ಭಾರತೀಯ ಚಿತ್ರರಂಗದಲ್ಲಿ ಅದ್ಭುತ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ ಕೂಡ ನಿಲ್ಲುತ್ತಾರೆ. ತಮ್ಮ ವಿಭಿನ್ನ ಆಲೋಚನೆಗಳನ್ನು ತೆರೆಗೆ ತಂದು ಉಪೇಂದ್ರ ಗೆಲ್ಲುತ್ತಾ ಬರ್ತಿದ್ದಾರೆ. ಅವರ ನಿರ್ದೇಶನಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಅದೇ ಕಾರಣಕ್ಕೆ ಪ್ರತಿಬಾರಿ ಉಪೇಂದ್ರ ಆಕ್ಷನ್ ಕಟ್ ಹೇಳ್ತಾರೆ ಅಂದ್ರ ನಿರೀಕ್ಷೆ ಮೂಡುತ್ತದೆ.

ಸದ್ಯ 'ಭಾರ್ಗವ' ಹಾಗೂ 'ನೆಕ್ಸ್ಟ್ ಲೆವೆಲ್' ಎಂಬ ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ನಟಿಸುತ್ತಿದ್ದಾರೆ. ಒಂದು ತಮಿಳು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರ ನಡುವೆ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದಾಗಿ ಉಪ್ಪಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಎರಡು ವರ್ಷಗಳ ಹಿಂದೆ 'ಯುಐ' ಚಿತ್ರವನ್ನು ನಿರ್ದೇಶಿಸಿ ಉಪೇಂದ್ರ ನಟಿಸಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಆರಂಭದಲ್ಲಿ ಒಂದಷ್ಟು ಸದ್ದು ಮಾಡಿದ್ರು ಬಳಿಕ ಸೋಲುಂಡಿತ್ತು. ಹಾಗಾಗಿ ಉಪೇಂದ್ರ ಮುಂದಿನ ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಮೂಡಿದೆ. "ಹೊಸ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದೇನೆ. ಕೈಯಲ್ಲಿರುವ 2 ಸಿನಿಮಾಗಳ ಚಿತ್ರೀಕರಣ ಮುಗಿಯಬೇಕಿದೆ. ಆ ಬಳಿಕ ನನ್ನ ನಿರ್ದೇಶನದ ಕೆಲಸ ಶುರು. ಸಿನಿಮಾ ಘೋಷಣೆಯಾದ ತಕ್ಷಣ ಕಥೆಯ ಸುಳಿವು ಗೊತ್ತಾಗುತ್ತೆ" ಎಂದು ಉಪೇಂದ್ರ ತಿಳಿಸಿದ್ದಾರೆ.

ಬರಹಗಾರರಾಗಿ ಅವರು ಚಿತ್ರರಂಗಕ್ಕೆ ಬಂದವರು. 'ತರ್ಲೆ ನನ್ಮಗ' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಬಳಿಕ 'ಶ್' ಸಿನಿಮಾ ಮೂಲಕ ಗಮನ ಸೆಳೆದರು. ಶಿವಣ್ಣ ನಟನೆಯ 'ಓಂ' ಸಿನಿಮಾ ಕಟ್ಟಿಕೊಟ್ಟು ಸಂಚಲನ ಸೃಷ್ಟಿಸಿದರು. ಬಳಿಕ ತಾವೇ ಹೀರೊ ಆಗಿ 'ಎ', 'ಉಪೇಂದ್ರ', 'ಸೂಪರ್' ಹಾಗೂ 'ಉಪ್ಪಿ-2' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಈಗಾಗಲೇ ಪ್ರಿಯಾಂಕ ಉಪೇಂದ್ರ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಮಗನ ಚೊಚ್ಚಲ ಚಿತ್ರವನ್ನು ತಾವೇ ಕಟ್ಟಿಕೊಡುವುದಾಗಿ ಘೋಷಿಸಿದ್ದಾರೆ. ಆಯುಷ್ ನಟನೆಯ ಚೊಚ್ಚಲ ಸಿನಿಮಾ ಕಾರಣಾಂತರಗಳಿಂದ ವಿವಾದಕ್ಕೆ ಸಿಲುಕಿದೆ. ಹಾಗಾಗಿ ಆ ಚಿತ್ರವನ್ನು ತಾವೇ ನಿರ್ದೇಶನ ಮಾಡಲು ಪ್ರಿಯಾಂಕ ಮನಸ್ಸು ಮಾಡಿದ್ದಾರೆ.