ಚಿತ್ರ: ಆದರ್ಶ ಕುಟುಂಬಂ- ಹೌಸ್ 47 - AK47

ಚಿತ್ರ: ಆದರ್ಶ ಕುಟುಂಬಂ- ಹೌಸ್ 47 - AK47

ನಿರ್ದೇಶಕ: ತ್ರಿವಿಕ್ರಮ್ ಶ್ರೀನಿವಾಸ್

ಕಲಾವಿದರು: ವೆಂಕಟೇಶ್, ಶ್ರೀನಿಧಿ ಶೆಟ್ಟಿ, ನಿವೇತಾ ಪೆತುರಾಜ್, ಸತ್ಯ ಮುಂತಾದವರು.

ಸಂಗೀತ: ತಮನ್

ನಿರ್ಮಾಣ: ಹಾರಿಕಾ & ಹಾಸಿನಿ ಕ್ರಿಯೇಷನ್ಸ್

'ಅತಡು', 'ಜುಲಾಯಿ', 'ಅತ್ತಾರಿಂಟಿಕಿ ದಾರೇದಿ', 'ಸನ್ ಆಫ್ ಸತ್ಯಮೂರ್ತಿ', 'ಅಲಾ ವೈಕುಂಠಪುರಂಲೊ' ರೀತಿಯ ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳ ಸಾರಥಿ ತ್ರಿವಿಕ್ರಮ್ ಶ್ರೀನಿವಾಸ್. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಮೂಲಕ ಮನೆ ಮಾತಾದ ನಟ ವಿಕ್ಟರಿ ವೆಂಕಟೇಶ್. ಸಿನಿಮಾ ಟೈಟಲ್ 'ಆದರ್ಶ ಕುಟುಂಬಂ- ಹೌಸ್ 47 - AK47'.. ಇದಿಷ್ಟು ಕೇಳಿದ್ಮೇಲೆ ಸಿನಿಮಾ ಕಥೆ ಏನು ಎನ್ನುವುದು ಹೇಳುವುದೇ ಬೇಡ.

ತ್ರಿವಿಕ್ರಮ್ ಹಾಗೂ ವೆಂಕಟೇಶ್ ಜೊತೆಯಾಗಿದ್ದಾರೆ ಅಂದಾಗಲೇ 'ಆದರ್ಶ ಕುಟುಂಬಂ' ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿದೆ. ದಸರಾಗೂ ಮುನ್ನ ತೆರೆಗೆ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ದೀಪಾವಳಿಗೂ ಮುನ್ನ ಬಿಡುಗಡೆ ಆಗುವಂತಾಗಿದೆ. ತಮನ್ ಸಂಗೀತ ಚಿತ್ರಕ್ಕಿದೆ. ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾ ಹೇಗಿದೆ ? ರಿವ್ಯೂ ಮುಂದೆ ಓದಿ.

ಕಥೆ

ಚಿಟ್ಟಿಬಾಬು(ವೆಂಕಟೇಶ್) ಹಾಗೂ ಸ್ವರ್ಣ(ಶ್ರೀನಿಧಿ ಶೆಟ್ಟಿ) ಅವರದ್ದು ಮಧ್ಯಮವರ್ಗದ ಕುಟುಂಬ. ದಂಪತಿಗೆ ಇಬ್ಬರು ಮಕ್ಕಳು. ಮೆಕ್ಯಾನಿಕ್‌ನನ್ನು ಪ್ರೀತಿಸುತ್ತಿರುವ ಅವನ ಮಗಳು ಮಗಳು, ಅನಾರೋಗ್ಯದಿಂದ ಬಳಲುತ್ತಿರುವ ಮಗ. ಮನೆ ಯಜಮಾನ ಸರಿಯಾದ ಉದ್ಯೋಗ ಇಲ್ಲದೇ ಸಾಲದ ಶೂಲಕ್ಕೆ ಸಿಕ್ಕಿ ಕುಟುಂಬ ಒದ್ದಾಡುತ್ತಿರುತ್ತದೆ. ಅದೇ ಸಮಯದಲ್ಲಿ ಅಚ್ಚರಿ ಎನ್ನುವಂತೆ ಲಾಟರಿಯಲ್ಲಿ 100 ಕೋಟಿ ರೂ. ಸಿಗುತ್ತೆ. ಅಲ್ಲಿಂದ ಚಿಟ್ಟಿಬಾಬು ಫ್ಯಾಮಿಲಿ ಒಂದು ವಿಲ್ಲಾ ಖರೀದಿಸಿ ಶಿಫ್ಟ್ ಆಗುತ್ತಾರೆ.

