ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ನಟಿ ಜ್ಯೋತಿ ರೈ ಬಳಿಕ ತೆಲುಗು ಕಿರುತೆರೆಯಲ್ಲಿ ಕಮಾಲ್ ಮಾಡಿದರು. ಹಲವು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದ ನಟ ಇದೀಗ ಸಿನಿಮಾರಂಗಕ್ಕೆ ಬಂದಿದ್ದಾರೆ. 'ಕಿಲ್ಲರ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಜ್ಯೋತಿ ಎರಡನೇ ಮದುವೆ ಆಗಿದ್ದಾರೆ.

ಅದಾಗಲೇ ಒಂದು ಮದುವೆಯಾಗಿ ಪತಿಯಿಂದ ಜ್ಯೋತಿ ರೈ ದೂರಾಗಿದ್ದರು. ಆಕೆಗೆ ಒಬ್ಬ ಮಗ ಕೂಡ ಇದ್ದಾನೆ. ಐಟಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡಲು ಆರಂಭಿಸಿದ್ದ ಜ್ಯೋತಿ ರೈ ಬಳಿಕ ಬಣ್ಣದಲೋಕಕ್ಕೆ ಬಂದಿದ್ದರು. ಕಿರುತೆರೆಯಲ್ಲಿ ನಟಿಸುವುದರ ಜೊತೆಗೆ ನಿರೂಪಕಿಯಾಗಿ ಕೂಡ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಈಗ ನಾಯಕಿಯಾಗಿ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.

'ಕಿಲ್ಲರ್' ಸಿನಿಮಾ ಪ್ರಚಾರದ ಭಾಗವಾಗಿ ತೆಲುಗಿನಲ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಜ್ಯೋತಿ ಭಾಗವಹಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡುತ್ತಿದ್ದಾರೆ. ಎರಡನೇ ಮದುವೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಹೇಗೆ ಲವ್ ಆಯ್ತು, ಮದುವೆ ಹೇಗಾಯ್ತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕೆಲವರು ನಾನು ಹಣಕ್ಕಾಗಿ ಪೂರ್ವಜ್ ಜೊತೆ ಮದುವೆ ಆಗಿದ್ದೇನೆ ಎನ್ನುತ್ತಾರೆ. ಹಣಕ್ಕಾಗಿ ಮದುವೆ ಆಗುವಂತಿದ್ರೆ ಅಂಬಾನಿ ರೀತಿಯ ಶ್ರೀಮಂತರನ್ನೇ ಆಗ್ತಿದ್ದೆ ಎಂದು ಜ್ಯೋತಿ ಹೇಳಿದ್ದಾರೆ.

ನಾನು ಸಮಾಜಕ್ಕೆ ಹೆದರಿ ಬದುಕುವುದಿಲ್ಲ. ನನ್ನ ಆಪ್ತರಿಗೆ ಮಾತ್ರ ನಾನು ಜವಾಬ್ದಾರಳು. ಉಳಿದವರು ಯಾರು ಬಂದು ನೋಡಲ್ಲ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. "ನಾನು ಹಣ ನೋಡಿ ಮದುವೆ ಆಗಿಲ್ಲ. ಆತನ ಅಕೌಂಟ್‌ನಲ್ಲಿ ಎಷ್ಟಿದೆ ನಿಮಗೆ ಗೊತ್ತಾ.. ಶ್ರೀಮಂತರು ಅಂದ್ರೆ ಬೇರೆಯವರು ಸಾಕಷ್ಟು ಜನ ಇದ್ದಾರೆ. 18, 19, 20ನೇ ವಯಸ್ಸಿನಲ್ಲಿ ಆ ರೀತಿ ಆಕರ್ಷಣೆಗೆ ಮದುವೆ ಆಗಬಹುದು. ಆದ್ರೆ ಜೀವನದಲ್ಲಿ ಸಾಕಷ್ಟು ಅನುಭವಿಸಿದ ಬಳಿಕ ಯಾರನ್ನೋ ಆಯ್ಕೆ ಮಾಡಿಕೊಳ್ಳಲ್ಲ" ಎಂದು ಜ್ಯೋತಿ ಪೂರ್ವಜ್ ಹೇಳಿದ್ದಾರೆ.

