ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ-1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಈಗಾಗಲೇ 1700 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಇದು ಮೊದಲ ಭಾಗದ ಕಲೆಕ್ಷನ್ ಮಾತ್ರ. ಎರಡನೇ ಭಾಗ ಬರೋದು ಬಾಕಿಯಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಸರಣಿ ಸಿನಿಮಾ ಮಾಡುತ್ತಿರುವುದಾಗಿ ನಮಿತ್ ಹೇಳಿದ್ದರು. ಆ ಲೆಕ್ಕದಲ್ಲಿ 1700 ಕೋಟಿ ರೂ. ಸಾಕಾ? ಎನ್ನುವ ಚರ್ಚೆ ನಡೀತಿದೆ.

'ರಾಮಾಯಣ-1' ಸಿನಿಮಾ ಗೆದ್ದಿಲ್ಲ. ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡರೂ ಗಳಿಕೆಯಲ್ಲಿ ಸಿನಿಮಾ ಹಿಂದೆ ಬಿದ್ದಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಅಂತಹವರಿಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ತಿರುಗೇಟು ನೀಡಿದ್ದಾರೆ. ಸಿನಿಮಾ ಬ್ಯುಸಿನೆಸ್ ಬಗ್ಗೆ ವಿಮರ್ಶಕರಿಗೆ ನಯಾಪೈಸೆ ಜ್ಞಾನ ಇಲ್ಲ ಎಂದು ಕುಟುಕಿದ್ದಾರೆ. ಬ್ಯುಸಿನೆಸ್ ಬಗ್ಗೆ ನನ್ನ ಕೇಳಿ ಹೇಳ್ತೀನಿ, ವಿಮರ್ಶಕರಿಗೆ ಸಿನಿಮಾ ಬಗ್ಗೆ ಮಾತನಾಡಲು ಗೊತ್ತು. ಬ್ಯುಸಿನೆಸ್ ಕುರಿತು ಅವರಿಗೆ ಎಳ್ಳಷ್ಟು ಜ್ಞಾನ ಇಲ್ಲ ಎಂದು ಡಿಡಿ ನ್ಯೂಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಮರ್ಶಕರು ಬಹಳ ಪ್ರೀತಿಪಾತ್ರರು. ಅದರೆ ಬಿಸಿನೆಸ್ ಅಂದ್ರೆ ಏನು ಅಂತ ಗೊತ್ತಿಲ್ಲ ಎಂದು ನಮಿತ್ ಮಲ್ಹೋತ್ರಾ ಹೇಳಿದ್ದಾರೆ. "ಮೊದಲನೆಯದಾಗಿ, ನಾನು 'ಪ್ರೈಮ್ ಫೋಕಸ್' ಎಂಬ ಕಂಪನಿ ಸ್ಥಾಪಿಸಿದ್ದೇನೆ, ಅದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಾಗ ಮಾಡಿಕೊಂಡಿದೆ. ಇಂದಿಗೂ ಅದರ ಮೌಲ್ಯ 20 ರಿಂದ 25 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ನಾನು ಹೇಗೆ ಹಣ ಸಂಪಾದಿಸಿದೆ, ನನ್ನ ಕಂಪನಿ ಎಷ್ಟು ಲಾಭ ಗಳಿಸಿದೆ ಅಥವಾ ಅದರ ಟರ್ನ್‌ಓವರ್ ಎಷ್ಟು ಎಂದು ನೀವು ಒಬ್ಬ ವಿಮರ್ಶಕರನ್ನು ಕೇಳಿದರೆ, ಅವರಿಗೆ ಅದರ ಬಗ್ಗೆ ಏನೂ ತಿಳಿದಿರುವುದಿಲ್ಲ" ಎಂದಿದ್ದಾರೆ.

ವಿಮರ್ಶಕರು ಸಿನಿಮಾ ಬಗ್ಗೆ ಮಾತನಾಡಬಹುದು ಅದು ಅವರಿಗೆ ಇಷ್ಟವಾಯಿತೇ ಅಥವಾ ಇಲ್ಲವೇ, ಕಥೆ ಇಷ್ಟವಾಯಿತೇ ಅಥವಾ ಇಲ್ಲವೇ, ಅಥವಾ ಯಾವುದಾದರೂ ಪಾತ್ರ ಇಷ್ಟವಾಯಿತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅವರು ಅಭಿಪ್ರಾಯ ನೀಡಬಹುದು. ಆದರೆ ವ್ಯವಹಾರದ ವಿಷಯಕ್ಕೆ ಬಂದರೆ, ವಿಮರ್ಶಕರಿಗೆ 5ಕ್ಕೆ 0 ಅಂಕಗಳನ್ನು ನೀಡಬಹುದು. ಅವರಿಗೆ ಏನೇನು ಗೊತ್ತಿಲ್ಲ ಎಂದು ನಮಿತ್ ಮಲ್ಹೋತ್ರಾ ವ್ಯಂಗ್ಯವಾಡಿದ್ದಾರೆ.

ಒಂದು ವೇಳೆ ಅವರಿಗೆ ವ್ಯವಹಾರದ ಬಗ್ಗೆ ಕಲಿಯಬೇಕೆಂದಿದ್ದರೆ, ಅವರು ನನ್ನನ್ನು ಸಂಪರ್ಕಿಸಿ ನನ್ನೊಂದಿಗೆ ಕುಳಿತುಕೊಳ್ಳಲಿ; ಆಗ ನಾನು ಅವರಿಗೆ ವ್ಯವಹಾರದ ಪಾಠ ಹೇಳಿಕೊಡಬಲ್ಲೆ ಎಂದು ನಮಿತ್ ಹೇಳಿದ್ದಾರೆ. ನಾನು ಕಳೆದ 30 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದೇನೆ, ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ, ನಮ್ಮದು ಅತ್ಯಂತ ದೊಡ್ಡ ಮತ್ತು ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದಾಗಿದೆ. ಸಾವಿರಾರು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಸಿನಿಮಾ ವಿಷಯಕ್ಕೆ ಬಂದ್ರೆ ನಾನು ವಿಮರ್ಶಕರಿಗೆ ಪೂರ್ಣ ಅಂಕಗಳನ್ನು ಕೊಡ್ತೀನಿ. ಆದ್ರೆ ವ್ಯವಹಾರದ ವಿಷಯಕ್ಕೆ ಬಂದರೆ, ನಾನು ಅವರಿಗೆ ಸೊನ್ನೆ ಕೊಡ್ತೀನಿ ಎಂದಿದ್ದಾರೆ.

2028ರ ದೀಪಾವಳಿ ವೇಳೆಗೆ 'ರಾಮಾಯಣ -2' ಸಿನಿಮಾ ತೆರೆಗೆ ಬರಲಿದೆ. ಸರಣಿ ಸಿನಿಮಾ ಅಂದಾಗ ಎಲ್ಲಾ ಬಜೆಟ್ ಒಂದೇ ಚಿತ್ರಕ್ಕೆ ಹಾಕಲ್ಲ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗಕ್ಕೆ ಹೆಚ್ಚು ಬಂಡವಾಳ ಬೇಕಾಗಬಹುದು. ಆದರೆ ಪ್ರಚಾರದ ವಿಚಾರದಲ್ಲಿ ಮೊದಲ ಭಾಗಕ್ಕಿಂತ ಎರಡನೇ ಭಾಗಕ್ಕೆ ಕಮ್ಮಿ ಖರ್ಚಾಗಬಹುದು ಎಂದು ನಮಿತ್ ಮಲ್ಹೋತ್ರಾ ವಿವರಿಸಿದ್ದಾರೆ.