ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿ ಮಗನ ಚೊಚ್ಚಲ ಸಿನಿಮಾ ವಿವಾದ ಹುಟ್ಟಾಕ್ಕಿದೆ. ಪುರುಷೋತ್ತಮ್ ನಿರ್ದೇಶನದಲ್ಲಿ 'ಆಯುಷ್' ಸಿನಿಮಾ ಆರಂಭವಾಗಿತ್ತು. ಚಿತ್ರದ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಆದರೆ ದಿಢೀರನೆ ನಿರ್ದೇಶಕರನ್ನು ಕೈಬಿಟ್ಟು ಸಿನಿಮಾ ಮುಂದುವರೆಸುವ ಪ್ರಯತ್ನ ನಡೀತಿದೆ. ಸ್ವತಃ ಪ್ರಿಯಾಂಕ ಉಪೇಂದ್ರ ಮಗನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಅರ್ಧದಷ್ಟು ಚಿತ್ರೀಕರಣ ಮುಗಿದ ನಂತರ ತಮ್ಮನ್ನು ಕಾರಣವಿಲ್ಲದೆ 'ಆಯುಷ್' ಚಿತ್ರದಿಂದ ಕೈಬಿಡಲಾಗಿದೆ ಎಂದು ನಿರ್ದೇಶಕ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಕಥೆ ಮತ್ತು ಚಿತ್ರೀಕರಿಸಿದ ದೃಶ್ಯಗಳನ್ನು ಅವರು ಬಳಸಬಾರದು ಎಂದು ಆಗ್ರಹಿಸಿದ್ದಾರೆ. ಸಿನಿಮಾದಿಂದ ಅರ್ಧಕ್ಕೆ ನಿರ್ದೇಶಕ, ನಾಯಕ, ನಾಯಕಿ ಬದಲಾವಣೆ ಅನ್ನೋದು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ದಶಕಗಳಿಂದ ಇದು ನಡೆದುಕೊಂಡು ಬಂದಿದೆ. ಹೀಗೆ ನಿರ್ದೇಶಕರು ಅರ್ಧಕ್ಕೆ ಬಿಟ್ಟ ಸಿನಿಮಾಗಳನ್ನು ನಾಯಕ ನಟರೇ ಮುಂದುವರೆಸಿದ ಉದಾಹರಣೆಗಳಿವೆ.
ಕಿಂದರಿಜೋಗಿ
ರವಿಚಂದ್ರನ್ ನಿರ್ದೇಶಿಸಿ ನಿರ್ಮಿಸಿ ನಿರ್ದೇಶಿಸಿದ್ದ 'ಕಿಂದರಿ ಜೋಗಿ' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಅಂದಹಾಗೆ ರೇಣುಕಾಶರ್ಮಾ ನಿರ್ದೇಶನದಲ್ಲಿ ಸಿನಿಮಾ ಶುರುವಾಗಿತ್ತು. ಕ್ರೇಜಿಸ್ಟಾರ್ ಜೊತೆಗಿನ ಕೆಲ ಭಿನ್ನಾಭಿಪ್ರಾಯಗಳಿಂದ ಅವರು ಹೊರಬಂದಿದ್ದರು. ಅದಕ್ಕೂ ಮುನ್ನ ಇವರಿಬ್ಬರು 'ಅಂಜದ ಗಂಡು' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ರವಿಚಂದ್ರನ್ ನನ್ನ ಮಾತು ಕೇಳಲಿಲ್ಲ, ಅದಕ್ಕೆ ನಾನು ಅರ್ಧಕ್ಕೆ ಹೊರಬಂದೆ ಎಂದು ಸ್ವತಃ ರೇಣುಕಾಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸೂಪರ್ ಸ್ಟಾರ್
ಹೌದು.. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ 'ಸೂಪರ್ ಸ್ಟಾರ್' ಸಿನಿಮಾ ಶುರುವಾಗಿತ್ತು. ಬಳಿಕ ಉಪೇಂದ್ರ ಜೊತೆ ನಿರ್ದೇಶಕರಿಗೆ ಕೆಲ ಭಿನ್ನಾಭಿಪ್ರಾಯ ಶುರುವಾಗಿತ್ತು. ಉಪ್ಪಿ ಸ್ಟೈಲ್, ನನ್ನ ಸ್ಟೈಲ್ಗೆ ಹೊಂದಿಕೆ ಆಗುತ್ತಿರಲಿಲ್ಲ. ಹಾಗಾಗಿ ಯಾವುದೇ ಕಿರಿಕ್ ಇಲ್ಲದೇ ನಾನೇ ನಯವಾಗಿ ಚಿತ್ರದಿಂದ ಹೊರಬಂದೆ ಎಂದು ಟಿವಿ9 ವಾಹಿನಿ ಸಂದರ್ಶನದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಬಳಿಕ ಉಪೇಂದ್ರ ಸಿನಿಮಾ ಮಾಡಿ ಮುಗಿಸಿದ್ದರು. ಆದರೆ ಟೈಟಲ್ ಕಾರ್ಡ್ನಲ್ಲಿ ಮಾತ್ರ ನಾಗತಿಹಳ್ಳಿ ಅವರ ಹೆಸರು ಮಾತ್ರ ಇದೆ.
