ಪ್ರಪಂಚ ದಿನದಿಂದ ದಿನಕ್ಕೆ ಬದಲಾಗ್ತಾ ಬಂದಿದೆ. ಇವತ್ತಿನ ಸೌಕರ್ಯಗಳನ್ನು ನೋಡಿ ನಮ್ಮ ಕಾಲದಲ್ಲಿ ಬಹಳ ಕಷ್ಟ ಇತ್ತು ಎಂದು ಹಿರಿಯರು ಹೇಳ್ತಾರೆ. ಆಧುನಿಕ ಪ್ರಪಂಚದ ಸ್ಪರ್ಧೆ, ಧಾವಂತ, ನೆಮ್ಮದಿ ಇಲ್ಲದ ದಿನಗಳನ್ನು ನೋಡಿ ನಮ್ಮ ಕಾಲವೇ ವಾಸಿ ಎನ್ನುತ್ತಾರೆ. ಚಿತ್ರರಂಗದಲ್ಲಿ ಕೂಡ ಇದೇ ರೀತಿಯ ಬದಲಾವಣೆ ಕಾಣುತ್ತಿದ್ದೇನೆ ಎಂದು ನಟಿ ರಮ್ಯಾಕೃಷ್ಣ ಹೇಳಿದ್ದಾರೆ.
ಈಗಿನ ಕಾಲದಲ್ಲಿ ನಟಿಯರು ಬಹಳ ಪುಣ್ಯ ಮಾಡಿದ್ದಾರೆ. ಕೆಲವೊಮ್ಮೆ ನಾನು ಬಹಳ ಬೇಗ ಹುಟ್ಟಿಬಿಟ್ಟೆ ಅನ್ನಿಸುತ್ತೆ ಎಂದು ರಮ್ಯಾಕೃಷ್ಣ ಹೇಳಿದ್ದಾರೆ. ನಮ್ಮ ಕಾಲದಲ್ಲಿ ನಟಿಯರ ಕಷ್ಟ ಹೇಳತೀರದು. ಕ್ಯಾರವಾನ್ ಇಲ್ಲದ ಸಮಯದಲ್ಲಿ ನಟಿಯರು ಶೌಚಾಲಯಕ್ಕೆ ಹೋಗುವುದು ಕಷ್ಟವಾಗುತ್ತಿತ್ತು. ಹೊರಾಂಗಣ ಚಿತ್ರೀಕರಣದ ವೇಳೆ ಕಾರಿನಲ್ಲೇ ಕಾಸ್ಟ್ಯೂಮ್ ಬದಲಿಸುತ್ತಿದ್ದೆವು, ಅಲ್ಲೇ ಮೇಕಪ್, ಹೇರ್ ಸ್ಟೈಲ್ ಎಲ್ಲಾ ಆಗ್ತಿತ್ತು. ಕೊನೆಗೆ ಕಾರಿನ ಒಳಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತಿದ್ವಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. Raw Talks With VK ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
"ಇವತ್ತು ನಟಿಯರು ಕಾಸ್ಟ್ಯೂಮ್ ಧರಿಸುವುದು ಬಹಳ ಸುಲಭ.. ನಾವು ಕಚ್ಚೆ ಧರಿಸುತ್ತಿದ್ದೆವು. ಊಹಿಸಿ ಕ್ಯಾರವಾನ್ ಇರಲಿಲ್ಲ, ಅದನ್ನೆಲ್ಲಾ ಹೇಗೆ ಹೇಳುವುದು ಗೊತ್ತಾಗ್ತಿಲ್ಲ. ಅಂಬಾಸಿಡರ್ ಕಾರಿನಲ್ಲಿ ಕಚ್ಚೆ ಧರಿಸಿದ್ದರೂ ಬಿಸ್ಲೆರಿ ವಾಟರ್ ಬಾಟಲ್ನಲ್ಲಿ ಮೂತ್ರ ವಿಸರ್ಜನೆ ಮಾಡಬೇಕಿತ್ತು.. ಅಂತಹ ಕಷ್ಟಗಳನ್ನು ನೋಡಿದ್ದೇವೆ.. ಮೇಕಪ್, ಹೇರ್ಸ್ಟೈಲ್ ವಿಚಾರದಲ್ಲೂ ಕಷ್ಟ ಆಗ್ತಿತ್ತು. ನಮ್ಮ ತಾಯಿ ಅವರೊಟ್ಟಿಗೆ ಕೆಲವೊಮ್ಮೆ ಜಗಳ ಆಡಿಬಿಡ್ತಿದ್ರು.. ಹಾಗಾಗಿ ಕೊನೆಗೆ ನಾನೇ ಮೇಕಪ್, ಹೇರ್ಸ್ಟೈಲ್ ಮಾಡಿಕೊಳ್ಳಲು ಕಲಿತೆ. ಕೆಲವೊಮ್ಮೆ ಕಾರಿನಲ್ಲೇ ಚಿತ್ರೀಕರಣಕ್ಕೆ ಸಿದ್ಧವಾಗಿಬಿಡ್ತಿದ್ದೆ" ಎಂದು ರಮ್ಯಾಕೃಷ್ಣ ನೆನಪಿಸಿಕೊಂಡಿದ್ದಾರೆ.