ಪೂರ್ವಜ್ ಮಾತನಾಡುವ ರೀತಿ ಬಹಳ ಇಷ್ಟ. ಬಹಳ ಸಾಮಾನ್ಯರಂತೆ ಇರ್ತಾರೆ. ಕೊಂಚ ಆಧ್ಯಾತ್ಮದ ಪ್ರಭಾವ ಕೂಡ ಇದೆ. ಅವ್ರು ನನ್ನನ್ನು ನೋಡಿಕೊಳ್ಳಬೇಕು ಎಂದು ನಾನು ಮದುವೆ ಆಗಿಲ್ಲ. ನನ್ನ ಬೆಂಬಲಕ್ಕೆ ನಿಲ್ಲುವ ವ್ಯಕ್ತಿ ಬೇಕಿತ್ತು. ಕಷ್ಟ ಅಂದಾಗ ಹೆಗಲು ಕೊಡಲು ಬಾಳ ಸಂಗಾತಿ ಬೇಕಿತ್ತು. ಅದು ಬಿಟ್ಟು ಯಾರೊಬ್ಬರ ಮೇಲೆ ಯಾರು ಅವಲಂಬಿತರಾಗಿಲ್ಲ. ಒಟ್ಟಿಗೆ ಕೆಲಸ ಮಾಡ್ತೀವಿ, ಒಟ್ಟಿಗೆ ಬೆಳೆಯುತ್ತೇವೆ. ನನಗೆ ಕಷ್ಟ ಇದ್ದಾಗ ಯಾರು ಕೇಳಲಿಲ್ಲ, ಅವ್ರನ್ನ ಕೇಳಿ ನಾನು ನಿರ್ಧಾರ ತೆಗೆದುಕೊಳ್ಳಬೇಕಿಲ್ಲ ಎಂದು NTV ನ್ಯೂಸ್ ಸಂದರ್ಶನದಲ್ಲಿ ಜ್ಯೋತಿ ಪೂರ್ವಜ್ ಹೇಳಿದ್ದಾರೆ.

