ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ಐತಿಹಾಸಿಕ ಕಥಾಹಂದರ ಚಿತ್ರದಲ್ಲಿ ಸತಿ-ಪತಿಯಾಗಿ ಇಬ್ಬರೂ ನಟಿಸಿದ್ದಾರೆ. ಸಿನಿಮಾ ಪ್ರಚಾರ ಜೋರಾಗಿ ನಡೀತಿದ್ದು ಅನುಶ್ರೀ ಯೂಟ್ಯೂಬ್ ಚಾನಲ್‌ಗೆ ದಂಪತಿ ಸಂದರ್ಶನ ನೀಡಿದ್ದಾರೆ.

ಹೈದರಾಬಾದ್‌ಗೆ ತೆರಳಿ ಅನುಶ್ರೀ ಸಂದರ್ಶನ ಮಾಡಿಕೊಂಡು ಬಂದಿದ್ದಾರೆ. ರಶ್ಮಿಕಾ ಹೇಳಿಕೊಟ್ಟ ಕನ್ನಡ ಕಲಿತು ವಿಜಯ್ ದೇವರಕೊಂಡ ಮಾತನಾಡುವ ಪ್ರಯತ್ನ ಮಾಡಿದ್ದಾರೆ. 'ಪ್ರೇಮದ ಊರಲಿ' ಚಿತ್ರದ ಯಶಸ್ಸಿನ ಬಗ್ಗೆ ನಾಯಕಿ ತಪಸ್ವಿನಿ ಪೂಣಚ್ಚ ಜೊತೆ ಫೋನ್ ಮಾಡಿ ರಶ್ಮಿಕಾ ಮಾತನಾಡಿದ್ದಾರೆ. ಸದ್ಯ ಆ ಸಂದರ್ಶನದ ಪ್ರೋಮೊ ವೈರಲ್ ಆಗ್ತಿದೆ.

ಮದುವೆ ಬಳಿಕ ರಶ್ಮಿಕಾ ಮಂದಣ್ಣ ನೀಡಿರುವ ಮೊದಲ ಕನ್ನಡ ಸಂದರ್ಶನ ಇದು. ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ದಂಪತಿ ಉತ್ತರ ಕೊಟ್ಟಿದ್ದಾರೆ. "ಅನುಶ್ರೀ ಹೈದರಾಬಾದ್‌ಗೆ ಸ್ವಾಗತ.. ನಮಸ್ಕಾರ ನಿಮಗೆ.. ನೀವು ನೋಡಲು ತುಂಬಾ ಮುದ್ದಾಗಿ ಇದ್ದೀರಾ" ಎಂದು ಕನ್ನಡದಲ್ಲೇ ವಿಜಯ್ ದೇವರಕೊಂಡ ಮಾತು ಆರಂಭಿಸಿದ್ದಾರೆ. ಅದನ್ನು ಕೇಳಿ ಅನುಶ್ರೀ ಕೂಡ ಅಚ್ಚರಿಗೊಂಡಿದ್ದಾರೆ.

ನಾನು ಕೂರ್ಗ್ ಸೊಸೆ ಆಗಿದ್ದೀನಿ, ವಿಜಯ್ ಕೂರ್ಗ್ ಅಳಿಯ ಆಗಿದ್ದಾರೆ ಎಂದು ಅನುಶ್ರೀ ಹೇಳಿದ್ದಾರೆ. ರಶ್ಮಿಕಾ ನೀವು ವಿಜಯ್ ಅವರಿಗೆ ಓಲಗ ಡ್ಯಾನ್ಸ್ ಹೇಳಿಕೊಟ್ಟಿದ್ದೀರಾ ಎನ್ನುವ ಪ್ರಶ್ನೆಗೆ ಹ್ಞೂಂ ಎಂದು ರಶ್ಮಿಕಾ ಹೇಳಿದ್ದಾರೆ. ರಾಹುಲ್ ಸಂಕೇರ್ತನ್ ನಿರ್ದೇಶನದ 'ರಣಬಾಲಿ' ಸಿನಿಮಾ ಮೇಲೆ ವಿಜಯ್-ರಶ್ಮಿಕಾಗೆ ಭಾರೀ ನಿರೀಕ್ಷೆಯಿದೆ. 'ಗೀತಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ಬಳಿಕ ಜೋಡಿ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದಾಗಿದೆ.

ಇನ್ನು ಸಂದರ್ಶನದ ನಡುವೆ 'ಪ್ರೇಮದ ಊರಲಿ' ಸಿನಿಮಾ ಅನಿರೀಕ್ಷಿತ ಯಶಸ್ಸು ಹಾಗೂ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ನಟಿಸಿರುವ ಬಗ್ಗೆ ರಶ್ಮಿಕಾಗೆ ಅನುಶ್ರೀ ಹೇಳಿದ್ದಾರೆ. ಕೂಡಲೇ ರಶ್ಮಿಕಾ ಆಕೆಗೆ ಫೋನ್ ಮಾಡಿ ಮಾತನಾಡಿದ್ದಾರೆ. ಇದೇ ವಿಚಾರವನ್ನು ಇತ್ತೀಚೆಗೆ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಿನಿಮಾ ಬಗ್ಗೆ ಮಾತನಾಡದೇ ಬರೀ ತಪಸ್ವಿನಿಗೆ ಶುಭ ಹಾರೈಸಿದ್ದು ಯಾಕೆ ಎಂದು ಕೆಲವರು ಅಸಮಾಧಾನ ಹೊರ ಹಾಕಿದ್ದರು.