ನವೆಂಬರ್ ಅಂದ್ರೆ ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನಲ್ಲಿ ಮನೆ ಮಾಡುತ್ತದೆ. ಪ್ರತಿದಿನ ಪ್ರತಿಕ್ಷಣ ಕನ್ನಡ ಪ್ರೇಮ ಕನ್ನಡಿಗರ ನರನಾಡಿಗಳಲ್ಲಿ ಅಚ್ಚಳಿಯದೇ ಉಳಿಯಲಿ. ಇನ್ನು ಹಳದಿ ಮತ್ತು ಕೆಂಪು ಬಾವುಟ ಕನ್ನಡಿಗರ ಭಾಷೆ, ಸಂಸ್ಕೃತಿ ಮತ್ತು ಏಕತೆಯ ಪ್ರತೀಕ. ಹಳದಿ-ಕೆಂಪು ಧ್ವಜಕ್ಕೆ ಅಧಿಕೃತ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ಅದರ ವಿನ್ಯಾಸದಲ್ಲಿ ಬದಲಾವಣೆಗೆ ಸರ್ಕಾರ ಮುಂದಾಗಿದೆ.

ಸಾಂಪ್ರದಾಯಿಕವಾಗಿ ಹಳದಿ ಹಾಗೂ ಕೆಂಪು ಬಣ್ಣದ ಧ್ವಜವನ್ನು ದಶಕಗಳಿಂದ ಹಾರಿಸಲಾಗ್ತಿದೆ. ಇದಕ್ಕೆ ನಾಡಧ್ವಜ ಸ್ಥಾನಮಾನ ಕಲ್ಲಿಸುವ ಜೊತೆಗೆ ಮತ್ತೊಂದು ಬಣ್ಣವನ್ನು ಸೇರಿಸಿ ಮಧ್ಯಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನ(ಗಂಡಭೇರುಂಡ)ವನ್ನು ಅಳವಡಿಸಲು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ. ಕನ್ನಡ ಬಾವುಟದಲ್ಲಿ ಮೇಲೆ ಹಳದಿ ಹಾಗೂ ಕೆಳಗೆ ಕೆಂಪು ಬಣ್ಣ ಇರಬೇಕು. ಇದನ್ನು ಅದಲು ಬದಲು ಮಾಡಿ ಹಾರಿಸುವುದು ಸರಿಯಲ್ಲ. ಆದರೆ ಕನ್ನಡದ ಜನಪ್ರಿಯ ಗೀತೆಯಲ್ಲಿ ಅದಲು ಬದಲಾಗಿ ಬಾವುಟ ಕಟ್ಟಲಾಗಿತ್ತು.

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ನಾನು ನನ್ನ ಹೆಂಡ್ತಿ' ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಕನ್ನಡಪ್ರೇಮ ಸಾರುವ 'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡನ್ನು ಮರೆಯೋಕೆ ಸಾಧ್ಯವಿಲ್ಲ. ಇವತ್ತಿಗೂ ರಾಜ್ಯೋತ್ಸವ ಅಂದಾಕ್ಷಣ ಈ ಹಾಡು ನೆನಪಾಗದೇ ಇರದು. ಶಂಕರ್-ಗಣೇಶ್ ಸಂಗೀತದ ಹಾಡಿಗೆ ಹಂಸಲೇಖ ಸಾಹಿತ್ಯ ಬರೆದಿದ್ದರು. ಎಸ್‌.ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಹಾಡು ಇವತ್ತಿಗೂ ಜನಜನಿತ. ಇದೇ ಹಾಡಿನಲ್ಲಿ ರವಿಚಂದ್ರನ್ ವೇದಿಕೆ ಮೇಲೆ ನಿಂತು ಹಾಡು ಹಾಡುವಾಗ ಹಿಂಭಾಗದಲ್ಲಿ ಕನ್ನಡ ಬಾವುಟವನ್ನು ಮೇಲೆ ಕೆಳಗಾಗಿ ಕೆಂಪು ಬಣ್ಣ ಮೇಲೆ ಹಳದಿ ಬಣ್ಣ ಕೆಳಗೆ ಇರುವಂತೆ ಕಟ್ಟಲಾಗಿದೆ.

ಈ ಹಿಂದೆಯೇ ಇದನ್ನು ಕೆಲವರು ಗುರ್ತಿಸಿದ್ದರು. ಆದರೆ ಅದ್ಭುತ ಹಾಡನ್ನು ಕೇಳುತ್ತಾ ಗುನುಗುತ್ತಾ ಸಾಕಷ್ಟು ಜನ ಗಮನಿಸಿರಲಿಲ್ಲ. ರಾಜ್ಯೋತ್ಸದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ಅರೇ, ಹೌದಲ್ವಾ ತಪ್ಪಾಗಿದೆ ಎಂದು ಕೆಲವರು ಪದೇ ಪದೆ ನೋಡಿ ಈಗ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಯಾರಪ್ಪಾ ಸಿನಿಮಾ ನಿರ್ದೇಶಕರು, ಇದನ್ನು ಸರಿಯಾಗಿ ನೋಡಬೇಕಿತ್ತಲ್ವಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಡಿ. ರಾಜೇಂದ್ರಬಾಬು ಚಿತ್ರವನ್ನು ನಿರ್ದೇಶನ ಮಾಡಿದ್ದರು.

'ನಾನು ನನ್ನ ಹೆಂಡ್ತಿ' ಚಿತ್ರದ ಮೂಲಕ ಹಂಸಲೇಖ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅದಾಗಲೇ 'ತ್ರಿವೇಣಿ' ಚಿತ್ರಕ್ಕೆ ಒಂದು ಹಾಡು ಬರೆದಿದ್ದರೂ 'ನಾನು ನನ್ನ ಹೆಂಡ್ತಿ' ಚಿತ್ರದ ಎಲ್ಲಾ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿತ್ತು. ಜೊತೆಗೆ ಸಂಭಾಷಣೆ ಕೂಡ ಬರೆದು ಸೈ ಅನಿಸಿಕೊಂಡಿದ್ದರು. ಇದೇ ಸಿನಿಮಾ ಸಮಯದಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಪರಿಚಯ, ಸ್ನೇಹ ಶುರುವಾಗಿತ್ತು. ಮುಂದೆ ಈ ಜೋಡಿ ಮಾಡಿದ ಮೋಡಿ ಗೊತ್ತೇಯಿದೆ.