ಇತ್ತ ಬಿಹಾರದ ಚಂದನ್ (ಉದಯಬೀರ್ ಸಂಧು) ಹಾಗೂ ನೀಲಾ (ದೇವಿಯಾನಿ ಶರ್ಮಾ) ದರೋಡೆಕೋರರ ಗ್ಯಾಂಗ್ ಸರಣಿ ದರೋಡೆ, ಕೊಲೆಗಳನ್ನು ಮಾಡುತ್ತಿರುತ್ತಾರೆ. ಕೊನೆಗೆ ಆ ಗ್ಯಾಂಗ್ ಕಣ್ಣು ತೆಲಂಗಾಣದ ಮೇಲೆ ಬಿದ್ದಿದೆ ಎಂದು ಗೊತ್ತಾಗಿ ಎಸ್‌ಪಿ ದಾಮೋದರ್ ನಾಯ್ಡು (ನಾರಾ ರೋಹಿತ್) ಮತ್ತವರ ತಂಡ ಹುಡುಕಾಟ ನಡೆಸುತ್ತಿರುತ್ತೆ. ಚಿಟ್ಟಿಬಾಬು ಕುಟುಂಬವನ್ನು ಬಿಹಾರದ ದರೋಡೆಕೋರ ಗ್ಯಾಂಗ್ ಟಾರ್ಗೆಟ್ ಮಾಡುತ್ತದೆ. ಮುಂದೆ ಏನಾಗುತ್ತದೆ ? ಆ ಗ್ಯಾಂಗ್‌ ವಕ್ರದೃಷ್ಟಿಯಿಂದ ಚಿಟ್ಟಿಬಾಬು ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ತಾನೆ ? ಎನ್ನುವುದು ಇನ್ನುಳಿದ ಕಥೆ.

ಸಿನಿಮಾ ಹೇಗಿದೆ ?

ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಢಮಾರ್ ಎನ್ನುವುದು ಇತ್ತೀಚೆಗೆ ಕೆಲ ದೊಡ್ಡ ಸಿನಿಮಾ ಮೇಲೆ ಪ್ರೇಕ್ಷಕರ ಆರೋಪ. 'ಆದರ್ಶ ಕುಟುಂಬಂ' ಚಿತ್ರದ ವಿಚಾರದಲ್ಲೂ ಇದು ಪುನರಾವರ್ತನೆಯಾಗಿದೆ. ಸದ್ಯ ವೈಲೆಂಟ್ ಆಕ್ಷನ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಗನ್, ರಕ್ತಪಾತ, ಅಬ್ಬರದ ಬಿಜಿಎಂ ರಾರಾಜಿಸ್ತಿದೆ. ಇದೇ ಅಂಶವನ್ನು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರದೊಂದಿಗೆ ಸೇರಿಸಿ ತ್ರಿವಿಕ್ರಮ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಬಿಹಾರ ದರೋಡೆಕೋರರ ಆರ್ಭಟದ ಮೂಲಕ ಸಿನಿಮಾ ಶುರುವಾಗುತ್ತೆ. ಬಳಿಕ ನಿಧಾನವಾಗಿ ಕಥಾನಾಯಕನ ಫ್ಯಾಮಿಲಿ ಪರಿಚಯ ಮಾಡಿಸುತ್ತಾರೆ.

ವೆಂಕಟೇಶ್ ಸಿನಿಮಾಗಳಲ್ಲಿ ಫ್ಯಾಮಿಲಿ, ಫನ್ ಅಂಶಗಳು ಹೆಚ್ಚು. ತ್ರಿವಿಕ್ರಮ್ ಸಿನಿಮಾಗಳಲ್ಲಿ ಕೌಟುಂಬಿಕ ಸಂಬಂಧಗಳು, ಭಾವೋದ್ವೇಗ, ಆದರ್ಶಗಳು, ಕಾಮಿಡಿ ಪಂಚ್ ಹೈಲೆಟ್. ಎರಡನ್ನು ಸೇರಿಸಿ 'ಆದರ್ಶ ಕುಟುಂಬಂ' ಸಿನಿಮಾ ಕಥೆ ಹೇಳಲಾಗಿದೆ. ಫಸ್ಟ್ ಹಾಫ್ ತ್ರಿವಿಕ್ರಮ್ ಶೈಲಿಯ ಮನರಂಜನೆ ಚಿತ್ರದಲ್ಲಿದೆ. 100 ಕೋಟಿ ರೂ. ಲಾಟರಿ ವಿಚಾರ ಕಥೆಗೆ ದೊಡ್ಡ ತಿರುವು ನೀಡುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಚಿಟ್ಟಿಬಾಬು ಹಿನ್ನೆಲೆಯನ್ನು ತೋರಿಸಲಾಗಿದೆ. ಆದರೆ ಫ್ಲಾಶ್‌ಬ್ಯಾಕ್ ಎಪಿಸೋಡ್ ಅಷ್ಟೇನು ಪರಿಣಾಮಕಾರಿ ಎನಿಸುವುದಿಲ್ಲ.

