ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಮಾತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಬಣ್ಣ ಹಚ್ಚಿದ್ದಾರೆ. ವಿದ್ಯುಜ್ಜಿಹ್ವನಾಗಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಚಿತ್ರಕ್ಕಾಗಿ ತಮಗೆ ಸಿಕ್ಕ ಸಂಭಾವನೆಯನ್ನು ಅವರು ದೇಣಿಗೆ ನೀಡಿದ್ದಾರೆ.

ನಟ ವಿವೇಕ್ ಒಬೆರಾಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. 'ರಾಮಾಯಣ' ಸಿನಿಮಾ ಬಿಡುಗಡೆಗಾಗಿ ಅವರು ಎದುರು ನೋಡುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಸಂಭಾವನೆ ಸಂಪೂರ್ಣವಾಗಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ವಿವೇಕ್ ಸಹಾಯಗುಣಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ರಾಮಾಯಣ' ರೀತಿಯ ಅದ್ಭುತ ಸಿನಿಮಾ ಮಾಡ್ತಿದ್ದೀರಿ. ನಾನು ನಿಮ್ಮ ಬೆಂಬಲಕ್ಕೆ ನಿಲ್ತೀನಿ.. ಚಿತ್ರಕ್ಕಾಗಿ ನನಗೆ ಯಾವುದೇ ಸಂಭಾವನೆ ಬೇಡ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ವಿವೇಕ್ ಒಬೆರಾಯ್ ಹೇಳಿದ್ದರಂತೆ. ಕಳೆದ ವರ್ಷ ಅಕ್ಟೋಬರ್‌ನಲ್ಲೇ ಈ ವಿಚಾರವನ್ನು ಮಾಧ್ಯಮಗಳ ಜೊತೆ ಅವರು ಹಂಚಿಕೊಂಡಿದ್ದರು. ಇದೀಗ ನುಡಿದಂತೆ ನಡೆದು ತಮ್ಮ ಸಂಭಾವನೆಯನ್ನು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ವಿವೇಕ್ ಒಬೆರಾಯ್ ಅವರು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸದ್ಯ ಮತ್ತೊಮ್ಮೆ ಆ ಹಾದಿಯಲ್ಲಿ ಮುನ್ನಡೆದಿದ್ದಾರೆ.

ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಮೊದಲ ಭಾಗ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ರಾವಣನ ಹಿನ್ನೆಲೆಯ ಕಥೆಗಳನ್ನು ಹೇಳಲಾಗ್ತಿದೆ. ಹಾಗಾಗಿ ರಾವಣ ಹಾಗೂ ವಿದ್ಯುಜ್ಜಿಹ್ವ ನಡುವಿನ ಯುದ್ಧದ ಸನ್ನಿವೇಶ ಕೂಡ ಇರಲಿದೆ. ಇನ್ನು ವಿದ್ಯುಜ್ಜಿಹ್ವ ಪತ್ನಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.