ಒಂದೇ ಸಿನಿಮಾದಲ್ಲಿ ನಟಿಸಿದವರು ಒಂದೇ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದವರು ಪ್ರೀತಿಸಿ ಮದುವೆ ಆಗುವುದು ಹೊಸದೇನು ಅಲ್ಲ. 'ಅಮೃತಧಾರೆ' ಕನ್ನಡ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದ ರಾಣವ್ ಗೌಡ ಹಾಗೂ ರಾಧಾ ಭಗವತಿ ಇದೀಗ ಹಸೆಮಣೆ ಏರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ಜೀ ಕನ್ನಡ ವಾಹಿನಿಯ 'ಅಮೃತಧಾರೆ' ಧಾರಾವಾಹಿ ವೀಕ್ಷಕರು ಮನಗೆದ್ದಿದ್ದು ಗೊತ್ತೇಯಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅದೇ ಧಾರಾವಾಹಿಯಲ್ಲಿ ಜೈದೇವ್ ಆಗಿ ನೆಗೆಟಿವ್ ಪಾತ್ರದಲ್ಲಿ ರಾಣವ್ ಗೌಡ ನಟಿಸಿದ್ದರು. ಇನ್ನು ಮಲ್ಲಿ ಎಂಬ ಮುಗ್ಧ ಹುಡುಗಿಯಾಗಿ ರಾಧಾ ನಟಿಸಿದ್ದರು. ಧಾರಾವಾಹಿ ಸಮಯದಲ್ಲಿ ಶುರುವಾಗಿದ್ದ ಇಬ್ಬರ ಪರಿಚಯ, ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಜೋಡಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರಾಣವ್ ಕೂಲಿ ಕೆಲಸ ಮಾಡಿಕೊಂಡು ಮೇಲೆ ಬಂದವರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ' ಧಾರಾವಾಹಿ ಮೂಲ ಕಿರುತೆರೆ ಪ್ರವೇಶಿಸಿದ್ದರು. ಬಳಿಕ ಕೆಲ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಧಾರಾವಾಹಿಗಳಲ್ಲಿ ನೆಗೆಟಿವ ರೋಲ್ ಮಾಡಿದ್ದೇ ಹೆಚ್ಚು. ಇನ್ನು ನೃತ್ಯ ಹಾಗೂ ಸಂಗೀತದಲ್ಲಿ ಚಿಕ್ಕಂದಿನಿಂದ ಆಸಕ್ತ ಬೆಳೆಸಿಕೊಂಡವರು ರಾಧಾ ಭಗವತಿ. 'ರಾಮಾಚಾರಿ' ಆಕೆ ನಟಿಸಿದ ಮೊದಲ ಧಾರಾವಾಹಿ. ಆದರೆ 'ಅಮೃತಧಾರೆ' ಧಾರಾವಾಹಿಯ ಮಲ್ಲಿ ಪಾತ್ರ ದೊಡ್ಡ ಬ್ರೇಕ್ ಕೊಡ್ತು. ಬಳಿಕ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯ ನಾಯಕಿಯಾಗಿ ನಟಿಸುವಂತಾಯ್ತು.

ಅಂದಹಾಗೆ ಮೊದಲು ಪ್ರಪೋಸ್ ಮಾಡಿದ್ದು ರಾಧಾ ಭಗವತಿ. ರಾಣವ್ ಅವರ ಒಳ್ಳೆಗುಣ ಮೆಚ್ಚಿ ತಾವೇ ತಮ್ಮ ಪ್ರೀತಿ ವಿಚಾರ ಹಂಚಿಕೊಂಡಿದ್ದರಂತೆ. ಮೊನ್ನೆ ಬುಧವಾರ (​ನವೆಂಬರ್ 25)ಸಂಜೆ 6.30ರಿಂದ ರಿಸೆಪ್ಷನ್ ನಡೀತು. ನಿನ್ನೆ (ನವೆಂಬರ್ 26) ಬೆಳಗ್ಗೆ 8.45 ರಿಂದ 9.45ರ ನಡುವೆ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನೆರವೇರಿದೆ. ಅಭಿಮಾನಿಗಳು, ಆಪ್ತರು ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.