ಕನ್ನಡ ಕಿರುತೆರೆ ನಟಿ ಅಮೂಲ್ಯ ಭಾರಧ್ವಜ್ ತಮ್ಮ ಪತಿ ಹರ್ಷಿತ್ ಪೊರೆಚಾ ಅವರನ್ನು ಪರಿಚಯಿಸಿದ್ದಾರೆ. ತಮ್ಮ ಮದುವೆ ಆಗಿ ಪತಿ ಜೊತೆಗಿನ ಪ್ರವಾಸದ ಒಂದಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

"ನನ್ನ ಪತಿಯ ಕಾರಣದಿಂದಾಗಿ, ನನ್ನ ಜೀವನವು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸುಂದರವಾಗಿದೆ. ಅವರೊಂದಿಗೆ ಈ ಜೀವನವನ್ನು ಹಂಚಿಕೊಳ್ಳಲು ಸಿಕ್ಕ ಅವಕಾಶಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ. ನಾನು ಯಾವಾಗಲೂ ನನ್ನ ಪತಿಯ ಪ್ರೀತಿಯ ಸಂಗಾತಿಯಾಗಿರುತ್ತೇನೆ" ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

ತಮ್ಮ ಹೆಸರನ್ನು ಕೂಡ ಅಮೂಲ್ಯ ಹರ್ಷಿತ್ ಪೊರೆಚಾ ಎಂದು ಬದಲಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅದನ್ನು ಗಮನಿಸಬಹುದು. ಮದುವೆ ಯಾವಾಗ ಆಯ್ತು ಎನ್ನುವ ಬಗ್ಗೆ ಅಮೂಲ್ಯ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇಬ್ಬರ ಮದುವೆ ಫೋಟೊ ವೈರಲ್ ಆಗ್ತಿದೆ.

ಮೊದಲಿಗೆ 'ಶಾಂತಂ ಪಾಪಂ' ಧಾರಾವಾಹಿಯಲ್ಲಿ ಅಮೂಲ್ಯ ಸಣ್ಣದೊಂದು ಪಾತ್ರ ಮಾಡಿದ್ದರು. 'ದಾಸ ಪುರಂದರ' ಧಾರಾವಾಹಿಯಲ್ಲಿ ಸರಸ್ವತಿಯಾಗಿ ಗಮನ ಸೆಳೆದಿದ್ದರು. ಇನ್ನು 'ಬೃಂದಾವನ' ಧಾರಾವಾಹಿಯಲ್ಲಿ ಪುಷ್ಪ ಆಗಿ ನಟಿಸಿದ್ದ ಚೆಲುವೆ ಈಗ 'ಪವಿತ್ರ ಬಂಧನ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

'ವಂಟಲಕ್ಕ' ಎಂಬ ತೆಲುಗು ಧಾರಾವಾಹಿಯಲ್ಲಿ ವೈಷ್ಣವಿ ಮತ್ತು ವಾನಿಲಾ ಆಗಿ ದ್ವಿಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು. ಇನ್ನು ಮದುವೆ ಬಗ್ಗೆ ಮಾಹಿತಿ ನೀಡಿರುವ ಚೆಲುವೆ ತಮ್ಮ ಪತಿಯ ಹಿನ್ನೆಲೆ ಏನು ಎಂದು ತಿಳಿಸಿಲ್ಲ. ಮೈಸೂರು ಮೂಲದ ಅಮೂಲ್ಯ ಬಿಕಾಂ ಪದವೀಧರೆ.

'ಪವಿತ್ರ ಬಂಧನ' ಧಾರಾವಾಹಿಯಲ್ಲಿ ಸೂರಜ್ ಸಿಂಗ್ ಜೋಡಿಯಾಗಿ ಅಮೂಲ್ಯ ನಟಿಸುತ್ತಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿದ್ದ ಸೂರಜ್ ಬಳಿಕ ಈ ಧಾರಾವಾಹಿಯಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಹೀರೊಯಿನ್ ಆಗಿ ಅಮೂಲ್ಯ ಸಾಥ್ ಸಿಕ್ಕಿದೆ. ಸದ್ಯ ಅಮೂಲ್ಯ ಪತಿ ಜೊತೆ ದುಬೈ ಪ್ರವಾಸದಲ್ಲಿದ್ದಾರೆ.