ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. 'ಕೃಷ್ಣಂ ಪ್ರಣಯಸಖಿ' ಮ್ಯಾಜಿಕ್ ರಿಪೀಟ್ ಆಗುತ್ತಾ ಕಾದು ನೋಡಬೇಕಿದೆ.
ಭಾರೀ ತಾರಾಗಣದ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಇದು. ಎರಡು ವರ್ಷಗಳ ಬಳಿಕ ಬಂದಿರುವ ಗಣೇಶ್ ಸಿನಿಮಾ ಇದಾಗಿದ್ದು ಟ್ರೈಲರ್ ಇಲ್ಲದೇ ಸಿನಿಮಾ ತೆರೆಗೆ ತರಲಾಗಿದೆ. 1998ರಲ್ಲಿ ಬಂದಿದ್ದ 'ದಿ ಟ್ರೂಮನ್ ಶೋ' ಎಂಬ ಹಾಲಿವುಡ್ ಕಾಮಿಡಿ ಚಿತ್ರದಿಂದ ಪ್ರೇರಣೆಗೊಂಡು 'ಬೃಂದಾವಿಹಾರಿ' ಸಿನಿಮಾ ಕಟ್ಟಿಕೊಡಲಾಗಿದೆ. ಆದರೆ ಸಾಕಷ್ಟು ಕಡೆಗಳಲ್ಲಿ ಲಾಜಿಕ್ ಮಿಸ್ ಆಗಿ ಸಿನಿಮಾ ಬೇಸರ ಮೂಡಿಸುತ್ತದೆ. ಕೆಲವೆಡೆ ಲ್ಯಾಗ್ ಎನಿಸುತ್ತದೆ. ಒಟ್ಟಾರೆ ಓಕೆ ಓಕೆ ಸಿನಿಮಾ ಎನ್ನುವ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗ್ತಿದೆ.
ಗಣೇಶ್ ವೃತ್ತಿ ಜೀವನದಲ್ಲೇ ಬಹಳ ಅದ್ಧೂರಿ ಸಿನಿಮಾ ಇದಾಗಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಬೇಕು. ಆಗ ಮಾತ್ರ ನಿರ್ಮಾಪಕರು ಲಾಭ ನೋಡಲು ಸಾಧ್ಯ. ಬಹಳ ಹಿಂದೆಯೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಪದೇ ಪದೆ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ದಸರಾ ಸಂಭ್ರಮದಲ್ಲಿ ಬರಬೇಕಿದ್ದ 'ಬೃಂದಾವಿಹಾರಿ' ಸಿನಿಮಾ ಅಂತಿಮವಾಗಿ ದೀಪಾವಳಿ ಮುಗಿದ ಬಳಿಕ ತೆರೆಗಪ್ಪಳಿಸಿದೆ.
ಬಜೆಟ್ 25 ಕೋಟಿ ರೂ.
ಹೌದು.. ಅಂದಾಜು 25 ಕೋಟಿ ರೂ. ಸಿನಿಮಾ ಇದು ಎನ್ನಲಾಗ್ತಿದೆ. ದೊಡ್ಡ ತಾರಾಗಣ, ಅದ್ಧೂರಿ ಮೇಕಿಂಗ್, ಪ್ರಮೋಷನ್ ಸೇರಿ ದೊಡ್ಡಮಟ್ಟದಲ್ಲಿ ನಿರ್ಮಾಪಕರು ಹಣ ಹೂಡಿದ್ದಾರೆ. ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ಮಂಜುನಾಥ್ 'ಬೃಂದಾವಿಹಾರಿ' ಸಿನಿಮಾ ನಿರ್ಮಾಣ ಮಾಡಿದ್ದಾರೆ.
4 ದಿನಕ್ಕೆ ಕಲೆಕ್ಷನ್
ಅಧಿಕೃತವಾಗಿ 'ಬೃಂದಾವಿಹಾರಿ' ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. sacnilk ವರದಿ ಪ್ರಕಾರ ಮೊದಲ 4 ದಿನಕ್ಕೆ ಸಿನಿಮಾ 2.41 ಕೋಟಿ ರೂ. ನೆಟ್ ಕಲೆಕ್ಷನ್ ಜೊತೆಗೆ 2.80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ವೀಕೆಂಡ್ ಕೊಂಚಮಟ್ಟಿಗೆ ಸಿನಿಮಾ ಸದ್ದು ಮಾಡಿತ್ತು. ಬಳಿಕ ಸೋಮವಾರ ಹಾಗೂ ಮಂಗಳವಾರ ಸಿನಿಮಾ ಗಳಿಕೆ ಕಮ್ಮಿ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಪ್ರೇಕ್ಷಕರನ್ನು ಸೆಳೆಯುತ್ತದೆ, ಗಣಿ ಮ್ಯಾಜಿಕ್ ವರ್ಕ್ಔಟ್ ಆಗುತ್ತಾ ಕಾದು ನೋಡಬೇಕಿದೆ.