ಒಂದು ದರೋಡೆಕೋರರ ಗ್ಯಾಂಗ್ ತಮ್ಮ ಕುಟುಂಬಕ್ಕೆ ತೊಂದರೆ ಕೊಡುವುದು, ಅದರಿಂದ ತಪ್ಪಿಸಿಕೊಳ್ಳಲು ನಾಯಕ ಮಾಡುವ ಕಸರತ್ತು, ಇಂತಹ ವಿಷಯಗಳು ಈಗಾಗಲೇ ಕೆಲ ಸಿನಿಮಾಗಳಲ್ಲಿ ಬಂದಿದೆ. ಅದನ್ನೇ ಕೊಂಚ ಕುತೂಹಲಭರಿತವಾಗಿ ತೋರಿಸಲು ತ್ರಿವಿಕ್ರಮ್ ಪ್ರಯತ್ನಿಸಿದ್ದಾರೆ. ಕೆಲವೆಡೆ ಲಾಜಿಕ್ ಮಿಸ್ ಎನಿಸಿಕೊಂಡರೂ ಒಂದಷ್ಟು ಟ್ವಿಸ್ಟ್ ಹಾಗೂ ಟರ್ನ್‌ಗಳು ಬಂದು ಸಿನಿಮಾ ನೋಡಿಸಿಕೊಳ್ಳುತ್ತದೆ.

ಕಲಾವಿದರ ನಟನೆ

ವೆಂಕಟೇಶ್ ಅಭಿನಯದ ಬಗ್ಗೆ ಬಿಡಿಸಿ ಹೇಳುವುದು ಬೇಡ. ಫ್ಯಾಮಿಲಿಮ್ಯಾನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ಅವ್ರು ನಟಿಸಿದ್ದಾರೆ. ಹಾಗಾಗಿ ಚಿಟ್ಟಿಬಾಬು ಪಾತ್ರವನ್ನು ಬಹಳ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಗೊತ್ತೇಯಿದೆ. ಆಕ್ಷನ್ ಸನ್ನಿವೇಶಗಳಲ್ಲಿ ಕೂಡ ಅಬ್ಬರಿಸಿದ್ದಾರೆ. ಇನ್ನು ಸ್ವರ್ಣ ಪಾತ್ರದಲ್ಲಿ ಕರಾವಳಿ ಚೆಲುವೆ ಶ್ರೀನಿಧಿ ಶೆಟ್ಟಿ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ. ಎರಡು ಮೂರು ದೃಶ್ಯಗಳಲ್ಲಿ ನಿವೇತಾ ಪೆಚುರಾಜ್ ಬಿಂದಾಸ್ ಆಗಿ ದರ್ಶನ ಕೊಟ್ಟಿದ್ದಾರೆ. ಸತ್ಯ ಕಾಮಿಡಿ ಚಿತ್ರದ ಪ್ಲಸ್ ಪಾಯಿಂಟ್.

ತಂತ್ರಜ್ಞರ ತಂಡ

ತ್ರಿವಿಕ್ರಮ್ ಶ್ರೀನಿವಾಸ್ ಬರವಣಿಗೆಯಲ್ಲಿ ಮೊದಲಿನ ಮೊನಚು ಕಾಣಿಸುತ್ತಿಲ್ಲ. ವೆಂಕಿ ಹಾಗೂ ತ್ರಿವಿಕ್ರಮ್ ಕಾಂಬೋ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆ ಮಟ್ಟಕ್ಕೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವುದಿಲ್ಲ. ತಮ್ಮ ಸಂಗೀತ ಸೊಗಸಾಗಿದೆ. ಆದರೆ ಯಾವುದೇ ಹಾಡು ನೆನಪಿನಲ್ಲಿ ಉಳಿಯುವುದಿಲ್ಲ. ಇನ್ನುಳಿದಂತೆ ಛಾಯಾಗ್ರಹಣ ಹಾಗೂ ಸಂಕಲನ ಉತ್ತಮವಾಗಿದೆ.

ಕೊನೆಯದಾಗಿ

ಒಂದಷ್ಟು ನ್ಯೂನ್ಯತೆಗಳ ನಡುವೆ ಕೂಡ 'ಆದರ್ಶ ಕುಟುಂಬಂ' ತಕ್ಕ ಮಟ್ಟಿಗೆ ರಂಜಿಸುತ್ತದೆ. ಕೆಲ ಕಾಮೆಡಿ ದೃಶ್ಯಗಳು ಇಷ್ಟವಾಗುತ್ತದೆ. ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋಗಿ ಒಮ್ಮೆ ನೋಡಿ ಸುಮ್ಮನಾಗಬಹುದು.

ರೇಟಿಂಗ್: 2.5/5