ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆತ್ಮೀಯ ಸ್ನೇಹಿತರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಅರ್ಜುನ್ ರೆಡ್ಡಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇಬ್ಬರಿಗೂ ಚಿತ್ರರಂಗದಲ್ಲಿ ಗಟ್ಟಿ ನೆಲೆ ಒದಗಿಸಿತ್ತು. ಬಳಿಕ ಅವರು ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತಿಗೂ ಇಬ್ಬರ ಸ್ನೇಹ ಮುಂದುವರೆದಿದೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ವಂಗಾಗೆ ವಿಜಯ್ ವಾಚ್ ಉಡುಗೊರೆ ನೀಡಿದ್ದಾರೆ.
ವಿಜಯ್ ಸಹೋದರ ಆನಂದ್ ದೇವರಕೊಂಡ ನಟನೆಯ 'ಎಪಿಕ್' ಸಿನಿಮಾ ಕಾರ್ಯಕ್ರಮ ಇತ್ತೀಚೆಗೆ ನಡೀತು. ಸಂದೀಪ್ ಹಾಗೂ ವಿಜಯ್ ಇಬ್ಬರೂ ಮುಖ್ಯ ಅತಿಥಿಗಳಾಗಿ ಬಂದು ಚಿತ್ರಕ್ಕೆ ಶುಭ ಕೋರಿದ್ದರು. ಇದೇ ವೇಳೆ ವೇದಿಕೆ ಮುಂಭಾಗದಲ್ಲಿ ವಿಜಯ್ ಹಾಗೂ ವಂಗಾ ಅಕ್ಕಪಕ್ಕ ಕೂತಿದ್ದರು. ನೋಡ ನೋಡುತ್ತಲೇ ವಿಜಯ್ ಗಿಫ್ಟ್ ಬಾಕ್ಸ್‌ನಿಂದ ವಾಚ್‌ವೊಂದನ್ನು ತೆಗೆದು ಸ್ನೇಹಿತನಿಗೆ ಕೊಟ್ಟಿದ್ದಾರೆ. ದುಬಾರಿ ವಾಚ್‌ಗಳ ನಡುವೆ ಇದು ಯಾವುದು ಬಹಳ ಸಿಂಪಲ್ ಆಗಿರುವ ವಾಚ್ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಅದು HMT ಬ್ರ್ಯಾಂಡ್ ವಾಚ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಯಾರಾದರೂ ಖಾಸಗಿಯಾಗಿ ಉಡುಗೊರೆ ಕೊಡುವುದು ಮಾಮೂಲು. ಕೆಲವೊಮ್ಮೆ ವೇದಿಕೆಗಳಲ್ಲಿ ಕೊಡುವುದು ಉಂಟು. ಆದರೆ ಹೀಗೆ ಯಾವುದೋ ಕಾರ್ಯಕ್ರಮದಲ್ಲಿ ಅಕ್ಕಪಕ್ಕ ಕೂತಾಗ ವಿಜಯ್ ದಿಢೀರನೆ ಉಡುಗೊರೆ ಕೊಟ್ಟಿರುವುದು ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗ್ತಿದ್ದು ಇಬ್ಬರ ಸ್ನೇಹ ನೋಡಿ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ HMT ಕಂಪನಿ ವಿಶೇಷ ಆವೃತ್ತಿಯ ಕೆಲ ಅಪರೂಪದ ವಾಚ್‌ಗಳನ್ನು ಮಾರುಕಟ್ಟೆಗೆ ತಂದಿತ್ತು. ಜನ ಮುಗಿಬಿದ್ದು ಖರೀದಿಸಿದ್ದರು. ಕಿಲೋಮೀಟರ್ ಉದ್ದ ಸರತಿ ಸಾಲಿನಲ್ಲಿ ನಿಂತು ವಾಚ್ ತಮ್ಮದಾಗಿಸಿಕೊಂಡಿದ್ದರು. ಕನ್ನಡಿಗರು ಕಟ್ಟಿದ ಹೆಮ್ಮೆಯ ಸಂಸ್ಥೆ ಇದು. ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ವಹಿವಾಟು ನಡೆಸಿದ್ದಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದರು. HMT ಸಂಸ್ಥೆ ಉಳಿಸುವ ಕಾರ್ಯಕ್ಕೆ ನಾಡಿನ ಜನತೆಯ ಸಹಕಾರ ಬೇಕು ಎಂದಿದ್ದರು.
'ಅರ್ಜುನ್ ರೆಡ್ಡಿ' ಚಿತ್ರವನ್ನು 'ಕಬೀರ್ ಸಿಂಗ್' ಹೆಸರಿನಲ್ಲಿ ಹಿಂದಿಗೆ ರೀಮೆಕ್ ಮಾಡಿ ವಂಗಾ ಗೆದ್ದಿದ್ದರು. ಇನ್ನು ರಣ್‌ಬೀರ್ ಕಪೂರ್ ಹೀರೊ ಆಗಿ 'ಅನಿಮಲ್' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಸದ್ಯ ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಚಿತ್ರವನ್ನು ಸಂದೀಪ್ ಕಟ್ಟಿಕೊಡುತ್ತಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಲೈಗರ್' ಬಳಿಕ ಅವರು ನಟಿಸಿದ ಯಾವುದೇ ಸಿನಿಮಾ ಗೆಲ್ಲಲಿಲ್ಲ. 'ರಣಬಾಲಿ' ಎಂಬ ಚಿತ್ರದಲ್ಲಿ ಸದ್ಯ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಪತ್ನಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.