ಇವತ್ತಿನ ಕಾಲದಲ್ಲಿ ಚಪ್ಪಲಿ, ಶೂ ಧರಿಸದೇ ಓಡಾಡುವವರು ತೀರಾ ಅಪರೂಪ. ಉಳ್ಳವರು ಅಂತೂ ಸಾವಿರ, ಲಕ್ಷ ರೂ. ಬೆಲೆಬಾಳುವ ದುಬಾರಿ ಚಪ್ಪಲಿ, ಶೂ ಧರಿಸುತ್ತಾರೆ. ಆದರೆ ತಮಿಳು ನಟ, ಸಂಗೀತ ನಿರ್ದೇಶಕ, ಗಾಯಕ ವಿಜಯ್ ಆಂಟೋನಿ ಮಾತ್ರ ಜೀವನವಿಡೀ ಚಪ್ಪಲಿ ಇಲ್ಲದೇ ಓಡಾಡಲು ಶಪಥ ಮಾಡಿದ್ದಾರೆ. ಅದಕ್ಕೆ ಕಾರಣ ಮಗಳ ಅಗಲಿಕೆ ನೋವು.
ಸಸ್ಪೆನ್ಸ್ ಥ್ರಿಲ್ಲರ್, ಕ್ರೈಂ ಥ್ರಿಲ್ಲರ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿ ವಿಜಯ್ ಆಂಟೋನಿ ಗಮನ ಸೆಳೆದವರು. 'ಪಿಚ್ಚೈಕ್ಕಾರನ್' ಸಿನಿಮಾದಲ್ಲಿ ನಟಿಸಿ ಪರಭಾಷಾ ಪ್ರೇಕ್ಷಕರನ್ನು ತಲುಪಿದವರು. 3 ವರ್ಷಗಳ ಹಿಂದೆ ವಿಜಯ್ ಆಂಟೋನಿ ಮಗಳು ಮೀರಾ ಆತ್ಮಹತ್ಯೆಗೆ ಶರಣಾಗಿದ್ದಳು. ಶಾಲೆಯಲ್ಲಿ ಓದುತ್ತಿದ್ದ 16ರ ಹರೆಯದ ಕಾರಣಾಂತರಗಳಿಂದ ಈ ನಿರ್ಧಾರಕ್ಕೆ ಬಂದಿದ್ದಳು. ಹೈಸ್ಕೂಲ್ ಓದುತ್ತಿದ್ದ ಮಗಳು ಏಕಾಏಕಿ ಬಿಟ್ಟು ಹೊರಟು ಹೋಗಿದ್ದಳು. ಮಗಳ ಅಗಲಿಕೆ ನೋವಿನಿಂದ ವಿಜಯ್ ಹಾಗೂ ಪತ್ನಿ ಫಾತಿಮಾ ಇವತ್ತಿಗೂ ಹೊರಬಂದಿಲ್ಲ.
ಸಾಕಷ್ಟು ದಿನಗಳಿಂದ ವಿಜಯ್ ಆಂಟೋನಿ ಹೀಗೆ ಚಪ್ಪಲಿ ಧರಿಸದೇ ಓಡಾಡುತ್ತಿದ್ದಾರೆ. ಯಾಕೆ ಸರ್ ಎಂದು ಕೇಳಿದ್ರೆ, ಸುಮ್ನೆ.. ಒಮ್ಮೆ ಚಪ್ಪಲಿ ಇಲ್ಲದೇ ಓಡಾಡಿದೆ. ಚೆನ್ನಾಗಿದೆ ಅನ್ನಿಸ್ತು.. ಅದನ್ನೇ ಮುಂದುವರೆಸಿದೆ ಎನ್ನುತ್ತಿದ್ದರು. ಆದರೆ ಅಸಲಿ ಸಂಗತಿಯನ್ನು ಇದೀಗ ಪತ್ನಿ ಫಾತಿಮಾ ಬಿಚ್ಚಿಟ್ಟಿದ್ದಾರೆ. 'ಅಪ್ಪ ಕುಟ್ಟಿ' ಎಂಬ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಕಾರ್ಯಕ್ರಮವೊಂದರಲ್ಲಿ ಪತ್ನಿ ಸಮೇತ ಭಾಗಿ ಆಗಿದ್ದರು.
ವೇದಿಕೆಯಲ್ಲಿ ಫಾತಿಮಾ ಮಾತನಾಡುವಾಗ ವಿಜಯ್ ಚಪ್ಪಲಿ ಯಾಕೆ ಧರಿಸಲ್ಲ ಗೊತ್ತಾ ಎಂದು ಹೇಳಲು ಮುಂದಾಗಿದ್ದರು. ಎದುರಿಗೆ ಕೂತ ವಿಜಯ್ ಬೇಡ, ಹೇಳಬೇಡ ಎಂದರು. ಆದ್ರೂ ಕೇಳದೇ ಆಕೆ ಅಸಲಿ ವಿಚಾರ ತಿಳಿಸಿದ್ದಾರೆ. "ಮೀರಾ ಅಗಲಿಕೆ ಬಳಿಕ ನಾವು ಬಹಳ ಸರಳ ಜೀವನ ಸಾಗಿಸುತ್ತಿದ್ದೇವೆ. ಚಿಕ್ಕ ಮಗಳಿಗೂ ಅದನ್ನೇ ಹೇಳುತ್ತೇವೆ.. ಅವ್ರು ಚಪ್ಪಲಿ ಹಾಕದೇ ಓಡಾಡಲು ಯಾರಿಗೂ ಕಾರಣ ಗೊತ್ತಿಲ್ಲ.. ಮೀರಾ ಬಳಿ 50ರಿಂದ 100 ಜೊತೆ ಚಪ್ಪಲಿ, ಶೂ ಇತ್ತು.. ಲಂಡನ್, ಯುಸ್ಎಸ್ ಹೀಗೆ ಬೇರೆ ದೇಶಗಳಿಂದ ತರಿಸಿದ್ದು.. ಅವಳು ಕಾಲೇಜಿಗೆ ಹೋಗ್ತಾಳೆ ಅಂತ ಕೊಡಿಸಿದ್ದು.. ಅದೆಲ್ಲಾ ಹಂಗೇ ಇದೆ.. ಅದನ್ನೆಲ್ಲಾ ನೋಡಿ ಅವತ್ತೇ ವಿಜಯ್ ಇನ್ನು ಮುಂದೆ ನಾನು ಚಪ್ಪಲಿ, ಶೂ ಧರಿಸಲ್ಲ ಎಂದು ನಿರ್ಧರಿಸಿದ್ರು" ಎಂದು ಫಾತಿಮಾ ವಿವರಿಸಿದ್ದಾರೆ.
ವಿಜಯ್ ಸಂಗೀತ ನಿರ್ದೇಶಕರು. ದೇಶ ವಿದೇಶಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸುತ್ತಾರೆ.. ಆಗ ಮಾತ್ರ ಶೂ ಧರಿಸುತ್ತಾರೆ. ಶೋ ಮುಗಿದಮೇಲೆ ತೆಗೆದುಬಿಡ್ತಾರೆ.. ವಿದೇಶಗಳಲ್ಲಿ ಕೂಡ ಬರಿಗಾಲಿನಲ್ಲೇ ವಿಜಯ್ ಓಡಾಡುತ್ತಾರೆ ಎಂದು ತಿಳಿಸಿದ್ದಾರೆ.