ಕೂಲ್- ಸಖತ್ ಹಾಟ್ ಮಗಾ
2011ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಿಸಿ ನಟಿಸಿದ್ದ 'ಕೂಲ್' ಸಿನಿಮಾ ತೆರೆಗೆ ಬಂದಿತ್ತು. ಶಿಲ್ಪಾ ಗಣೇಶ್ ನಿರ್ಮಾಣದ ಚಿತ್ರವನ್ನು ನಿರ್ದೇಶಕ ಮುಸ್ಸಂಜೆ ಮಹೇಶ್ ಆರಂಭಿಸಿದ್ದರು. ಆದರೆ ಊಟಿ ಮತ್ತು ಕೇರಳದಲ್ಲಿ ಚಿತ್ರೀಕರಣದ ವೇಳೆ ಛಾಯಾಗ್ರಾಹಕ ರತ್ನವೇಲು ಜೊತೆ ಮಹೇಶ್ ಕಿರಿಕ್ ಮಾಡಿಕೊಂಡಿದ್ದರು. 'ಸೆಟ್ನಿಂದ ಹೊರಹೋಗುವಂತೆ' ಮಹೇಶ್ ಅವರಿಗೆ ಶಿಲ್ಪಾ ಗಣೇಶ್ ಹೇಳಿದ್ದಾಗಿ ಆರೋಪ ಕೇಳಿಬಂದಿತ್ತು. ಕೊನೆಗೆ ಸ್ವತಃ ನಾಯಕ ಗಣೇಶ್ ಡೈರೆಕ್ಟರ್ ಕ್ಯಾಪ್ ತೊಡುವಂತಾಯಿತು.
ನಿನ್ನ ಸನಿಹಕೆ
ಸೂರಜ್ ಗೌಡ ಮತ್ತು ಧನ್ಯಾ ರಾಮ್ ಕುಮಾರ್ ನಟನೆಯ 'ನಿನ್ನ ಸನಿಹಕೆ' ಚಿತ್ರದ ನಿರ್ದೇಶಕರು ಬದಲಾಗಿದ್ದರು. ಸ್ವತಃ ನಾಯಕ ಸೂರಜ್ ಚಿತ್ರಕ್ಕೆ ಕಥೆ ಬರೆದಿದ್ದರು. ಸುಮನ್ ಜಾದೂಗಾರ್ ಮೊದಲಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಅವರು ಹೊರಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಸೂರಜ್ ಸಿನಿಮಾ ಮುಗಿಸಿದ್ದರು. ಅಪಘಾತದಿಂದ ತಾವು ಸಮಸ್ಯೆ ಎದುರಿಸುವಂತಾಯಿತು. ಹಾಗಾಗಿ ಚಿತ್ರವನ್ನು ಸೂರಜ್ ಪೂರ್ಣಗೊಳಿಸಿದರು ಎಂದು ಸುಮನ್ ಹೇಳಿಕೊಂಡಿದ್ದರು.