ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ತೆಲುಗಿನ 'ಜನವರಿ ಪನ್ನೆಂಡು ವಿಡುದಲ' ಚಿತ್ರದ 'ದಿವಿಕಿ ದಿವಿಕಿ ಡಿಕ್ಕುಂ' ಹಾಡಿದು. ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ ಬಿಂದಾಸ್ ಆಗಿ ಹೆಜ್ಜೆ ಹಾಕಿರುವ ಡ್ಯಾನ್ಸ್ ನಂಬರ್ ಸಖತ್ ವೈರಲ್ ಆಗ್ತಿದೆ.

ಅನಿಲ್ ರಾವಿಪುಡಿ ನಿರ್ದೇಶನದ ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ವಿಕ್ಟರಿ ವೆಂಕಟೇಶ್ ಹಾಗೂ ಕಲ್ಯಾಣ್ ರಾಮ್ ನಟಿಸಿರುವ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಟೈಟಲ್ಲೇ ಹೇಳುವಂತೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಪ್ರತಿ ವರ್ಷ ಸುಗ್ಗಿ ಸಂಭ್ರಮಕ್ಕೆ ಅನಿಲ್ ರಾವಿಪುಡಿ ಒಂದು ಸಿನಿಮಾ ರಿಲೀಸ್ ಮಾಡಿ ಗೆಲ್ತಿದ್ದಾರೆ. ಈ ವರ್ಷ 'ಮನ ಶಂಕರವರ ಪ್ರಸಾದ್‌ಗಾರು' ಸಿನಿಮಾ ತೆರೆಗೆ ಕಂಡು ಹಿಟ್ ಬಾರಿಸಿದ್ದರು. ಮುಂದಿನ ವರ್ಷಕ್ಕೆ 'ಜನವರಿ ಪನ್ನೆಂಡು ವಿಡುದಲ' ಸಿನಿಮಾ ತೆರೆಗಪ್ಪಳಿಸಲಿದೆ.

ತಮ್ಮ ಸಿನಿಮಾಗಳನ್ನು ಅನಿಲ್ ಬಹಳ ವಿಭಿನ್ನವಾಗಿ ಪ್ರಚಾರ ಮಾಡುತ್ತಾರೆ. ಸ್ಪೆಷಲ್ ವೀಡಿಯೋ ಶೂಟ್ ಮಾಡಿ ಸಾಂಗ್, ಟ್ರೈಲರ್ ಹಾಗೂ ಸಿನಿಮಾ ಬಿಡುಗಡೆ ದಿನಾಂಕ ಸಮಯ ಘೋಷಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೊದಲ ಹಾಡಿನ ಬಿಡುಗಡೆಗೂ ಅಂಥದ್ದೇ ಒಂದು ವೀಡಿಯೋ ಮಾಡಿದ್ದರು. ಅದು ಸಖತ್ ವೈರಲ್ ಆಗಿತ್ತು. ಇದೀಗ ಸಾಂಗ್ ಕೂಡ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ವಿಶೇಷ ಅಂದ್ರೆ ಕರ್ನಾಟಕದ ಮೇಲುಕೋಟೆ ಸುತ್ತಾಮುತ್ತಾ ಹಾಡಿ ಚಿತ್ರೀಕರಣ ಮಾಡಲಾಗಿದೆ.

ಹೌದು ಮೇಲುಕೋಟೆಯ ರಾಯ ಗೋಪುರ, ಚೆಲುವನಾರಾಯಣ ಸ್ವಾಮಿ ದೇವಾಲಯ ದೇವಸ್ಥಾನದ ಹತ್ತಿರದಲ್ಲೇ ಇರುವ ದೊಡ್ಡ ಕಲ್ಯಾಣಿ, ಅಕ್ಕ-ತಂಗಿ ಅವಳಿ ಕೊಳಗಳ ಬಳಿ ಹಾಡನ್ನು ಸೆರೆಹಿಡಿಯಲಾಗಿದೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತದ ಹಾಡಿಗೆ ಅನಂತ್ ಶ್ರೀರಾಮ್ ಸಾಹಿತ್ಯ ಬರೆದಿದ್ದು ಮಧುಪ್ರಿಯಾ ಹಾಗೂ ಹರಿಪ್ರಿಯಾ ದನಿಯಾಗಿದ್ದಾರೆ. ಬೃಂದಾ ಮಾಸ್ಟರ್ ಕೊರಯೋಗ್ರಫಿಯಲ್ಲಿ ಸಾಂಗ್ ಮಜವಾಗಿದೆ.

ಲಂಗಾ ದಾವಣಿ ತೊಟ್ಟು ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ ಹೆಜ್ಜೆಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್ ಸಾಥ್ ಸಿಕ್ಕಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದ್ದು ಹಾಡಿನಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳ ಕೂಡ ಹೈಲೆಟ್ ಆಗಿದೆ. ಹಾಡಿನ ಹುಕ್ ಸ್ಟೆಪ್ ಅಂತೂ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಮುಂದೆ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮತ್ತಷ್ಟು ವೈರಲ್ ಆಗುವ ಸುಳಿವು ಸಿಕ್ಕಿದೆ. ಇನ್ನು 24 ಗಂಟೆಗಳಲ್ಲಿ 'ದಿವಿಕಿ ದಿವಿಕಿ ಡಿಕ್ಕುಂ' ಸಾಂಗ್ 40 ಲಕ್ಷಕ್ಕೂ ಹೆಚ್ಚು ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ.