ತಮಿಳಿನ 'ಮಹಾರಾಜ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಗೊತ್ತೇಯಿದೆ. ಸದ್ಯ ಸಿನಿಮಾ ಹಾಲಿವುಡ್ನಲ್ಲಿ ರೀಮೆಕ್ ಆಗ್ತಿದೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ಸೇತುಪತಿ ಹೀರೊ ಆಗಿ ನಟಿಸಿದ್ದರು. 2024ರಲ್ಲಿ ಸಿನಿಮಾ ತೆರೆಕಂಡು ಗೆದ್ದಿತ್ತು.
ತಂದೆ ಹಾಗೂ ಮಗಳ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ವಿಜಯ್ ಸೇತುಪತಿ ಮಗಳು ಜ್ಯೋತಿ ಪಾತ್ರದಲ್ಲಿ ಸಚನಾ ನಮಿದಾಸ್ ನಟಿಸಿದ್ದರು. ಆಕೆಯ ನಟನೆಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಕೂಡ 'ಮಹಾರಾಜ' ಸಿನಿಮಾ ನೋಡಿ ಕೊಂಡಾಡಿದ್ದಾರೆ. ಮುಖ್ಯವಾಗಿ ಸಚನಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಅಂಡ್ ಸೈನ್ಸಸ್'ನ ಮಂಡಳಿ ಸದಸ್ಯೆ ಕವಿತಾ ಗುಪ್ತಾ ಅವರೊಂದಿಗಿನ ಸಂಭಾಷಣೆಯಲ್ಲಿ ಹ್ಯಾಂಕ್ಸ್ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಿದರಂತೆ.. ಈ ಬಗ್ಗೆ ದಿ ಹಾಲಿವುಡ್ ರಿಪೋರ್ಟರ್ ವಾಹಿನಿ ಸಂದರ್ಶನದಲ್ಲಿ ಕವಿತಾ ಗುಪ್ತಾ ಹೇಳಿದ್ದಾರೆ.
ಕವಿತಾ ಗುಪ್ತಾ ಮಾತನಾಡಿ "ಟಾಮ್ ಹ್ಯಾಂಕ್ಸ್ ನನಗೆ ಮೊದಲು ಹೇಳಿದ್ದಿಷ್ಟೇ.. 'ಆ ಹುಡುಗಿಯ ವಿಚಾರ ನನಗಿನ್ನೂ ಮರೆಯಲು ಸಾಧ್ಯವಾಗ್ತಿ... ಎಂತಹ ಅದ್ಭುತ ನಟಿ. ನಾನು ಕೂಡ ಹೀಗೆ ನಟಿಸೋಕೆ ಸಾಧ್ಯವಾಗುತ್ತಿರಲಿಲ್ಲ. ನಾನಾಗಿದ್ದರೆ ಆ ವ್ಯಕ್ತಿಯನ್ನೇ ಕೊಂದುಬಿಡುತ್ತಿದ್ದೆ" ಎಂದು ಮೆಲುಕು ಹಾಕಿದ್ದಾರೆ. ಮಗಳ ಮೇಲೆ ನಡೆದ ದೌರ್ಜನ್ಯಕ್ಕೆ ತಂದೆ ಸೇಡು ತೀರಿಸಿಕೊಳ್ಳುವ ಕಥೆ ಚಿತ್ರದಲ್ಲಿತ್ತು.
ಕೇವಲ 20 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಮಹಾರಾಜ' ಸಿನಿಮಾ 190 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಓಟಿಟಿಗೆ ಬಂದು ಸಿನಿಮಾ ಮತ್ತಷ್ಟು ಸದ್ದು ಮಾಡಿದ್ದು ಗೊತ್ತೇಯಿದೆ. ಇನ್ನು ಹಾಲಿವುಡ್ ರೀಮೆಕ್ನಲ್ಲಿ ಖ್ಯಾತ ನಟ ಮ್ಯಾಥ್ಯೂ ಮೆಕಾನಘೆ ನಟಿಸಲಿದ್ದಾರೆ.