ಇತ್ತೀಚೆಗೆ ಡಿವೋರ್ಸ್ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇಲ್ಲವಿಲ್ಲದೇ ಜೊತೆಯಾಗಿ ಬಾಳುವುದು ಯಾಕೆ ಎಂದು ಸತಿ-ಪತಿ ತಮ್ಮ ತಮ್ಮ ದಾರಿ ನೋಡಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆಯರ ಡಿವೋರ್ಸ್ ವಿಚಾರ ಮಾತ್ರ ದೊಡ್ಡ ಸುದ್ದಿ ಆಗ್ತಿದೆ. ಕನ್ನಡ ಕಿರುತೆರೆ ನಟಿ ಐಶ್ವರ್ಯ ಪಿಸ್ಸೆ ಹಾಗೂ ಪತಿ ಹರಿ ವಿನಯ್ ದೂರಾಗಿದ್ದಾರೆ.
ಒಂದೂವರೆ ವರ್ಷದಿಂದ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದ ವಿನಯ್ ಹಾಗೂ ಐಶ್ವರ್ಯ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಮೊನ್ನೆ ಮೊನ್ನೆ ಮದುವೆಯಾದಂತೆ ಇದ್ದ ಜೋಡಿ ಹೀಗೆ ದೂರಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
'ಪುನರ್ ವಿವಾಹ', 'ಅನುರೂಪ, 'ಗಿರಿಜಾ ಕಲ್ಯಾಣ' ಹಾಗೂ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಗಳಲ್ಲಿ ಐಶ್ವರ್ಯ ಪಿಸ್ಸೆ ನಟಿಸಿದ್ದರು. ಪ್ರಸ್ತುತ ಸನ್ ಉದಯ ವಾಹಿನಿಯ 'ಮಾಂಗಲ್ಯ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. 7 ವರ್ಷಗಳ ಹಿಂದೆ ಮೈಸೂರು ಮೂಲದ ಹರಿ ವಿನಯ್ ಜೊತೆ ಐಶ್ವರ್ಯ ಹಸೆಮಣೆ ಏರಿದ್ದರು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರಿಗೆ ಅನುಮಾನ ಮೂಡಿತ್ತು. ಇದೀಗ ಸ್ವತಃ ಐಶ್ವರ್ಯ ಸ್ಪಷ್ಟನೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರ ಪರೆದು ಐಶ್ವರ್ಯ ತಮ್ಮ ಡಿವೋರ್ಸ್ ವಿಚಾರ ಖಚಿತಪಡಿಸಿದ್ದಾರೆ. "ನನ್ನ ವೈಯಕ್ತಿಕ ಜೀವನದ ಸುತ್ತ ಹರಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ. ನಾನು ಮತ್ತು ನನ್ನ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಸಾಕಷ್ಟು ಯೋಚನೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ, ನಾವು ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆದಿದ್ದೇವೆ . ಇದು ನಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಂತದಲ್ಲಿ ನಮಗೆ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸಿ, ನಮ್ಮ ಆಯ್ಕೆಯನ್ನು ಎಲ್ಲರೂ ಮಾನ್ಯ ಮಾಡಬೇಕೆಂದು ವಿನಂತಿಸುತ್ತೇನೆ" ಎಂದಿದ್ದಾರೆ.
ವೀವ್ಸ್, ಫಾಲೋವರ್ಸ್, ಲೈಕ್ಸ್ ಅಥವಾ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೋಗಳನ್ನು ಪ್ರಕಟಿಸುವುದು, ಆಧಾರರಹಿತ ಆರೋಪಗಳನ್ನು ಮಾಡುವುದು, ನನ್ನ ಧಾರಾವಾಹಿಯ ದೃಶ್ಯಗಳನ್ನು ಸಂದರ್ಭಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಬಳಸುವುದು ಅಥವಾ ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲ. ದಯವಿಟ್ಟು ತೆರೆಯ ಮೇಲಿನ ಜೀವನಕ್ಕೂ ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಐಶ್ವರ್ಯ ಮನವಿ ಮಾಡಿದ್ದಾರೆ.