ಕೆ. ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ, ಅಂಬರೀಶ್ ನಟಿಸಿದ್ದ 'ಶ್ರೀಮಂಜುನಾಥ' ಚಿತ್ರವನ್ನು ಪ್ರೇಕ್ಷಕರು ಮರೆಯೋಕೆ ಸಾಧ್ಯವಿಲ್ಲ. ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸಿನಿಮಾ ಗೆಲ್ಲದೇ ಇದ್ದರೂ ಚಿತ್ರದ ಪಾತ್ರಗಳು, ಹಾಡುಗಳು ಇವತ್ತಿಗೂ ಪ್ರೇಕ್ಷಕರ ನೆನಪಿನಲ್ಲಿ ಉಳಿದುಬಿಟ್ಟಿದೆ. ನಿಮಗೆ ಗೊತ್ತಾ 'ಶ್ರೀಮಂಜುನಾಥ' ಕಥೆಯನ್ನು ಸಾಹಸಸಿಂಹ ವಿಷ್ಣುವರ್ಧನ್ ಕೇಳಿದ್ದರು. ಆ ಪಾತ್ರ ನಾನು ಮಾಡ್ತೀನಿ ಎಂದು ಆಸೆಪಟ್ಟಿದ್ದರು.

ಜೆ. ಕೆ ಭಾರವಿ ಜೊತೆ ಸೇರಿ ವಿ. ನಾಗೇಂದ್ರ ಪ್ರಸಾದ್ 'ಶ್ರೀಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಸತತ ಎರಡು ವರ್ಷಗಳ ಕಾಲ ಆ ಚಿತ್ರಕ್ಕಾಗಿ ಅವರು ಕೆಲಸ ಮಾಡಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮೊದಲಿಗೆ ಭಾರವಿ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ನಾನೇ ಸಂಭಾಷಣೆ, ಸಾಹಿತ್ಯ ಬರೆಯಬೇಕು ಎಂದು ತೀರ್ಮಾನವಾಗಿತ್ತು. ಶಿವನ ಪಾತ್ರವನ್ನು ವಿಷ್ಣು ಸರ್ ಮಾಡಬೇಕು ಎಂದುಕೊಂಡಿದ್ದೆವು. ಹೊಸ ನಟನನ್ನು ಅರ್ಜುನ್ ಸರ್ಜಾ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಅಂತ ಸಿದ್ಧತೆ ನಡೆದಿತ್ತು. ಆದರೆ ಸ್ಕ್ರಿಪ್ಟ್ ಸಿದ್ಧವಾದ ಬಳಿಕ ದೊಡ್ಡದಾಗಿ ಸಿನಿಮಾ ಮಾಡಲು ನಿರ್ಮಾಪಕಿ ಜಯಶ್ರೀದೇವಿ ಮನಸ್ಸು ಮಾಡಿದ್ರು. ಹಾಗಾಗಿ ಎಲ್ಲವೂ ಬದಲಾಯ್ತು ಎಂದು ನೆನಪಿಸಿಕೊಂಡಿದ್ದಾರೆ.

ವಿಷ್ಣುವರ್ಧನ್ ಸರ್ ಅವರನ್ನು ಭೇಟಿ ಮಾಡಿ 'ಶ್ರೀಮಂಜುನಾಥ' ಕಥೆ ಕೂಡ ಹೇಳಿದ್ದೆವು. ಅವ್ರು ಕಥೆ ಕೇಳಿ ಶಿವನ ಪಾತ್ರ ಮಾಡಲ್ಲ, ಹೀರೊ ಪಾತ್ರ ಮಾಡ್ತೀನಿ ಅಂದ್ರು. ನಮಗೆ ಶಿವನ ಪಾತ್ರವನ್ನು ವಿಷ್ಣು ಸರ್ ಮಾಡಬೇಕು ಎನ್ನುವ ಆಸೆಯಿತ್ತು. ಅಷ್ಟರಲ್ಲೇ ರಾಘವೇಂದ್ರ ರಾವ್ ಸಿನಿಮಾ ನಿರ್ದೇಶನ ಮಾಡುವುದು ಎಂದು ತೀರ್ಮಾನವಾಯ್ತು. ಬಳಿಕ ಕನ್ನಡ ಜೊತೆಗೆ ತೆಲುಗಿನಲ್ಲಿ ಸಿನಿಮಾ ಮಾಡೋಣ ಎಂದು ಮಾತುಕತೆ ನಡೆಸಿದಾಗ ಶಿವನ ಪಾತ್ರಕ್ಕೆ ಚಿರಂಜೀವಿ ಬಂದ್ರು. ಹೀಗೆ ಒಂದೊಂದೇ ಬದಲಾಗ್ತಾ ಹೋಯ್ತು. ಅರ್ಜುನ್ ಸರ್ಜಾ ಹಾಗೂ ಸೌಂದರ್ಯ 3 ಭಾಷೆಗಳಿಗೆ ಚಿರಪರಿಚಿತರು ಎಂದು ಅವರನ್ನು ಆಯ್ಕೆ ಮಾಡಿಕೊಂಡ್ರು" ಎಂದು ನಾಗೇಂದ್ರ ಪ್ರಸಾದ್ ವಿವರಿಸಿದ್ದಾರೆ.

ಅವತ್ತಿನ ಕಾಲಕ್ಕೆ 30 ಲಕ್ಷದಲ್ಲಿ ಕನ್ನಡ ಸಿನಿಮಾ ನಿರ್ಮಾಣವಾಗ್ತಿತ್ತು. ಅಂತಹ ಸಮಯದಲ್ಲಿ ಹೆಚ್ಚು ಕಮ್ಮಿ 10 ಕೋಟಿ ರೂ. ಬಂಡವಾಳದಲ್ಲಿ 'ಶ್ರೀಮಂಜುನಾಥ' ಸಿನಿಮಾ ನಿರ್ಮಾಣವಾಗಿತ್ತು. ಅದಾಗಲೇ ನಾನು 10ರಿಂದ 12 ಹಾಡು ಬರೆದುಬಿಟ್ಟಿದ್ದೆ. ನಾನು ಬರೆದ ಹಾಡಗಳನ್ನು ಕೇಳಿ ಅವರಿಗೆ ತಕ್ಕಂತೆ ಬೇರೆ ರೀತಿಯಲ್ಲಿ ಬರೆದರು. ಕೊನೆಗೆ 'ಒಬ್ಬನೇ ಒಬ್ಬನೇ' ಹಾಡು ನಾನು ಬರೆದಿದ್ದನ್ನೇ ತೆಗೆದುಕೊಂಡ್ರು ಎಂದು ಆ ಸಿನಿಮಾ ಮೇಕಿಂಗ್ ಅನುಭವವನ್ನು ನಾಗೇಂದ್ರ ಪ್ರಸಾದ್ ಹಂಚಿಕೊಂಡಿದ್ದಾರೆ.