ಕ್ಯಾರವಾನ್ ಬಂದ ಬಳಿಕ ನನ್ನ ಅರ್ಥವಾಯ್ತು.. ನಮ್ಮ ಕಾಲದಲ್ಲಿ ನಾಯಕಿಯರು ಕಷ್ಟಪಡ್ತಿದ್ವಿ.. ಆ ಕಷ್ಟದ ಮುಂದೆ ಈಗಿನ ನಟಿಯರದ್ದು ಏನೇನು ಅಲ್ಲ ಅನ್ನಿಸುತ್ತೆ, ಈಗ ಎಲ್ಲಾ ಸುಲಭವಾಗಿಬಿಟ್ಟಿದೆ ಎಂದು ರಮ್ಯಾಕೃಷ್ಣ ಹೇಳಿದ್ದಾರೆ. "ಖಂಡಿತ ನನಗೆ ಅನ್ನಿಸುತ್ತೆ.. ಇವತ್ತಿನ ನಟಿಯರು ಸಾಕಷ್ಟು ವಿಚಾರಗಳಲ್ಲಿ ಬಹಳ ಪುಣ್ಯ ಮಾಡಿದ್ದಾರೆ.. ಕೆಲವೊಮ್ಮೆ ಅತೀ ಅನ್ನಿಸುತ್ತೆ.. ಆದರೂ ಇದೆಲ್ಲಾ ನಿಜ ಅವ್ರು ಪುಣ್ಯವಂತರು.. ಮೊಬೈಲ್ ಇಲ್ಲದ ಕಾಲ, ಮೊಬೈಲ್ ಬಂದ ಬಳಿಕ ನೋಡ್ತಿದ್ದೀವಲ್ಲ.. ಅದೇ ರೀತಿ ನಮ್ಮ ಕಾಲದ ನಟಿಯರು ಕೆಟ್ಟ ಹಾಗೂ ಒಳ್ಳೆ ಸಂಗತಿಗಳನ್ನು ನೋಡಿದಂತೆ ಈಗ ಕೂಡ ಒಂದಷ್ಟು ಕೆಟ್ಟ, ಒಳ್ಳೆ ವಿಚಾರಗಳನ್ನು ನಟಿಯರು ಎದುರಿಸುತ್ತಿದ್ದಾರೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
ನಟಿಯರ ನಟಿರುವ ಪೈಪೋಟಿ ಇತ್ತು. ಮೇಲ್ನೋಟಕ್ಕೆ ಇಲ್ಲ ಎಂದು ಕೆಲವರು ಹೇಳಬಹುದು. ಆಗ ಕೂಡ ನಟಿಯರ ನಡುವೆ ಸ್ಪರ್ಧೆ ಇತ್ತು. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿ ಇರುವಂತೆ ಮಾತನಾಡುತ್ತಿದ್ರು. ನಮ್ಮ ಕಾಲದ ಎಲ್ಲಾ ನಟಿಯರ ಜೊತೆಗೂ ಪೈಪೋಟಿ ಇತ್ತು.. ಸೌಂದರ್ಯ ಜೊತೆಗೂ ಅದೇ ಸ್ಪರ್ಧೆ ಇತ್ತು. ಆದ್ರು ಆಕೆಯ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೀನಿ ಎಂದು ರಮ್ಯಾ ಹೇಳಿ ನಕ್ಕಿದ್ದಾರೆ.