ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ಫ್ರೆಂಡ್‌ಶಿಪ್ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ವಿಜಯ್ ಪತ್ನಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ ಮೇಲೆ ಈ ವಿವಾದ ಮತ್ತಷ್ಟು ಭುಗಿಲೆದ್ದಿತ್ತು. ವಿಜಯ್ ಸಿಎಂ ಆಗಿ ಆಯ್ಕೆಯಾದ ಬಳಿಕ ಕೂಡ ಅವರೊಟ್ಟಿಗೆ ತ್ರಿಶಾ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರದ ಬಗ್ಗೆ ಹಿರಿಯ ನಟಿ ಅಂಬಿಕಾ ಮಾತನಾಡಿದ್ದಾರೆ.

ಬಹುಭಾಷಾ ನಟಿ ಅಂಬಿಕಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕೇರಳ ಮೂಲದ ಅಂಬಿಕಾ ಸದ್ಯ ಚೆನ್ನೈನಲ್ಲಿ ನೆಲೆಸಿದ್ದಾರೆ. Red Pix 24x7 ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಂಬಿಕಾ ಮಾತನಾಡಿದ್ದಾರೆ. ತಮಿಳುನಾಡು ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ತಮಿಳು ವೇದಿಕೆಯಲ್ಲಿ ವಿಜಯ್ ಸೇತುಪತಿ ಆಡಿದ ಮಾತುಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾನು ಆ ಜಾಗದಲ್ಲಿ ಇದ್ದಿದ್ದರೆ ಇಂತಹ ಮಾತು ಆಡುತ್ತಿರಲಿಲ್ಲ ಎಂದಿದ್ದಾರೆ.

ಇನ್ನು ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಶಾ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಂಬಿಕಾ ಮಾತನಾಡಿದ್ದಾರೆ. ನಾನು ಆಕೆಯ ಜಾಗದಲ್ಲಿ ಇದ್ದಿದ್ರೆ ಇಂತಹ ತಪ್ಪು ಮಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ಒಳ್ಳೆ ಸ್ನೇಹಿತರಾಗಿರಬಹುದು. ಸ್ನೇಹಿತ ಉನ್ನತ ಸ್ಥಾನಕ್ಕೆ ಏರಿದ ಮಾತ್ರಕ್ಕೆ ಅವರಿಬ್ಬರ ಸ್ನೇಹ ಮುಗಿದುಬಿಡಬೇಕು ಎನ್ನುವುದು ಸರಿಯಲ್ಲ. ವಿಜಯ್ ಹಾಗೂ ತ್ರಿಶಾ ಒಡನಾಟದ ಬಗ್ಗೆ ನಮಗೆ ಮಾತನಾಡುವ ಹಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಅಂಬಿಕಾ ವಿವರಿಸಿದ್ದಾರೆ.

ಒಂದು ವೇಳೆ ನನಗೂ ಮತ್ತೊಬ್ಬರಿಗೂ ಸ್ನೇಹ ಇದ್ರೆ, ನನ್ನ ಸ್ನೇಹಿತರು ಮತ್ತೊಂದು ಸ್ಥಾನದಲ್ಲಿ ಇದ್ದಾರೆ ಅಂದುಕೊಳ್ಳಿ. ಕೆಲವರು ಜಾಗಗಳಿಗೆ ನಾನು ಅವರೊಟ್ಟಿಗೆ ಹೋದ್ರೆ, ಆ ಸ್ನೇಹಿತನಿಗೆ ನೆಗೆಟಿವ್ ಆಗುತ್ತೆ ನನಗೆ ಅನ್ನಿಸಿದ್ರೆ, ಆ ಸ್ನೇಹಕ್ಕೆ ನಾನು ಗೌರವ ಕೊಟ್ರೆ ಅಲ್ಲಿಗೆ ನಾನು ಹೋಗಲ್ಲ. ಒಂದೇ ರೀತಿ ಮ್ಯಾಚಿಂಗ್ ಡ್ರೆಸ್ ಹಾಕ್ಕೊಂಡು ಕಾರ್ಯಕ್ರಮಗಳಿಗೆ ಹೋಗೋದು, ಇತ್ತೀಚೆಗೆ ಲಂಡನ್‌ಗೆ ಹೋಗಿದ್ದು ಯಾವುದೇ ಆದ್ರು ಸರಿ. ತ್ರಿಶಾ ಜಾಗದಲ್ಲಿ ನಾನು ಇದ್ದಿದ್ರೆ, ನನ್ನಿಂದ ಕೆಟ್ಟ ಹೆಸ್ರು ಬರುತ್ತೆ ಎಂದು ಗೊತ್ತಾದ್ರೆ ಅವಾಯ್ಡ್ ಮಾಡ್ತಿದ್ದೆ. ಅದು ನನ್ನ ಅಭಿಪ್ರಾಯ ಎಂದು ಅಂಬಿಕಾ ಹೇಳಿದ್ದಾರೆ.

ಜನರು ಈ ಬಗ್ಗೆ ಫೀಲ್ ಮಾಡ್ತಿದ್ದಾರೆ. ಬಹುತೇಕ ಎಲ್ಲರ ಜೀವನದಲ್ಲೂ ವೈಯಕ್ತಿಕವಾಗಿ ಸಮಸ್ಯೆಗಳು ಇರ್ತಾವೆ.. ಫ್ಯಾಮಿಲಿ, ಹೆಂಡ್ತಿ ಅಂತ ಬಂದಾಗ ಎಲ್ಲರ ಮನಸ್ಸಿನಲ್ಲಿ ಇಂತಾದೊಂದು ಭಾವನೆ ಬರುತ್ತೆ.. ಅವರ ಭಾವನೆಗಳಿಗೂ ಗೌರವ ಕೊಡಬೇಕು. ಇದರಿಂದ ನೆಗೆಟಿವ್ ಬರುತ್ತೆ ಎನ್ನುವುದಾದರೆ ಅವಾಯ್ಡ್ ಮಾಡುವುದು ಒಳ್ಳೆಯದು. ಅವರ ದೃಷ್ಟಿಯಲ್ಲಿ ನೋಡಿದ್ರೆ, ಪ್ರಶ್ನೆ ಮಾಡುವುದು ನಮ್ಮ ತಪ್ಪಾಗುತ್ತದೆ ಎಂದು ಅಂಬಿಕಾ ಹೇಳಿರುವುದು ವೈರಲ್ ಆಗ್ತಿದೆ.