ನಾನು ಸಂಪಾದಿಸಿ ತಂದಾಗ ಆರಾಮಾಗಿ ಅನುಭವಿಸುತ್ತಿದ್ದರು. ನನ್ನ ಕಷ್ಟ ಕೇಳಲಿಲ್ಲ. ಕೊನೆಗೊಂದು ದಿನ ಅವರ ನಿಜಬಣ್ಣ ಗೊತ್ತಾಯ್ತು. ಅದರಿಂದ ಬಹಳ ನೋವಾಯ್ತು. ಅಪ್ಪ, ಅಮ್ಮ ಹೇಗಿದ್ರು ಇಲ್ಲ. ನಮ್ಮ ಅಂಕಲ್ ಒಬ್ರು ಮಾತ್ರ ನನ್ನ ಜೊತೆ ಬೆಂಬಲವಾಗಿ ನಿಂತ್ರು. ಅವ್ರು ಮಾತ್ರ ಸರಿಯಾಗಿ ನೋಡಿ ನಿರ್ಧಾರ ತೆಗೆದುಕೋ ಅಂದ್ರು. ನಾನು ಹಸಿದಾಗ ಸಮಾಜ ಬಂದು ಕೇಳಲಿಲ್ಲ, ಕಷ್ಟ ಎಂದಾಗ ಸಹಾಯಕ್ಕೆ ಬರಲಿಲ್ಲ. ಹಾಗಿದ್ದ ಮೇಲೆ ಸಮಾಜದ ಬಗ್ಗೆ ಯಾಕೆ ಯೋಚಿಸಬೇಕು. ಏನಾದರೂ ತಪ್ಪು ಮಾಡುವಾಗ ಸಮಾಜಕ್ಕೆ ಹೆದರಬೇಕು ಇಲ್ಲದಿದ್ದರೆ ಯಾಕೆ ಹೆದರಬೇಕು ಎಂದು ಜ್ಯೋತಿ ಪೂರ್ವಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡನೇ ಮದುವೆ ಯೋಚಿಸಿದಾಗ ಯಾರೊಬ್ಬರು ನನ್ನನ್ನು ತಡೆಯಲಿಲ್ಲ. ಕುಟುಂಬದವರು ವಿರೋಧಿಸಿದ್ರೆ ಮಾತ್ರ ಸಮಸ್ಯೆ. ಇಲ್ಲದಿದ್ದರೆ ಯಾರಿಗೂ ಹೆದರಬೇಕಿಲ್ಲ. ನಾನು ಸ್ವಂತಂತ್ರವಾಗಿ ಬದುಕುತ್ತಿದ್ದೇನೆ, ಒಂದು ವೇಳೆ ಸಾಂಸಾರಿಕ ಜೀವನದಲ್ಲಿ ಏನಾದ್ರು ಸಮಸ್ಯೆ ಆದ್ರು ಮತ್ತೆ ಹೋಗಿ ಯಾರ ಮುಂದೆ ನಿಲ್ಲುವ ಪ್ರಮೇಯ ಇಲ್ಲ. ಒಂದು ಸಮಯದಲ್ಲಿ ಮಾನಸಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೆ. ಯಾರು ಕೂಡ ಕಷ್ಟ ಕೇಳಲಿಲ್ಲ. ಪ್ರಪಂಚದಲ್ಲಿ ನಾನೊಬ್ಬಳೇ ಎರಡನೇ ಮದುವೆ ಆಗಿಲ್ಲ, ಸಾಕಷ್ಟು ಜನ ಆಗ್ತಿದ್ದಾರೆ. ಮೂರು ನಾಲ್ಕು ಮದುವೆ ಆಗುವವರು ಇದ್ದಾರೆ. ಎಲ್ಲರಿಗೂ ಅವರದ್ದೇ ಕಾರಣ ಇರುತ್ತೆ. ಮಾನಸಿಕವಾಗಿ ನೊಂದಿದ್ದಾಗ ಬೆಂಬಲಕ್ಕೆ ಪೋಷಕರು ಇಲ್ಲ, ಆ ವ್ಯಕ್ತಿ(ಮೊದಲ ಪತಿ) ಕೂಡ ಜೀವಂತವಾಗಿ ಇಲ್ಲ. ಹಾಗಾಗಿ ಮಾತಾಡಲ್ಲ. ಯಾರನ್ನೋ ಬಿಟ್ಟು ಮದುವೆ ಆಗಿದ್ದಲ್ಲ. ಇನ್ನು ಬದುಕಲು ಸಾಧ್ಯವಿಲ್ಲ ಎಂದುಕೊಂಡಾಗ ಅದನ್ನೆಲ್ಲಾ ಮೀರಿ ಹೊರ ಬಂದೆ ಆಗ ಸುಕು ಪೂರ್ವಜ್ ಸಿಕ್ಕರು ಎಂದು ಜ್ಯೋತಿ ಹೇಳಿದ್ದಾರೆ.

ಲವ್ ಸ್ಟೋರಿ ಬಗ್ಗೆ ಜ್ಯೋತಿ ರೈ ಮಾತನಾಡಿ ಚಿತ್ರೀಕರಣದ ವೇಳೆ ಸುಕು ಪೂರ್ವಜ್ ಸಿಕ್ಕರು. 15 ದಿನ ಮಗನನ್ನು ಬಿಟ್ಟು ಚಿತ್ರೀಕರಣದಲ್ಲಿ ಇದ್ದೆ. ಇನ್ನು ಎರಡು ದಿನ ಚಿತ್ರೀಕರಣ ಮಾಡಬೇಕು ಅಂತ ಸುಕು ಪೂರ್ವಜ್ ಹೇಳಿದ್ರು. ಆಗ ನನ್ನ ಕಷ್ಟ ಹೇಳಿದೆ. ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡರು. ಹೀಗೆ ನಮ್ಮ ಸ್ನೇಹ ಮುಂದುವರೀತು. ಕೊನೆಗೆ ಮದುವೆ ಆಗ್ತೀರಾ ಅಂತ ಕೇಳಿದ್ರು. ಮೊದಲಿಗೆ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಿಜವಾಗಿ ನನ್ನ ಮದುವೆ ಆಗ್ತೀರಾ ಅಂದಾ ಕುತ್ತಿಗೆಯಲ್ಲಿ ಸರವನ್ನು ತೆಗೆದು ನನ್ನ ಕುತ್ತಿಗೆಗೆ ಹಾಕಿದ್ರು. ಹೀಗೆ ನಮ್ಮ ಜರ್ನಿ ಶುರುವಾಯ್ತು ಎಂದು ವಿವರಿಸಿದ್ದಾರೆ.