್ಥಿತಿ. ಮದುವೆ ಹೆಸರಿನಲ್ಲಿ ನಡೆಯುವ ಮೋಸ, ದೈಹಿಕ ಸಂಬಂಧ ಎಷ್ಟು ಮುಖ್ಯ, ಗಂಡ- ಹೆಂಡತಿ ಇಬ್ಬರಲ್ಲೂ ಈಗೋ ಜಾಸ್ತಿ ಆದ್ರೆ ಏನೆಲ್ಲಾ ಆಗುತ್ತೆ ಹೀಗೆ ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. ಗಂಭೀರ ವಿಚಾರವನ್ನು ಕೊಂಚ ತಮಾಷೆಯಾಗಿಯೂ ಹೇಳುವ ಪ್ರಯತ್ನ ಮಾಡಲಾಗಿದೆ. ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಅಮೃತಾ ಆನಂದಮಯಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವತ್ತಿಗೆ ಕೊಂಚ ಬೋಲ್ಡ್ ಎನಿಸಿದ್ದ ದೃಶ್ಯಗಳನ್ನು ಈಗ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.

ಡಿಸೆಂಬರ್ 11ರಂದು 'ಆರುಗುರು ಪತಿವ್ರತಲು' ಸಿನಿಮಾ ಮರುಬಿಡುಗಡೆ ಆಗ್ತಿದೆ. ಡಿಜಿಟಲ್ 4k ವರ್ಷನ್‌ನಲ್ಲಿ ಸಿನಿಮಾ ತೆರೆಗೆ ತರಲಾಗ್ತಿದೆ. ಪೊಚ್ಚಮ್ಮ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮರುಬಿಡುಗಡೆ ಆಗ್ತಿದೆ. ಎರಡು ದಶಕಗಳ ವಿವಾದ ಹುಟ್ಟಾಕ್ಕಿದ್ದ ಸಿನಿಮಾ ಈ ಬಾರಿ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕು.