ಬಹುಭಾಷಾ ನಟಿ ರಮ್ಯಾಕೃಷ್ಣ ಇವತ್ತಿಗೂ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 'ಜೈಲರ್'- 2 ಚಿತ್ರದಲ್ಲಿ ರಜನಿಕಾಂತ್ ಮಡದಿಯಾಗಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಕನ್ನಡದಲ್ಲಿ ಕೂಡ ಕೆಲ ಸಿನಿಮಾಗಳಲ್ಲಿ ಆಕೆ ಮಿಂಚಿದ್ದಾರೆ.

ಅಲ್ಲು ಅರ್ಜುನ್ ನಟನೆಯ 'ರಾಕಾ' ಚಿತ್ರದಲ್ಲಿ ರಮ್ಯಾಕೃಷ್ಣ ನಟಿಸುತ್ತಿದ್ದಾರೆ. ಅಮ್ಮೋರು, ನೀಲಾಂಬರಿ, ಶಿವಗಾಮಿ ರೀತಿಯ ಪಾತ್ರಗಳಲ್ಲಿ ರಮ್ಯಾಕೃಷ್ಣ ಅವರನ್ನು ಮರೆಯೋಕೆ ಸಾಧ್ಯವಿಲ್ಲ. Raw Talks With VK ಪಾಡ್‌ಕಾಸ್ಟ್‌ನಲ್ಲಿ ರಮ್ಯಾಕೃಷ್ಣ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ರಮ್ಯಾಕೃಷ್ಣ ಮಾತನಾಡಿದ್ದಾರೆ.

2003ರಲ್ಲಿ ನಿರ್ದೇಶಕ ಕೃಷ್ಣವಂಶಿ ಅವರನ್ನು ರಮ್ಯಾಕೃಷ್ಣ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಇದ್ದಾನೆ. ಕೃಷ್ಣವಂಶಿ ಹೈದರಾಬಾದ್‌ನಲ್ಲಿ ನೆಲೆಸಿದ್ದು ರಮ್ಯಾಕೃಷ್ಣ ಚೆನ್ನೈನಲ್ಲಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಅದಕ್ಕೆ ಇಬ್ಬರೂ ದೂರ ದೂರ ವಾಸಿಸುತ್ತಿದ್ದಾರೆ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಡಿವೋರ್ಸ್ ವದಂತಿ ಬಗ್ಗೆ ರಮ್ಯಾಕೃಷ್ಣ ಮೌನ ಮುರಿದಿದ್ದಾರೆ.

"ನಾವು ಇವತ್ತಿಗೂ ದಂಪತಿಗಳಾಗಿ ಇದ್ದೀವಿ. ಆದ್ರೆ ಪ್ರೊಫೆಷನಲ್ ಕಾರಣಕ್ಕೆ ನಾವು ಬೇರೆ ಬೇರೆ ನಗರಗಳಲ್ಲಿ ಸಂತೋಷದಿಂದ ವಾಸಿಸುತ್ತಿದ್ದೇವೆ. ಮಗ ಹುಟ್ಟಿದ ಬಳಿಕ ನಾನು ಧಾರಾವಾಹಿಗಳಲ್ಲಿ ನಟಿಸುವಾಗ ಪ್ರತಿ 15 ದಿನಗಳಿಗೊಮ್ಮೆ ಹೈದರಾಬಾದ್‌ನಿಂದ ಚೆನ್ನೈಗೆ ಹೋಗುತ್ತಿದ್ದೆ. ಆಗ ಮಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹಾಗಾಗಿ ಮಗನನ್ನು ಚೆನ್ನೈನಲ್ಲೇ ಓದಿಸುವುದಾಗಿ ಪತಿಗೆ ಹೇಳ್ದೆ. ಅದು ಹಾಗೆ ಮುಂದುವರೆಯಿತು. ಅದಕ್ಕೆ ಏನೋ ಈಗ ನಾವು ಪ್ರತಿದಿನ ಜಗಳವಾಡುವುದಕ್ಕಿಂತ ಸ್ನೇಹಿತರಂತೆ ಇದ್ದೇವೆ. ಮದುವೆ ಯಾಕೆ ನಾವಿಬ್ಬರು ಲಿವಿಂಗ್ ಟು ಗೆದರ್ ಅಲ್ಲಿ ಇರೋಣ ಎಂದು ಅವ್ರು(ಕೃಷ್ಣವಂಶಿ) ಮೊದ್ಲೆ ಹೇಳಿದ್ರು. ನಾನು ಆಗ ಅದಕ್ಕೆ ಒಪ್ಪಿಕೊಳ್ಳಬೇಕಿತ್ತು ಅನ್ನಿಸುತ್ತೆ" ಎಂದಿದ್ದಾರೆ.

ಒಟ್ಟಾರೆ ಡಿವೋರ್ಸ್ ವದಂತಿಗೆ ರಮ್ಯಾಕೃಷ್ಣ ತೆರೆ ಎಳೆದಿದ್ದಾರೆ. ಇನ್ನು ಮದುವೆ ಹಿಂದಿನ ದಿನ ಕೂಡ 'ಸಿಂಹಾದ್ರಿ' ಚಿತ್ರದ ಐಟಂ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿದ್ದೆ. ನಮ್ಮ ಮದುವೆ ವಿಷಯ ಬಹಳ ಗುಟ್ಟಾಗಿ ಇತ್ತು. ಸೆಟ್‌ನಲ್ಲಿ 'ಚಿನ್ನದಮ್ಮೆ ಚೀಕುಲು' ಸಾಂಗ್ ಚಿತ್ರೀಕರಣ ನಡೀತಿತ್ತು. ಅಲ್ಲಿದ್ದವರಿಗೆಲ್ಲಾ ನಮ್ಮ ಮದುವೆ ವಿಷಯ ಗೊತ್ತಾಗಿತ್ತು. ಚಿತ್ರೀಕರಣ ತಡವಾಗಿ ಅಯ್ಯೋ ನನ್ನ ಮದುವೆ ನಾಳೆ, ಬೇಗ ಮುಗಿಸಿ ಹೋಗಬೇಕು ಎಂದು ಹೇಳುವಂತಾಯಿತು ಎಂದು ರಮ್ಯಾಕೃಷ್ಣ ನಕ್ಕಿದ್ದಾರೆ.

ನಟಿಯರ ನಡುವಿನ ಪೈಪೋಟಿ ಬಗ್ಗೆ ಕೂಡ ರಮ್ಯಾಕೃಷ್ಣ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಖಂಡಿತ ಅಸೂಯೆ ಇರುತ್ತದೆ. ಅವ್ರು ಒಳ್ಳೆ ಸಿನಿಮಾಗಳು ಮಾಡಿದಾಗ ಮನಸ್ಸಲ್ಲಿ ಕೊಂಚ ಉರಿ ಇರುತ್ತದೆ. ಆದರೂ ಮೇಲ್ನೋಟಕ್ಕೆ ಏನು ಇಲ್ಲದಂತೆ ನಗುತ್ತಾ ಮಾತನಾಡುತ್ತಾರೆ ಎಂದು ರಮ್ಯಾಕೃಷ್ಣ ನಕ್ಕಿದ್ದಾರೆ.